ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಫ್ರಾಂಚೈಸಿ ‘ಡಾನ್ 3’ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನವೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದ ಮೇಲೆ ‘ಡಾನ್ 3’ ಸದ್ಯಕ್ಕಂತೂ ಸೆಟ್ಟೇರುವುದು ಅನುಮಾನ ಎಂಬ ಮಾತು ಕೇಳಿಬರುತ್ತಿತ್ತು. ಆ ಮಾತು ಈಗ ನಿಜವಾಗುವ ಸಮಯ ಬಂದಿದ್ದು, ನಿರ್ದೇಶಕ ಹಾಗೂ ನಟ ಫರ್ಹಾನ್ ಅಖ್ತರ್ ಈ ಪ್ರಾಜೆಕ್ಟ್ ಅನ್ನು ಸದ್ಯಕ್ಕೆ ಬದಿಗೆ ತಳ್ಳಿದ್ದಾರೆ. ಇದರ ಬೆನ್ನಲ್ಲೇ ಅವರು ಹೊಸದೊಂದು ಬಿಗ್ ಪ್ರಾಜೆಕ್ಟ್‌ಗೆ ಕೈಹಾಕಿದ್ದಾರೆ.
ಹೊಸ ವರ್ದಿಗಳ ಪ್ರಕಾರ ಫರ್ಹಾನ್ ಅಖ್ತರ್ ಅವರು ಭಾರತೀಯ ಚಿತ್ರರಂಗದ ದಂತಕಥೆ, ಖ್ಯಾತ ಸಂಗೀತ ಮಾಂತ್ರಿಕ ಆರ್.ಡಿ. ಬರ್ಮನ್ ಅವರ ಬಯೋಪಿಕ್‌ನಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ‘ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಖ್ಯಾತಿಯ ಯಶಸ್ವಿ ನಿರ್ದೇಶಕ ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಸ್ಕ್ರಿಪ್ಟ್ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಆರ್.ಡಿ. ಬರ್ಮನ್ ಅವರ ಪಾತ್ರಕ್ಕೆ ಜೀವ ತುಂಬಲು ಫರ್ಹಾನ್ ಅಖ್ತರ್ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದ್ದು, 2026ರ ಕೊನೆಯ ವೇಳೆಗೆ ಈ ಚಿತ್ರದ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.
ರಣವೀರ್ ಸಿಂಗ್ ಹೊಸ ‘ಡಾನ್’ ಆಗಲಿದ್ದಾರೆ ಎಂದು ಘೋಷಿಸಿದಾಗ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿತ್ತು. ಆದರೆ, ಸ್ಕ್ರಿಪ್ಟ್ ಫೈನಲ್ ಆಗದ ಕಾರಣ ಮತ್ತು ಶೂಟಿಂಗ್ ಪದೇ ಪದೇ ತಡವಾಗುತ್ತಿದ್ದರಿಂದ ಬೇಸತ್ತ ರಣವೀರ್ ಚಿತ್ರದಿಂದ ಹೊರನಡೆದಿದ್ದರು.
ಇದನ್ನೂ ಓದಿ: ರಣ್ವೀರ್ ಸಿಂಗ್ ಕೈಕೊಟ್ಟ ಬಳಿಕ ‘ಡಾನ್ 3’ಗೆ ಮತ್ತೊಬ್ಬ ಸ್ಟಾರ್
ಈ ದಿಢೀರ್ ಎಕ್ಸಿಟ್‌ನಿಂದ ತಮಗೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಆರೋಪಿಸಿ ಫರ್ಹಾನ್ ಅಖ್ತರ್ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯು ರಣವೀರ್ ಸಿಂಗ್ ವಿರುದ್ಧ ಬರೋಬ್ಬರಿ 45 ಕೋಟಿ ರೂ. ಪರಿಹಾರ ಕೋರಿ ನೋಟಿಸ್ ನೀಡಿದೆ. ಈ ದೊಡ್ಡ ಕಾನೂನು ಸಮರ ಹಾಗೂ ವಿವಾದಗಳ ಕಾರಣದಿಂದಾಗಿ ‘ಡಾನ್ 3’ ಸಿನಿಮಾ ಸದ್ಯಕ್ಕೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಂತಾಗಿದೆ. ಈ ಸಿನಿಮಾಗೆ ಹೃತಿಕ್ ಎಂಟ್ರಿ ಆಗುತ್ತದೆ ಎಂದಿದೆಯಾದರೂ ಅದು ಇನ್ನೂ ಫೈನಲ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.