ಇತ್ತೀಚೆಗೆ ಗುಜರಾತ್ನಲ್ಲಿ ಹಾಳಾಗಿರುವ, ಹುಳ ಬಿದ್ದ ಮಾವಿನ ಹಣ್ಣುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಹಾಳಾದ ಹಣ್ಣುಗಳನ್ನು ವಶಪಡಿಸಿಕೊಂಡಿದ್ದರು. ಈ ಘಟನೆ ಬಳಿಕ ಹೊರಗೆ ಸಿಗುವ ಜ್ಯೂಸ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ. ಸ್ವಲ್ಪ ಹೆಚ್ಚು ಹಣ್ಣಾದದ್ದು ಸಾಮಾನ್ಯವಾಗಿ ದೊಡ್ಡ ಸಮಸ್ಯೆ ಉಂಟುಮಾಡದೇ ಇರಬಹುದು. ಆದರೆ ಕೊಳೆತ ಅಥವಾ ಸಣ್ಣ ಹುಳ ಇರುವ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಕೀಟಗಳು ವೇಗವಾಗಿ ಬೆಳೆಯುತ್ತವೆ. ಮೇಲ್ನೋಟಕ್ಕೆ ಸ್ವಲ್ಪ ಭಾಗದಲ್ಲಿ ಮಾತ್ರ ಕಾಣಿಸಿಕೊಂಡರೂ ಅದರ ವಿಷಕಾರಿ ಅಂಶ ಹಣ್ಣಿನ ಒಳಭಾಗಕ್ಕೂ ಹರಡಿರಬಹುದು. ಹಾಗಾದರೆ ಈ ರೀತಿ ಹೊರಗಡೆ ಕುಡಿಯುವ ಜ್ಯೂಸ್ ಎಷ್ಟು ಆರೋಗ್ಯಕ್ಕೆ ಒಳ್ಳೆಯದು, ಒಂದು ವೇಳೆ ಹಾಳಾಗಿರುವ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿದರೆ ಏನಾಗಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹಾಳಾದ ಜ್ಯೂಸ್ ಕುಡಿದರೆ ಏನಾಗಬಹುದು?
ತಜ್ಞರ ಪ್ರಕಾರ, ಸ್ವಲ್ಪ ಹಾಳಾದ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಕುಡಿದರೂ ಕೂಡ ದೇಹಕ್ಕೆ ಹಾನಿಕರ ಬ್ಯಾಕ್ಟೀರಿಯಾ ಮತ್ತು ವಿಷಕಾರಿ ಅಂಶಗಳು ದೇಹದೊಳಗೆ ಹೋಗಬಹುದು. ಜೊತೆಗೆ ಹೊಟ್ಟೆನೋವು, ವಾಂತಿ, ಹೊಟ್ಟೆ ಉಬ್ಬರ, ಜ್ವರ, ಫುಡ್ ಪಾಯ್ಸನಿಂಗ್ ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಫಂಗಸ್ನಿಂದ ಕಂಡುಬರುವ “ಮೈಕೋಟಾಕ್ಸಿನ್” ಎಂಬ ವಿಷಕಾರಿ ಅಂಶ ಯಕೃತ್ ಮತ್ತು ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಮಕ್ಕಳಿಗೆ ಮತ್ತು ವೃದ್ಧರಿಗೆ ಹೆಚ್ಚು ಅಪಾಯ
ಹುಳು ಬಿದ್ದ ಹಣ್ಣುಗಳಲ್ಲಿ ಅಪಾಯಕಾರಿ ಕೀಟಾಣುಗಳು ಇರುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಹೆಚ್ಚು ಅಪಾಯಕಾರಿಯಾಗಿದೆ.
ಇದನ್ನೂ ಓದಿ: ಹಾಲು ಹಾಕಿದ ಚಹಾ ಕುಡಿದರೆ ಅಸಿಡಿಟಿ ಆಗುತ್ತಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ ಪಾಲಿಸಿ ನೋಡಿ
ರಾಸಾಯನಿಕಗಳಿಂದ ಹಣ್ಣನ್ನು ಗುರುತಿಸುವುದು ಹೇಗೆ?
ಕೆಲ ವ್ಯಾಪಾರಿಗಳು “ಕ್ಯಾಲ್ಸಿಯಂ ಕಾರ್ಬೈಡ್” ಬಳಸಿ ಕೃತಕವಾಗಿ ಹಣ್ಣಾಗಿಸುತ್ತಾರೆ. ಇಂತಹ ಹಣ್ಣುಗಳಲ್ಲಿ ಒಂದೇ ತರದ ಗಾಢ ಹಳದಿ ಬಣ್ಣ, ರುಚಿಯಲ್ಲಿ ಅಸಹಜತೆ, ಕಡಿಮೆ ರಸ, ನೀರಿನಲ್ಲಿ ತೇಲುವ ಗುಣ ಕಾಣಿಸಬಹುದು.
ಜ್ಯೂಸ್ ಕುಡಿಯುವಾಗ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?
- ನಿಮ್ಮ ಎದುರಲ್ಲೇ ಹಣ್ಣು ಕತ್ತರಿಸಿ ಜ್ಯೂಸ್ ಮಾಡಿಸಿಕೊಳ್ಳಿ
- ಮುಂಚಿತವಾಗಿ ತಯಾರಿಸಿದ ಪಲ್ಪ್ ಅಥವಾ ಜ್ಯೂಸ್ ಕುಡಿಯುವುದನ್ನು ತಪ್ಪಿಸಿ
- ಹಣ್ಣುಗಳನ್ನು ಚೆನ್ನಾಗಿ ತೊಳೆದು ಬಳಸಿ
- ಸಾಧ್ಯವಾದರೆ ಮನೆಯಲ್ಲೇ ತಾಜಾ ಜ್ಯೂಸ್ ತಯಾರಿಸಿ ಕುಡಿಯಿರಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ