Headlines

ಸಂಪೂರ್ಣ ಎಥನಾಲ್ ಇಂಧನದಲ್ಲಿ ಓಡಬಲ್ಲ ಭಾರತದ ಮೊದಲ ಪ್ಯಾಸೆಂಜರ್ ಕಾರು ಬಿಡುಗಡೆ – Kannada News

ನವದೆಹಲಿ, ಜೂನ್ 4: ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki), ದೇಶದ ಮೊದಲ 100% ಎಥನಾಲ್ ಆಧಾರಿತ ‘ಫ್ಲೆಕ್ಸ್ ಫ್ಯುಯೆಲ್’ (Flex-Fuel) ಕಾರು ವ್ಯಾಗನ್ಆರ್ (WagonR) ಅನ್ನು ಬಿಡುಗಡೆ ಮಾಡಿದೆ. ಇದು ಭಾರತದ ಆಟೋಮೊಬೈಲ್ ಇತಿಹಾಸದಲ್ಲೇ 100% ಶುದ್ಧ ಎಥನಾಲ್ (E100) ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಮೊದಲ ಮಾಸ್-ಮಾರ್ಕೆಟ್ (ಸಾಮಾನ್ಯ ಜನರಿಗಾಗಿ ಬಿಡುಗಡೆಯಾದ) ಪ್ಯಾಸೆಂಜರ್ ಕಾರ್ ಆಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸಮ್ಮುಖದಲ್ಲಿ ಈ ಕಾರನ್ನು ಅನಾವರಣಗೊಳಿಸಲಾಯಿತು. ಈ ಫ್ಲೆಕ್ಸ್ ಫ್ಯುಯೆಲ್ ಇಂಜಿನ್ ಅನ್ನು ಶೇ. 20 ರಿಂದ ಹಿಡಿದು ಶೇ. 100 ರಷ್ಟು ಎಥನಾಲ್ ಮಿಶ್ರಣದ ಇಂಧನದಲ್ಲೂ ಸುಲಭವಾಗಿ ಚಲಿಸುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಇಂಜಿನ್‌ನ ಫ್ಯುಯೆಲ್ ಲೈನ್‌ಗಳು, ಇಂಜೆಕ್ಟರ್‌ಗಳು ಮತ್ತು ಸೀಲ್‌ಗಳನ್ನು ತುಕ್ಕು ನಿರೋಧಕವಾಗಿ (Corrosion-resistant) ಮಾರ್ಪಡಿಸಲಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು

ಸಾಮಾನ್ಯ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಈ ಫ್ಲೆಕ್ಸ್ ಫ್ಯುಯೆಲ್ ಕಾರುಗಳ ತಯಾರಿಕಾ ವೆಚ್ಚ ಸುಮಾರು ₹40,000 ದಿಂದ ₹50,000 ದಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಫ್ಲೆಕ್ಸ್ ಫುಯೆಲ್ ಕಾರಿನಿಂದ ಲಾಭಗಳೇನು?

  • ಮಾಲಿನ್ಯ ಇಳಿಕೆ: ಎಥನಾಲ್ ಪರಿಸರಸ್ನೇಹಿ ಇಂಧನವಾಗಿದ್ದು, ಇದು ಪೆಟ್ರೋಲ್‌ಗಿಂತ ಅತ್ಯಂತ ಕಡಿಮೆ ಪ್ರಮಾಣದ ಇಂಗಾಲದ ಹೊರಸೂಸುವಿಕೆಯನ್ನು (Carbon emissions) ಹೊಂದಿರುತ್ತದೆ. ಇದರಿಂದ ಮಹಾನಗರಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ.
  • ಆಮದು ವೆಚ್ಚದ ಉಳಿತಾಯ: ಪ್ರಸ್ತುತ ಭಾರತವು ತನ್ನ ತೈಲ ಅಗತ್ಯದ 87% ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ದೇಶೀಯವಾಗಿ ಎಥನಾಲ್ ಬಳಕೆ ಹೆಚ್ಚಾದಂತೆ ಕಚ್ಚಾ ತೈಲದ ಆಮದು ಕಡಿಮೆಯಾಗಿ, ದೇಶದ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.
  • ರೈತರಿಗೆ ಆರ್ಥಿಕ ಬಲ: ಎಥನಾಲ್ ಅನ್ನು ಕಬ್ಬಿನ ಕಾಕಂಬಿ (Molasses), ಜೋಳ, ನುಚ್ಚಕ್ಕಿ ಮತ್ತು ಕೃಷಿ ತ್ಯಾಜ್ಯಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ತಂತ್ರಜ್ಞಾನದಿಂದ ದೇಶದ ರೈತರ ಆದಾಯ ಹೆಚ್ಚಾಗಲಿದ್ದು, ಗ್ರಾಮೀಣ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ?

ಇಂಧನ ಲಭ್ಯತೆಯ ಸವಾಲು

ಪ್ರಸ್ತುತ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಸಿದ್ಧವಾಗಿದ್ದರೂ, ದೇಶಾದ್ಯಂತ 100% ಎಥನಾಲ್ ಇಂಧನ ಸಿಗುವ ಪಂಪ್‌ಗಳ ಕೊರತೆಯಿದೆ. ಸದ್ಯಕ್ಕೆ ದೆಹಲಿ ಮತ್ತು ಮುಂಬೈ-ನಾಗ್ಪುರ ಕಾರಿಡಾರ್‌ಗಳಲ್ಲಿ ಕೇವಲ 50 ರಿಂದ 100 ಬಂಕುಗಳಲ್ಲಿ ಮಾತ್ರ ಇಂತಹ ಇಂಧನ ಲಭ್ಯವಿದೆ. ಆದರೆ, ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಇಂತಹ ಸುಮಾರು 5,000 ಫುಯೆಲ್ ಸೆಂಟರ್​ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *