10 ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಜೂನ್ 12 ರಿಂದ ಜುಲೈ 5 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆಯಲಿದೆ. 24 ದಿನಗಳ ಈ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ ಜೂನ್ 14 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಬಾರಿ, ಪಂದ್ಯಾವಳಿಯ ಒಟ್ಟು ಬಹುಮಾನದ ಹಣವನ್ನು 83ಕೋಟಿ ರೂ.ಗೆ ಏರಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಇನ್ನು ಈ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವೆನಿಸಿಕೊಂಡಿರುವ ಆಸ್ಟ್ರೇಲಿಯಾ 6 ಬಾರಿ ಚಾಂಪಿಯನ್ ಆಗಿದ್ದರೆ, ಇಂಗ್ಲೆಂಡ್ 3 ಬಾರಿ ಟ್ರೋಫಿ ಎತ್ತಿಹಿಡಿದಿದೆ. ಟೀಂ ಇಂಡಿಯಾ ಒಮ್ಮೆ ಫೈನಲ್ ಆಡಿದೆಯಾದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಇನ್ನು ಪಂದ್ಯಾವಳಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿವರ ಇಲ್ಲಿದೆ.
ಪಂದ್ಯಗಳು ಎಷ್ಟು ಗಂಟೆಗೆ ಆರಂಭವಾಗಲಿವೆ?
ಟಿ20 ವಿಶ್ವಕಪ್ ಪಂದ್ಯಗಳು ಸ್ಥಳೀಯ ಸಮಯದ ಪ್ರಕಾರ, ಪಂದ್ಯಗಳು ಸಂಜೆ 6:30 ಕ್ಕೆ ಪ್ರಾರಂಭವಾಗುತ್ತವೆ. ಆದರೆ ನೀವು ಭಾರತ, ಶ್ರೀಲಂಕಾ ಅಥವಾ ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದರೆ, ಪಂದ್ಯವನ್ನು ವೀಕ್ಷಿಸಲು ನಿದ್ದೆಗೆಡಬೇಕಾಗುತ್ತದೆ. ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಸುಮಾರು 4.30 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ ಭಾರತದಲ್ಲಿ ರಾತ್ರಿ 11 ಗಂಟೆಯಿಂದ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ. ಇಂಗ್ಲೆಂಡ್‌ನಲ್ಲಿ ಸಂಜೆ 6:30 ಆಗಿದ್ದರೆ, ಭಾರತದಲ್ಲಿ ರಾತ್ರಿ 11 ಗಂಟೆ. ಆದ್ದರಿಂದ, ಇತರ ತಂಡಗಳ ಕೆಲವು ಪಂದ್ಯಗಳು ಭಾರತೀಯ ಸಮಯ ರಾತ್ರಿ 11 ಗಂಟೆಯಿಂದ ಆರಂಭವಾಗುತ್ತವೆ.
ಟಿ20 ವಿಶ್ವಕಪ್ನಲ್ಲಿ ಭಾರತ- ಪಾಕ್ ನಡುವೆ ಫೈಟ್; ಹೇಗಿದೆ ಮುಖಾಮುಖಿ ದಾಖಲೆ?
ಟೀಂ ಇಂಡಿಯಾ ಪಂದ್ಯಗಳು ಎಷ್ಟು ಗಂಟೆಗೆ ಆರಂಭ?
ಸಮಾಧಾನಕರ ಸುದ್ದಿ ಏನೆಂದರೆ ಟೀಂ ಇಂಡಿಯಾ ಪಂದ್ಯಗಳು ಇಂಗ್ಲೆಂಡ್ ಸಮಯದ ಪ್ರಕಾರ, ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತವೆ. ಅಂದರೆ ಭಾರತದ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ. ಇದಲ್ಲದೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಸ್ಥಳೀಯ ಸಮಯ ಮಧ್ಯಾಹ್ನಕ್ಕೆ ನಿಗದಿಪಡಿಸಲಾಗಿದೆ, ಆದ್ದರಿಂದ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ.
ಟೀಂ ಇಂಡಿಯಾ ವೇಳಾಪಟ್ಟಿ
- 14/06/2026: ಭಾರತ vs ಪಾಕಿಸ್ತಾನ- ಎಡ್ಜ್‌ಬಾಸ್ಟನ್
- 17/06/2026: ಭಾರತ vs ನೆದರ್‌ಲ್ಯಾಂಡ್ಸ್- ಹೆಡಿಂಗ್ಲಿ
- 21/06/2026: ದಕ್ಷಿಣ ಆಫ್ರಿಕಾ vs ಭಾರತ- ಓಲ್ಡ್ ಟ್ರಾಫರ್ಡ್ ಮೈದಾನ
- 25/06/2026- ಭಾರತ vs ಬಾಂಗ್ಲಾದೇಶ- ಓಲ್ಡ್ ಟ್ರಾಫರ್ಡ್ ಮೈದಾನ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:26 pm, Thu, 11 June 26