ಇಪಿಎಫ್ (EPF) ಎಂಬುದು ಉದ್ಯೋಗಿಗಳ ನಿವೃತ್ತಿ ಅಥವಾ ಭವಿಷ್ಯದ ಕಾಲದ ಸುರಕ್ಷತೆಗೆಂದು ರೂಪಿಸಲಾಗಿದೆ. ಇದರಲ್ಲಿ ಸಾಮಾನ್ಯ ಎಫ್ಡಿಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಸರ್ಕಾರ ಒದಗಿಸುತ್ತದೆ. ಆದರೆ, ಇಪಿಎಫ್‌ನಲ್ಲಿ ವಾರ್ಷಿಕವಾಗಿ ಶೇ. 8.25 ಮಾತ್ರವೇ ಬಡ್ಡಿ ಸಿಗುತ್ತದೆ. ಮ್ಯೂಚುವಲ್ ಫಂಡ್ಗಳಲ್ಲಿ ಹೆಚ್ಚಿನ ರಿಟರ್ನ್ ಸಿಗುತ್ತದೆ. ಹೀಗಾಗಿ, ಇಪಿಎಫ್ನಿಂದ ಹಣ ತೆಗೆದು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ ಎಂದು ಕೆಲ ಹಣಕಾಸು ಪರಿಣಿತರು ಸಲಹೆ ನೀಡುವುದುಂಟು. ಆದರೆ, ಇಪಿಎಫ್‌ನ ಉದ್ದೇಶ ಬೇರೆ, ಮ್ಯೂಚುವಲ್ ಫಂಡ್ನ ಉದ್ದೇಶ ಬೇರೆ. ಎರಡೂ ಬೇರೆ ಬೇರೆ ಪ್ರಾಡಕ್ಟ್ಸ್. ಆದರೂ ರಿಟರ್ನ್ ಲೆಕ್ಕಾಚಾರಕ್ಕೆ ಬಂದರೆ ಇಪಿಎಫ್‌ನಲ್ಲಿ ಬಡ್ಡಿ ಜೊತೆಗೆ ಇರುವ ಇನ್ನೊಂದು ಅಂಶವು ಅನುಕೂಲ ಮಾಡಿಕೊಡುತ್ತದೆ.
ಬಹಳಷ್ಟು ಜನರು ಇಪಿಎಫ್‌ನ ಶೇ. 8.25 ಬಡ್ಡಿಯನ್ನು ಮ್ಯೂಚುವಲ್ ಫಂಡ್‌ಗಳ ಶೇ. 12-15 ಗಳಿಕೆಗೆ ಹೋಲಿಸಿ, ಇದು ಕಡಿಮೆ ಎಂದು ಭಾವಿಸುತ್ತಾರೆ. ಆದರೆ, ಇಪಿಎಫ್‌ಗೆ ಇರುವ E-E-E (Exempt-Exempt-Exempt) ಸ್ಥಾನಮಾನವೇ ಅದರ ನಿಜವಾದ ಶಕ್ತಿಯಾಗಿದೆ. ಅದರಲ್ಲೂ ಶೇ. 30ರ ಟ್ಯಾಕ್ಸ್ ಬ್ರಾಕೆಟ್ನಲ್ಲಿರುವ ತೆರಿಗೆ ಪಾವತಿದಾರರಿಗೆ ಇಪಿಎಫ್ ಮ್ಯಾಜಿಕ್ ಮಾಡುತ್ತದೆ.
ವಾರ್ಷಿಕವಾಗಿ ₹2.5 ಲಕ್ಷದವರೆಗಿನ ಇಪಿಎಫ್ ಕೊಡುಗೆಗೆ ಸಿಗುವ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ (Tax-Free). ಅದೇ ಫಿಕ್ಸೆಡ್ ಡೆಪಾಸಿಟ್, ಮ್ಯೂಚುವಲ್ ಫಂಡ್ಗಳಲ್ಲಿ ಬೇರೆಯೇ ವಸೂಲಿ ಇರುತ್ತದೆ. ಎಫ್ಡಿ ವಿಚಾರಕ್ಕೆ ಬಂದರೆ, ನೀವು ಶೇ. 30 ರಷ್ಟು ತೆರಿಗೆ ವ್ಯಾಪ್ತಿಯಲ್ಲಿದ್ದರೆ (Tax Slab), ಬ್ಯಾಂಕ್ ನೀಡುವ ಶೇ. 7.5 ರಷ್ಟು ಬಡ್ಡಿಯು ತೆರಿಗೆ ಕಡಿತದ ನಂತರ ಕೇವಲ ಶೇ. 5.25ಕ್ಕೆ ಕುಸಿಯುತ್ತದೆ! ಆದರೆ ಇಪಿಎಫ್‌ನಲ್ಲಿ ಶೇ. 8.25 ಎಂದರೆ ಅದು ನಿವ್ವಳ ಶೇ. 8.25 ರಷ್ಟೇ ಆಗಿರುತ್ತದೆ.
ಇದನ್ನೂ ಓದಿ: ಟಿಸಿಎಸ್ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ
ಚಕ್ರಬಡ್ಡಿಯ ಶಕ್ತಿ (Power of Compounding)
ಇಪಿಎಫ್‌ನಲ್ಲಿ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಹಣ ಕಡಿತವಾಗಿ ಜಮೆಯಾಗುತ್ತದೆ. ಇದರ ಬಡ್ಡಿಯು ಪ್ರತಿ ವರ್ಷದ ಕೊನೆಯಲ್ಲಿ ಅಸಲಿಗೆ ಸೇರುತ್ತಾ ಹೋಗುತ್ತದೆ. ಇದರ ಜೊತೆಗೆ ಟ್ಯಾಕ್ಸ್ ಉಳಿತಾಯವನ್ನೂ ಸೇರಿಸಿದರೆ ನಿಮ್ಮ ಇಪಿಎಫ್ ನಿಧಿ ದೀರ್ಘಾವಧಿಯಲ್ಲಿ ವಾರ್ಷಿಕ ಶೇ. 11ರಿಂದ 12ರಷ್ಟು ರಿಟರ್ನ್ ಕೊಡಬಲ್ಲುದು.
ಮ್ಯೂಚುವಲ್ ಫಂಡ್‌ಗಳ ಮೇಲಿನ ತೆರಿಗೆ ಗಮನಿಸಿ..!
ಮ್ಯೂಚುವಲ್ ಫಂಡ್‌ಗಳು ಹೆಚ್ಚಿನ ಆದಾಯ ನೀಡಿದರೂ, ಹಣ ಹಿಂಪಡೆಯುವಾಗ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ (LTCG – Long Term Capital Gains Tax) ಪಾವತಿಸಬೇಕಾಗುತ್ತದೆ. ಆದರೆ ಇಪಿಎಫ್‌ನಲ್ಲಿ ಐದು ವರ್ಷಗಳ ನಿರಂತರ ಸೇವೆಯ ನಂತರ ಹಿಂಪಡೆಯುವ ಸಂಪೂರ್ಣ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
ಹಳೆಯ ಟ್ಯಾಕ್ಸ್ ರಿಜೈಮ್ನಲ್ಲಿ ಪಿಪಿಎಫ್ ರೀತಿಯಲ್ಲಿ ಇಪಿಎಫ್ನಿಂದಲೂ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುತ್ತದೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಇಪಿಎಫ್ ಕೊಡುಗೆಗೆ ಟ್ಯಾಕ್ಸ್ ಇರುವುದಿಲ್ಲ. ಅಂದರೆ, ಒಂದೂವರೆ ಲಕ್ಷ ರೂಗೆ ಟ್ಯಾಕ್ಸ್ ಉಳಿತಾಯ ಆಗುತ್ತದೆ. ಶೇ. 30ರ ಟ್ಯಾಕ್ಸ್ ಸ್ಲಾಬ್ನಲ್ಲಿರುವ ವ್ಯಕ್ತಿಗಳು ಇದರಿಂದ ವರ್ಷಕ್ಕೆ 45,000 ರೂ ಟ್ಯಾಕ್ಸ್ ಉಳಿಸಬಹುದು.
ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ
ಮ್ಯೂಚುವಲ್ ಫಂಡ್‌ಗಿಂತ ಇಪಿಎಫ್ ಹೇಗೆ ಸುರಕ್ಷಿತ?
ಮ್ಯೂಚುವಲ್ ಫಂಡ್‌ಗಳು (Equity Mutual Funds) ಶೇ. 12 ಕ್ಕಿಂತ ಹೆಚ್ಚಿನ ಆದಾಯ ನೀಡಬಹುದಾದರೂ, ಅವುಗಳಲ್ಲಿ ಮಾರುಕಟ್ಟೆಯ ಅಪಾಯವಿರುತ್ತದೆ (Market Risk). ಷೇರು ಮಾರುಕಟ್ಟೆ ಕುಸಿದಾಗ ನಿಮ್ಮ ಹಣದ ಮೌಲ್ಯವೂ ಕುಸಿಯುತ್ತದೆ.
ಆದರೆ, ಇಪಿಎಫ್ ಭಾರತ ಸರ್ಕಾರದಿಂದ ಖಾತರಿಪಡಿಸಲ್ಪಟ್ಟ ಸಂಪೂರ್ಣ ಸುರಕ್ಷಿತ ಹೂಡಿಕೆಯಾಗಿದೆ. ಸ್ಥಿರವಾದ ಆರ್ಥಿಕ ಭವಿಷ್ಯ ಮತ್ತು ನಿವೃತ್ತಿ ಜೀವನಕ್ಕಾಗಿ (Retirement Planning) ಯಾವುದೇ ಅಪಾಯವಿಲ್ಲದೆ ಶೇ. 8.25 ರಷ್ಟು ಗ್ಯಾರಂಟಿ ರಿಟರ್ನ್ಸ್ ನೀಡುವ ಮತ್ತೊಂದು ಹೂಡಿಕೆ ಸದ್ಯಕ್ಕೆ ಮಾರುಕಟ್ಟೆಯಲ್ಲಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ