ಕರ್ನಾಟಕದಲ್ಲಿ ಹೆಚ್ಚುತ್ತಿದೆ ಎಚ್‌ಐವಿ ಭೀತಿ!: ಇದು ಯುವಕರಲ್ಲಿ ಹೆಚ್ಚಿದ ‘ಸಲಿಂಗ’ ಸಂಪರ್ಕದ ಎಫೆಕ್ಟ್ – Kannada News

ಬೆಂಗಳೂರು, ಜೂ.8 : ಕರ್ನಾಟಕದಲ್ಲಿ ಪುರುಷರ ನಡುವಿನ ಲೈಂಗಿಕ ಸಂಪರ್ಕದ (Male-to-Male Sexual Contact) ಕಾರಣದಿಂದಾಗಿ ಎಚ್‌ಐವಿ/ಏಡ್ಸ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಸೊಸೈಟಿ (KSAPS) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಎಚ್‌ಐವಿ ಪ್ರಕರಣಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ಜಿಗಿತ ಕಂಡಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ರಕರಣ:

2023-2024ರ ಅವಧಿಯಲ್ಲಿ: 44,581 ಪ್ರಕರಣಗಳು

2024-2025ರ ಅವಧಿಯಲ್ಲಿ: 62,664 ಪ್ರಕರಣಗಳು

2025-2026ರ ಪ್ರಸ್ತುತ ಅವಧಿಯಲ್ಲಿ: 66,606 ಪ್ರಕರಣಗಳು

ಈ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇವಲ ಮೂರೇ ವರ್ಷಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿರುವುದು ಸ್ಪಷ್ಟವಾಗಿದೆ. ವರದಿಯ ಪ್ರಕಾರ, 18 ರಿಂದ 25 ಮತ್ತು 26 ರಿಂದ 35 ವರ್ಷದೊಳಗಿನ ಯುವಕರಲ್ಲಿ ಈ ಸೋಂಕು ಅತಿ ಹೆಚ್ಚು ಪತ್ತೆಯಾಗುತ್ತಿದೆ. 18-25 ವರ್ಷದ ವಯೋಮಾನದವರಲ್ಲಿ 2023-24ರಲ್ಲಿ 3,732 ಇದ್ದ ಪ್ರಕರಣಗಳು, 2024-25ರ ವೇಳೆಗೆ 6,962 ಕ್ಕೆ ಏರಿಕೆಯಾಗಿದ್ದವು. ಪ್ರಸ್ತುತ ಸಾಲಿನಲ್ಲಿ ಇದು 6,283 ಕ್ಕೆ ತಲುಪಿದೆ. ಇನ್ನುಳಿದಂತೆ 26-35 ವರ್ಷದ ವಯೋಮಾನದವರಲ್ಲಿ ಪ್ರಕರಣಗಳ ಸಂಖ್ಯೆ 9,351 ರಿಂದ ಬರೋಬ್ಬರಿ 14,555 ಕ್ಕೆ ಏರಿಕೆಯಾಗಿದೆ. ಲೈಂಗಿಕವಾಗಿ ಹರಡುವ ರೋಗಗಳ ಪೈಕಿ (STDs) ಎಚ್‌ಐವಿ ಸೋಂಕು ರಾಜ್ಯದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿ ಮುಂದುವರಿದಿದ್ದು, ಈ ವರ್ಷವೇ 417 ಹೊಸ ಪ್ರಕರಣಗಳು ದಾಖಲಾಗಿವೆ.

“ಸಲಿಂಗ ಕಾಮದ ವೇಳೆ ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ನಾವು ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಮುಖ್ಯವಾಗಿ ಕಾಲೇಜು ಹಾಸ್ಟೆಲ್‌ಗಳಲ್ಲಿ ಉಂಟಾಗಿರುವ ಸೋಂಕಿನ ಹರಡುವಿಕೆಯಿಂದಾಗಿ ಪ್ರಕರಣಗಳು ಹೆಚ್ಚಾಗಿವೆ. ಕೆಲವು ಪುರುಷರು ಮಹಿಳಾ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಮತ್ತು ನಂತರ ತಮ್ಮದೇ ಗುಂಪಿನ ಇತರ ಪುರುಷರೊಂದಿಗೆ ಸಂಪರ್ಕ ಹೊಂದುವುದರಿಂದ ಸೋಂಕು ವೇಗವಾಗಿ ಹರಡುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞರಾದ ಡಾ. ಸ್ವಾತಿ ರಾಜಗೋಪಾಲ್ ಅವರು ಹೇಳಿರುವ ಪ್ರಕಾರ “ಇತ್ತೀಚಿನ ದಿನಗಳಲ್ಲಿ ಲೈಂಗಿಕ ಡೇಟಿಂಗ್ ಆ್ಯಪ್‌ಗಳ ಬಳಕೆ ಹೆಚ್ಚಾಗಿದ್ದು, ಸುಲಭವಾಗಿ ಸಂಗಾತಿಗಳು ಸಿಗುತ್ತಿರುವುದರಿಂದ ಸುರಕ್ಷತೆ ಇಲ್ಲದ ದೈಹಿಕ ಸಂಪರ್ಕ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಿಫಿಲಿಸ್ ಮತ್ತು ಗೊನೊರಿಯಾದಂತಹ ಇತರ ಲೈಂಗಿಕ ರೋಗಗಳೂ ಹೆಚ್ಚುತ್ತಿದ್ದು, ಇವು ಎಚ್‌ಐವಿ ಹರಡುವಿಕೆಯನ್ನು ಮತ್ತಷ್ಟು ತೀವ್ರಗೊಳಿಸುತ್ತವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಗಳೂರಿನಲ್ಲಿ ಭುಗಿಲೆದ್ದ ಕುಡಿಯುವ ನೀರಿನ ಆಕ್ರೋಶ!: ಇಒ, ಪಿಡಿಒ ಅಧಿಕಾರಿಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು

ಕಾಲೇಜು ಹಾಸ್ಟೆಲ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳನ್ನು ಗುರಿಯಾಗಿಸಿಕೊಂಡು ಸರ್ಕಾರವು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾರ್ವಜನಿಕರು ತಮ್ಮ ಆರೋಗ್ಯದ ಅಪಾಯವನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಮತ್ತು ಮಾರ್ಗದರ್ಶನ ಪಡೆಯಲು ಸರ್ಕಾರದ ‘ಬ್ರೇಕ್‌ಫ್ರೀ’ ಮೊಬೈಲ್ ಆಪ್ ಅನ್ನು ಬಳಸಲು ಉತ್ತೇಜಿಸಲಾಗುತ್ತಿದೆ. ಇದರೊಂದಿಗೆ ಉಚಿತ ಮಾಹಿತಿ ಹಾಗೂ ಬೆಂಬಲಕ್ಕಾಗಿ 1097 ಸಹಾಯವಾಣಿ ಸದಾ ಕಾರ್ಯನಿರ್ವಹಿಸುತ್ತಿದ್ದು, ಕಾರ್ಪೊರೇಟ್ ವಲಯಗಳಲ್ಲಿ ಮುಂದಿನ ಎರಡು ತಿಂಗಳ ಕಾಲ ನಿರಂತರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *