ಬಿಜೆಪಿ ಸೀಟು ಕಳ್ಳತನ ಮಾಡಿದೆ; ರಾಜ್ಯಸಭೆ ನಾಮಪತ್ರ ರದ್ದಾಗಿದ್ದಕ್ಕೆ ಮೀನಾಕ್ಷಿ ನಟರಾಜನ್ ಆಕ್ರೋಶ – Kannada News

ಭೋಪಾಲ್, ಜೂನ್ 9: ಮಧ್ಯಪ್ರದೇಶದ 3 ರಾಜ್ಯಸಭಾ ಸ್ಥಾನಗಳ ಪೈಕಿ ಒಂದಕ್ಕೆ ಸಲ್ಲಿಕೆಯಾಗಿದ್ದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ತಮ್ಮ ಅಫಿಡವಿಟ್‌ನಲ್ಲಿ ಕಾನೂನು ಪ್ರಕರಣವೊಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ವಜಾಗೊಳಿಸಲಾಗಿದೆ. ಈ ಕಾರಣದಿಂದಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ನಾಮಪತ್ರ ತಿರಸ್ಕಾರದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೀನಾಕ್ಷಿ ನಟರಾಜನ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಆಡಳಿತಾರೂಢ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ಅವರ ಸಂಚು ನಮಗೆ ಅರ್ಥವಾಗಿತ್ತು. ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಹತ್ತಿಕ್ಕುವ ರಾಜಕಾರಣ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಏಕಪಕ್ಷೀಯ ವ್ಯವಸ್ಥೆ ಮತ್ತು ಸರ್ವಾಧಿಕಾರವನ್ನು ಹೇರುವ ಪ್ರಯತ್ನವಾಗಿದೆ. ಇದು ಪ್ರಜಾಪ್ರಭುತ್ವದ ಹಗಲು ದರೋಡೆಯಾಗಿದೆ” ಎಂದು ಟೀಕಿಸಿದ್ದಾರೆ.

“ಇದು ಒಗ್ಗಟ್ಟಿನಿಂದ ಕೂಡಿದ ಮನೆ ಎಂದು ಅವರಿಗೆ ತಿಳಿದಾಗ, ಕಾನೂನುಬದ್ಧವಾಗಿ ಪರಿಗಣನೆಗೆ ಬಾರದ ನ್ಯಾಯಾಲಯದ ನೋಟಿಸ್ ಅನ್ನು ನೆಪವಾಗಿಟ್ಟುಕೊಂಡು ನಮ್ಮ ನಾಮಪತ್ರವನ್ನು ರದ್ದು ಮಾಡಿದರು. ನಮ್ಮ ಇಬ್ಬರೂ ವಕೀಲರು ಮಂಡಿಸಿದ ವಾದಗಳನ್ನು ಆಲಿಸದೆಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಚುನಾವಣಾ ದರೋಡೆಯನ್ನು ನಾವು ಕಾನೂನಾತ್ಮಕವಾಗಿ ಪ್ರಶ್ನಿಸುತ್ತೇವೆ.” ಎಂದು ಮೀನಾಕ್ಷಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *