Headlines

ರಿಸರ್ವ್ ಬ್ಯಾಂಕ್ ಎಂಪಿಸಿ ಸಭೆ; ರೆಪೋ ದರ ಇಳಿಕೆಯಾಗುತ್ತಾ? ಶುಕ್ರವಾರ ನಿರ್ಧಾರ ಪ್ರಕಟಿಸಲಿದ್ದಾರೆ ಆರ್​ಬಿಐ ಗವರ್ನರ್ – Kannada News

ನವದೆಹಲಿ, ಜೂನ್ 4: ತೈಲ ಬಿಕ್ಕಟ್ಟು ಮುಂದುವರಿದಿರುವುದು, ಹಾಗು ಹಣದುಬ್ಬರ ಒತ್ತಡ ಎದುರಿಸುತ್ತಿರುವುದು, ಈ ಪರಿಸ್ಥಿತಿಯಲ್ಲಿ ಎಲ್ಲರ ಚಿತ್ತ ಆರ್​ಬಿಐನ ಎಂಪಿಸಿ ಸಭೆ ಮೇಲೆ ನೆಟ್ಟಿದೆ. ನಿನ್ನೆ (ಜೂನ್ 3) ಆರಂಭವಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್​ನ (RBI) ಹಣಕಾಸು ನೀತಿ ಸಮಿತಿ (MPC) ಸಭೆಯ ನಿರ್ಧಾರಗಳು ಜೂನ್ 5ರಂದು ಹೊರಬರಲಿವೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರೆಪೋ ದರ (Repo Rate) ಮತ್ತು ಇತರ ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

ರೆಪೋ ದರದಲ್ಲಿ ಬದಲಾವಣೆ ಇಲ್ಲ?

ಹೆಚ್ಚಿನ ಆರ್ಥಿಕ ತಜ್ಞರು ಮತ್ತು ಎಸ್‌ಬಿಐ (SBI) ರಿಸರ್ಚ್ ವರದಿಗಳ ಪ್ರಕಾರ, ಆರ್‌ಬಿಐ ಈ ಬಾರಿಯೂ ಸಹ ರೆಪೋ ದರವನ್ನು ಶೇ. 5.25 ಮಟ್ಟದಲ್ಲೇ ಮುಂದುವರಿಸುವ (ಯಾವುದೇ ಬದಲಾವಣೆ ಮಾಡದ) ಸಾಧ್ಯತೆಯಿದೆ.

ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಭೀತಿಯಿಂದಾಗಿ ಆರ್‌ಬಿಐ ಸದ್ಯಕ್ಕೆ ದರ ಕಡಿತ ಮಾಡುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎನ್ನಲಾಗಿದೆ. ಹಾಗೆಯೆ, ಆರ್‌ಬಿಐ ತನ್ನ ‘Neutral’ (ತಟಸ್ಥ) ನಿಲುವನ್ನು ಮುಂದುವರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಂಪೂರ್ಣ ಎಥನಾಲ್ ಇಂಧನದಲ್ಲಿ ಓಡಬಲ್ಲ ಭಾರತದ ಮೊದಲ ಪ್ಯಾಸೆಂಜರ್ ಕಾರು ಬಿಡುಗಡೆ

ಸಾಮಾನ್ಯ ಜನರ ಮೇಲಾಗುವ ಪರಿಣಾಮಗಳು

ರೆಪೋ ದರದಲ್ಲಿ ಯಾವುದೇ ಕಡಿತವಾಗದಿದ್ದರೆ, ನಿಮ್ಮ ಹೋಮ್ ಲೋನ್ (ಗೃಹ ಸಾಲ), ಕಾರ್ ಲೋನ್ ಅಥವಾ ಪರ್ಸನಲ್ ಲೋನ್‌ಗಳ ಇಎಂಐ ಸದ್ಯಕ್ಕೆ ಕಡಿಮೆಯಾಗುವುದಿಲ್ಲ. ಸಾಲದ ಮೇಲಿನ ಬಡ್ಡಿ ದರಗಳು ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಬ್ಯಾಂಕುಗಳಲ್ಲಿ ನೀವು ಇಡುವ ಎಫ್‌ಡಿ (Fixed Deposit) ಗಳ ಮೇಲಿನ ಬಡ್ಡಿ ದರಗಳು ಸಹ ಸದ್ಯಕ್ಕೆ ಸ್ಥಿರವಾಗಿರಲಿವೆ. ಹೂಡಿಕೆದಾರರಿಗೆ ಬಡ್ಡಿ ದರ ಹೆಚ್ಚಳದ ನಿರೀಕ್ಷೆಯಿದ್ದರೂ, ಆರ್‌ಬಿಐ ನಿರ್ಧಾರದ ಮೇಲೆಯೇ ಇದು ನಿರ್ಧಾರವಾಗಲಿದೆ.

ಆರ್​ಬಿಐ ಮುಂದಿರುವ ಪ್ರಮುಖ ಸವಾಲುಗಳು

ಇತ್ತೀಚಿನ ದಿನಗಳಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ತೀವ್ರ ಕುಸಿತ ಕಂಡಿದೆ. ಇದನ್ನು ನಿಯಂತ್ರಿಸುವುದು ಆರ್‌ಬಿಐ ಮುಂದಿರುವ ದೊಡ್ಡ ಸವಾಲಾಗಿದೆ.

ದೇಶದಲ್ಲಿ ರೀಟೇಲ್ ಹಣದುಬ್ಬರವು ಆರ್‌ಬಿಐನ ನಿಯಂತ್ರಣ ಮಿತಿಯಲ್ಲಿದ್ದರೂ (ಶೇ. 4 ರ ಗುರಿ), ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯು ಆತಂಕ ಮೂಡಿಸುತ್ತಿದೆ. ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರ ದರವು ಶೇ. 5 ಅನ್ನು ದಾಟಬಹುದು ಎಂದು ಎಸ್​ಬಿಐ ರಿಸರ್ಚ್​ನ ತಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು

ಎಂಪಿಸಿ ಸಭೆಯಲ್ಲಿ ಈ ಹಣದುಬ್ಬರ, ಜಿಡಿಪಿ ದರಗಳು ಮುಂದಿನ ಒಂದು ವರ್ಷದಲ್ಲಿ ಎಷ್ಟಿರಬಹುದು ಎನ್ನುವ ಲೆಕ್ಕಾಚಾರವನ್ನು ಮಾಡಲಾಗಿರುತ್ತದೆ. ಅದನ್ನು ಆರ್​ಬಿಐ ಗವರ್ನರ್ ಬಹಿರಂಗಪಡಿಸಲಿದ್ದಾರೆ.

ಒಟ್ಟಾರೆ, ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯಕ್ಕೆ ರೆಪೊ ದರದಲ್ಲಿ ಬದಲಾವಣೆ ಮಾಡುವ ಮಟ್ಟಕ್ಕೆ ಕ್ರಮ ತೆಗೆದುಕೊಳ್ಳದೆ ಕಾದು ನೋಡುವ ತಂತ್ರ ಅನುಸರಿಸುವ ಸಾಧ್ಯತೆ ಇದೆ. ಜಾಗತಿಕ ತೈಲ ಬಿಕ್ಕಟ್ಟು ಶಮನಗೊಂಡ ಪಕ್ಷದಲ್ಲಿ ಮುಂಬರುವ ಎಂಪಿಸಿ ಸಭೆಗಳಲ್ಲಿ ರೆಪೋ ದರ ಕಡಿತದ ಸಾಹಸಕ್ಕೆ ಕೈಹಾಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *