ಕೇವಲ 15ನೇ ವರ್ಷಕ್ಕೆ ತನ್ನ ಆಟದ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಸದ್ದು ಮಾಡುತ್ತಿರುವ ವೈಭವ್ ಸೂರ್ಯವಂಶಿ (Vaibhav Suryavanshi), 2026 ರ ಐಪಿಎಲ್ನಲ್ಲಿ 750 ಕ್ಕೂ ಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಗೆದ್ದಿದ್ದಲ್ಲದೆ ಅತಿ ಕಡಿಮೆ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಇದರ ಜೊತೆಗೆ ಈ ಸೀಸನ್ನಲ್ಲಿ ಅತ್ಯಧಿಕ 5 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ವೈಭವ್ ಅವರ ಆಟಕ್ಕೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಮಾಜಿ ಕ್ರಿಕೆಟಿಗರು ಕೂಡ ವೈಭವ್ ಅವರ ಆಟಕ್ಕೆ ಫ್ಯಾನ್ ಆಗಿಬಿಟ್ಟಿದ್ದಾರೆ. ಪ್ರಸ್ತುತ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್, ತ್ರಿಕೋನ ಸರಣಿಗಾಗಿ ಶ್ರೀಲಂಕಾಕ್ಕೆ ಹಾರಿದ್ದಾರೆ. ಈ ಸರಣಿಯಲ್ಲಿ ವೈಭವ್ ಅವರ ಪ್ರದರ್ಶನ ಇದೇ ರೀತಿ ಮುಂದುವರೆದರೆ ಅವರಿಗೆ ಭಾರತ ಟಿ20 ತಂಡದಲ್ಲಿ ಖಾಯಂ ಸ್ಥಾನ ಖಚಿತ.
ವೈಭವ್ಗೆ ಟೆಸ್ಟ್ ತಂಡದಲ್ಲಿ ಸ್ಥಾನ?
ಆದಾಗ್ಯೂ ವೈಭವ್ ಭಾರತ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಇನ್ನು ಕಾಯಬೇಕಾಗುತ್ತದೆ. ಆದಾಗ್ಯೂ ವೈಭವ್ ಅವರ ಆಟವನ್ನು ಮೆಚ್ಚಿರುವ ಮಾಜಿ ಕ್ರಿಕೆಟಿಗರಾದ ನಾಸರ್ ಹುಸೇನ್ ಮತ್ತು ಸೈಮನ್ ಡೌಲ್ ವೈಭವ್ ಸೂರ್ಯವಂಶಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಬೇಕು ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಪ್ರಸ್ತುತ ಇಂಗ್ಲೆಂಡ್ನ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಇಯಾನ್ ವಾರ್ಡ್, ಭಾರತ ಟೆಸ್ಟ್ ತಂಡದಲ್ಲಿ ಸೂರ್ಯವಂಶಿ ಅವರನ್ನು ಆರಂಭಿಕನಾಗಿ ಆಡಿಸಬೇಕು ಎಂದರು.
ಸಚಿನ್ ತೆಂಡೂಲ್ಕರ್ಗೆ ಹೋಲಿಕೆ
ಇದಕ್ಕೆ ಪ್ರತಿಕ್ರಿಯಿಸಿದ ನಾಸರ್ ಹುಸೇನ್, ಆ ದಿನ ದೂರವಿಲ್ಲ, ನಾನು ಕೂಡ ಅದನ್ನು ಎದುರು ನೋಡುತ್ತಿದ್ದೇನೆ. ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ವೈಭವ್ಗೆ ಬಿಸಿಸಿಐ, ಭಾರತ ಟೆಸ್ಟ್ ತಂಡದಲ್ಲಿ ಜಾಗ ಮಾಡಿಕೊಡಬೇಕು ಎಂದರು. ಇತ್ತ ಸೈಮನ್ ಡೌಲ್ ಈ ಮಾತನ್ನು ಕೇಳಿ ನಕ್ಕರಾದರೂ, ನಾನು ಕೂಡ ವೈಭವ್ ಅವರ ಆಟಕ್ಕೆ ಅಭಿಮಾನಿಯಾಗಿದ್ದೇನೆ. ಅವರ ಪ್ರಸ್ತುತ ಆಟ ನನಗೆ ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ದಿನಗಳನ್ನು ನೆನಪಿಸುತ್ತದೆ ಎಂದರು. ಈ ಮೂವರ ಅಭಿಪ್ರಾಯ ಏನೇ ಇದ್ದರೂ ವೈಭವ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಇನ್ನು ಕಾಯಬೇಕಾಗಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:52 pm, Fri, 5 June 26