ಬೆಂಗಳೂರು, ಮೇ 28: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಅವಧಿಗೆ ಸಿಎಂ ಆಗಿದ್ದ ಸಿದದ್ದರಾಮಯ್ಯ ಒಟ್ಟು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ದಾಖಲೆ ಬರೆದಿದ್ದಾರೆ. 1983ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ್ದ ಇವರು, ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ‘ಅಹಿಂದ’ ವರ್ಗಗಳ ಪ್ರಮುಖ ನಾಯಕರಾಗಿ ಗುರುತಿಸಿಕೊಂಡವರು.
ಸಿದ್ದರಾಮಯ್ಯ ರಾಜಕೀಯದ ಹಾದಿ
- ಮೈಸೂರಿನ ಸಿದ್ದರಾಮನಹುಂಡಿಯವರಾದ ಸಿದ್ದರಾಮಯ್ಯನವರು, 1983ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
- ಜನತಾ ಪಕ್ಷದ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಪಶುಸಂಗೋಪನೆ ಮುಂತಾದ ಖಾತೆಗಳನ್ನು ನಿರ್ವಹಿಸಿದ್ದರು.
- ಜೆ.ಎಚ್. ಪಟೇಲ್ (1996 ರಿಂದ 1999) ಮತ್ತು ಧರಂಸಿಂಗ್ (2004 ರಿಂದ 2005) ಅವರ ಸರ್ಕಾರಗಳಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
- 2008-2013 ಮತ್ತು 2019-2023ರ ಅವಧಿಯಲ್ಲಿದ್ದ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ವಿಪಕ್ಷ ನಾಯಕನಾಗಿ ಕೆಲಸ.
- 2013-2018 ಮತ್ತು 2023ರಿಂದ ಇಂದಿನವರೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಿ ಸುದೀರ್ಘ ಸೇವೆ.
9 ಬಾರಿ ವಿಧಾನ ಸಭೆಗೆ ಪ್ರವೇಶ
ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಟ್ಟು 9 ಬಾರಿ ಕರ್ನಾಟಕ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ಪಕ್ಷೇತರ), 1985ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ಜನತಾ ಪಕ್ಷ), 1994ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ಜನತಾ ದಳ), 2004ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ಜೆಡಿಎಸ್), 2006ರ ಉಚ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು, 2008, 2013 ವರುಣಾ ಕ್ಷೇತ್ರ (ಕಾಂಗ್ರೆಸ್), 2018ರಲ್ಲಿ ಬಾದಾಮಿ ಕ್ಷೇತ್ರ (ಕಾಂಗ್ರೆಸ್), 2023ರಲ್ಲಿ ಪುನಃ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ನಿಂದಲೇ ಸ್ಪರ್ಧಿಸಿ ಗೆದ್ದಿದ್ದರು.
ಇದನ್ನೂ ಓದಿ: ರಾಜೀನಾಮೆಗೂ ಮುನ್ನವೇ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ
ರಾಜಕೀಯ ತಿರುವು
ಜೆಡಿಎಸ್ನಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ಸಿದ್ದರಾಮಯ್ಯ, ಹೆಚ್.ಡಿ. ದೇವೇಗೌಡರ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ 2005ರಲ್ಲಿ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ಆ ಬಳಿಕ ಬೆಂಗಳೂರಲ್ಲಿ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದರು. 2006ರ ಉಪಚುನಾವಣೆ ಕಾಂಗ್ರೆಸ್ನಿಂದ ವರುಣಾ ಕ್ಷೇತ್ರದಲ್ಲಿ ಸ್ಫರ್ಧಿಸಿದ್ದ ಇವರು ಜೆಡಿಎಸ್ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ್ದರು. 2008ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಮರು ಆಯ್ಕೆಯಾದರು. 2013ರಲ್ಲಿಯೂ ಇದೇ ಕ್ಷೇತ್ರದಿಂದ ಗೆದ್ದು ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಆ ಬಳಿಕ 2018ರಲ್ಲಿ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳ ಪೈಕಿ ಬಾದಾಮಿಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಅಲ್ಪ ಅಂತರದ ಗೆಲುವು ದಾಖಲಿಸಿದ್ದರು. ಬಳಿಕ 2023ರ ಚುನಾವಣೆಯಲ್ಲಿ ಪುನಃ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವಿನ ನಗೆ ಬೀರುವ ಮೂಲಕ ರಾಜ್ಯದಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಕಾಂಗ್ರೆಸ್ ನೇತೃತ್ವದ ರಾಜದಯ ಸರ್ಕಾರದ ಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.