ಬೆನ್ ಸ್ಟೋಕ್ಸ್​ಗೆ ಗೇಟ್​ ಪಾಸ್; 4 ವರ್ಷಗಳ ಬಳಿಕ ಜೋ ರೂಟ್​ಗೆ ಟೆಸ್ಟ್ ನಾಯಕತ್ವ – Kannada News

ಪ್ರಸ್ತುತ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ (England vs New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ಆತಿಥೇಯ ಇಂಗ್ಲೆಂಡ್‌ ಇದೀಗ ಎರಡನೇ ಪಂದ್ಯಕ್ಕಾಗಿ ತಯಾರಿ ಶುರು ಮಾಡಿದೆ. ಆದರೆ ಅದಕ್ಕೂ ಮುನ್ನ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಖಾಯಂ ನಾಯಕ ಬೆನ್ ಸ್ಟೋಕ್ಸ್ (Ben Stokes) ಅವರನ್ನು ಸರಣಿಯ ಎರಡನೇ ಪಂದ್ಯದಿಂದ ಹೊರಗಿಡಲಾಗಿದೆ. ಹೀಗಾಗಿ ಅವರ ಬದಲಿಗೆ ಅನುಭವಿ ಜೋ ರೂಟ್ (Joe Root) ಅವರನ್ನು ತಂಡದ ನಾಯಕನಾಗಿ ನೇಮಿಸಲಾಗಿದೆ. ಈ ಮೂಲಕ ರೂಟ್ ಬರೋಬ್ಬರಿ 4 ವರ್ಷಗಳ ನಂತರ ಇಂಗ್ಲೆಂಡ್‌ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

ಕ್ಲಬ್​ನಲ್ಲಿ ಮಾತಿನ ಚಕಮಕಿ

ಬೆನ್ ಸ್ಟೋಕ್ಸ್ ಅವರನ್ನು ತಂಡದಿಂದ ಹೊರಗಿಡಲು ಕಾರಣವೂ ಬಹಿರಂಗವಾಗಿದೆ. ವಾಸ್ತವವಾಗಿ ಮೊದಲ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದ ಬಳಿಕ ನಾಯಕ ಬೆನ್ ಸ್ಟೋಕ್ಸ್ ಹಾಗೂ ವೇಗಿ ಅಟ್ಕಿನ್ಸನ್ ಕ್ಲಬ್‌ಗೆ ಹೋಗಿದ್ದರು. ಅಲ್ಲಿ ಇವರಿಬ್ಬರು ಕೆಲವು ರಗ್ಬಿ ಕ್ಲಬ್ ಆಟಗಾರರೊಂದಿಗೆ ವಾಗ್ವಾದ ನಡೆಸಿದ್ದರು. ಆದಾಗ್ಯೂ, ಘಟನೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಪ್ರಸ್ತುತ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಇಡೀ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಅಲ್ಲದೆ ಅಶಿಸ್ತು ಮತ್ತು ತಂಡದ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕಾಗಿ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಅವರನ್ನು ಮುಂದಿನ ಟೆಸ್ಟ್ ಪಂದ್ಯದಿಂದ ಹೊರಗಿಟ್ಟಿದೆ.

ವಾಸ್ತವವಾಗಿ ಇಂಗ್ಲೆಂಡ್ ಆಟಗಾರರು ಮೈದಾನದ ಹೊರಗೆ ಈ ರೀತಿಯ ದುವರ್ತನೆ ತೋರುತ್ತಿರುವುದು ಇದೇ ಮೊದಲಲ್ಲ ಇದಕ್ಕೂ ಮೊದಲು ಸಾಕಷ್ಟು ಬಾರಿ ಇಂಗ್ಲೆಂಡ್‌ ಆಟಗಾರರು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಇದು ಇಸಿಬಿಗೆ ತಲೆನೋವಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಪ್ರವಾಸದ ಸಮಯದಲ್ಲಿಯೂ ಸಹ, ಆಟಗಾರರು ತಡರಾತ್ರಿವರೆಗೆ ಪಾರ್ಟಿ ಮಾಡುವುದು ಮತ್ತು ಮಿತಿ ಮೀರಿ ಮದ್ಯಪಾನ ಮಾಡಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದರು.

ಆರ್ಚರ್ ಮತ್ತು ಜೋರ್ಡಾನ್ ಕಾಕ್ಸ್ ಆಯ್ಕೆ

ಇದೀಗ ತಂಡದಿಂದ ಹೊರಬಿದ್ದಿರುವ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಬದಲಿಗೆ ಜೋರ್ಡಾನ್ ಕಾಕ್ಸ್ ಮತ್ತು ಜೋಫ್ರಾ ಆರ್ಚರ್ ಅವರನ್ನು 15 ಜನರ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದ ಆರ್ಚರ್ ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇತ್ತ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋರ್ಡಾನ್ ಕಾಕ್ಸ್ ಅವರನ್ನು ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಗಾಯದಿಂದಾಗಿ ಅವರು ಎರಡು ಬಾರಿ ಟೆಸ್ಟ್ ಚೊಚ್ಚಲ ಪಂದ್ಯವನ್ನು ತಪ್ಪಿಸಿಕೊಂಡಿದ್ದು ಇದೀಗ ಆಡುವ ಅವಕಾಶ ಸಿಗುವ ಸಾಧ್ಯತೆಗಳಿವೆ.

ರೂಟ್​ಗೆ ಮತ್ತೆ ನಾಯಕತ್ವ

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜೂನ್ 17 ರಿಂದ ಲಂಡನ್‌ನ ದಿ ಓವಲ್‌ನಲ್ಲಿ ಆರಂಭವಾಗಲಿದ್ದು, ಜೋ ರೂಟ್ ತಂಡವನ್ನು ಮುನ್ನಡೆಸಲಿದ್ದಾರೆ. ರೂಟ್ ತಂಡವನ್ನು ಮುನ್ನಡೆಸುತ್ತಿರುವುದು ಇದು ಎರಡನೇ ಬಾರಿ. ಅಲಸ್ಟೇರ್ ಕುಕ್ ನಂತರ ರೂಟ್ ಈ ಹಿಂದೆ 2017 ರಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದರು. ರೂಟ್ ಒಟ್ಟು 64 ಟೆಸ್ಟ್ ಪಂದ್ಯಗಳ ನಾಯಕತ್ವ ವಹಿಸಿದ್ದಾರೆ. ಆದಾಗ್ಯೂ, ಏಪ್ರಿಲ್ 2022 ರಲ್ಲಿ, ಕಳಪೆ ಫಾರ್ಮ್ ಮತ್ತು ಆಶಸ್ ಸರಣಿ ಸೋಲಿನ ನಂತರ, ಜೋ ರೂಟ್ ಇಂಗ್ಲೆಂಡ್‌ನ ಟೆಸ್ಟ್ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಬದಲಿಯಾಗಿ ಬೆನ್ ಸ್ಟೋಕ್ಸ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು.

ಚೊಚ್ಚಲ ಟೆಸ್ಟ್​ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್

ಇಂಗ್ಲೆಂಡ್ ತಂಡ : ಜೋ ರೂಟ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್, ಮ್ಯಾಥ್ಯೂ ಫಿಶರ್, ಎಮಿಲಿಯೊ ಗೇ, ಜೇಮ್ಸ್ ರ್ಯು, ಓಲ್ಲಿ ರಾಬಿನ್ಸನ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *