ಬೆಂಗಳೂರು, ಜೂ.12: ನೀಟ್ (NEET) ಮರುಪರೀಕ್ಷೆಯ ತೀವ್ರ ಒತ್ತಡ ಮತ್ತು ಆತಂಕದಲ್ಲಿರುವ ರಾಜ್ಯದ ವೈದ್ಯಕೀಯ ಸೀಟ್ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ರಾಜ್ಯ ಸರ್ಕಾರವು ಭರ್ಜರಿ ರಿಲೀಫ್ ನೀಡಿದೆ. ಪ್ರಸಕ್ತ ಸಾಲಿನ (2026-27) ವೈದ್ಯಕೀಯ (MBBS) ಮತ್ತು ದಂತ ವೈದ್ಯಕೀಯ (BDS) ಕೋರ್ಸ್ಗಳ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡದೆ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕಳೆದ ವರ್ಷ (2025-26ನೇ ಸಾಲು) ನಿಗದಿಪಡಿಸಲಾಗಿದ್ದ ಹಳೆಯ ಶುಲ್ಕ ರಚನೆಯೇ ಈ ವರ್ಷಕ್ಕೂ ಅನ್ವಯಿಸಲಿದೆ ಎಂದು ಸ್ಪಷ್ಟಪಡಿಸಿದರು. ಈ ಮಹತ್ವದ ತೀರ್ಮಾನವು ರಾಜ್ಯದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳೆರಡಕ್ಕೂ ಸಮಾನವಾಗಿ ಅನ್ವಯಿಸಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕವನ್ನು ಗಣನೀಯವಾಗಿ ಹೆಚ್ಚಳ ಮಾಡಬೇಕೆಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದವು ಮತ್ತು ಈ ಸಂಬಂಧ ಮನವಿಯನ್ನೂ ಸಲ್ಲಿಸಿದ್ದವು. ಆದರೆ, ವಿದ್ಯಾರ್ಥಿಗಳು ಮತ್ತು ಪೋಷಕರ ಆರ್ಥಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಸಂಸ್ಥೆಗಳ ಶುಲ್ಕ ಹೆಚ್ಚಳದ ಬೇಡಿಕೆಯನ್ನು ರಾಜ್ಯ ಸರ್ಕಾರವು ಕಠಿಣವಾಗಿ ತಿರಸ್ಕರಿಸಿದೆ. “ಶುಲ್ಕ ಹೆಚ್ಚಳದ ಕುರಿತು ಹರಡುತ್ತಿರುವ ಯಾವುದೇ ರೀತಿಯ ಊಹಾಪೋಹಗಳಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಿವಿಗೊಡಬಾರದು” ಎಂದು ಸಚಿವರು ಇದೇ ವೇಳೆ ಮನವಿ ಮಾಡಿದರು. ಈಗಾಗಲೇ ದೇಶಾದ್ಯಂತ ನೀಟ್ ಗೊಂದಲಗಳಿಂದ ಕಂಗಾಲಾಗಿದ್ದ ವಿದ್ಯಾರ್ಥಿ ವಲಯಕ್ಕೆ ರಾಜ್ಯ ಸರ್ಕಾರದ ಈ ನಿರ್ಧಾರವು ಆರ್ಥಿಕವಾಗಿ ದೊಡ್ಡ ನಿಟ್ಟುಸಿರು ಬಿಡುವಂತೆ ಮಾಡಿದೆ.
ಪ್ರಸಕ್ತ ಸಾಲಿನ ಶುಲ್ಕದ ವಿವರ ಇಲ್ಲಿದೆ:
ಎಂಬಿಬಿಎಸ್ (MBBS) ಕೋರ್ಸ್ ಶುಲ್ಕ:
ಸರ್ಕಾರಿ ಕಾಲೇಜುಗಳು: 55,000
ಖಾಸಗಿ ಕಾಲೇಜುಗಳು (ಸರ್ಕಾರಿ ಕೋಟಾ): 11,88,167
ದಂತ ವೈದ್ಯಕೀಯ (BDS) ಕೋರ್ಸ್ ಶುಲ್ಕ:
ಸರ್ಕಾರಿ ಕಾಲೇಜುಗಳು: 40,000
ಖಾಸಗಿ ಕಾಲೇಜುಗಳು (ಸರ್ಕಾರಿ ಕೋಟಾ): 7,32,625
ಇದನ್ನೂ ಓದಿ: ಜೂನ್ 21 ನೀಟ್ ಯುಜಿ ಮರು ಪರೀಕ್ಷೆ, ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯ
ಜೂನ್ 21 ನೀಟ್ ಯುಜಿ ಮರು ಪರೀಕ್ಷೆ:
ಇತ್ತೀಚಿನ ಗೊಂದಲಗಳಿಗೆ ತೆರೆ ಎಳೆದು, ಪ್ರತಿಯೊಬ್ಬ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗೂ ಸಮಾನ ಹಾಗೂ ನ್ಯಾಯಯುತವಾದ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಸರ್ಕಾರ ನೀಟ್ ಯುಜಿ(NEET UG) 2026ರ ಮರು ಪರೀಕ್ಷೆಯು ಜೂನ್ 21ರಂದು ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ವಿದ್ಯಾರ್ಥಿಗಳಿಗಾಗಿ ಎನ್ಟಿಎ ವಿಶೇಷ ಕ್ರಮಗಳನ್ನು ಘೋಷಿಸಿದೆ. ಅಭ್ಯರ್ಥಿಗಳಿಗೆ ಹೆಚ್ಚುವರಿ 15 ನಿಮಿಷಗಳನ್ನು ನೀಡಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ಪರೀಕ್ಷೆ ನಡೆಯಲಿದೆ. ನೀಟ್ ಯುಜಿ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರಗಳನ್ನು ಜೂನ್ 14 ರಂದು ಬಿಡುಗಡೆ ಮಾಡಲಾಗುವುದು. ರಫ್ ವರ್ಕ್ಗೆ ಕೂಡ ಹೆಚ್ಚು ಸ್ಥಳಾವಕಾಶವನ್ನು ಪೇಪರ್ನಲ್ಲಿ ನೀಡಲಾಗುತ್ತದೆ ಎಂದು ಹೇಳಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ