ಇತ್ತೀಚೆಗೆ ಬಿಡುಗಡೆ ಆದ ‘ದಿ ಆಡಸ್ಸಿ’ (The Odyssey) ಸಿನಿಮಾ ಭಾರತದಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ಕಳೆದ ಶನಿವಾರ ಸಹ ಭಾರತದಲ್ಲಿ 14 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ಈಗ ಅದರ ಸ್ಥಾನ ತುಂಬಲು ಮತ್ತೊಂದು ಹಾಲಿವುಡ್ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಬಿಡುಗಡೆ ಆಗುತ್ತಿದೆ. ‘ದಿ ಆಡಸ್ಸಿ’ ಸಿನಿಮಾ ಅನ್ನೂ ಸಹ ಮೀರಿಸುವ ರೀತಿಯ ಅಡ್ವಾನ್ಸ್ ಬುಕಿಂಗ್ ಮಾಡಿದೆ. ಭಾರತದಲ್ಲೂ ಸಹ ‘ಸ್ಪೈಡರ್ ಮ್ಯಾನ್’ ಸಿನಿಮಾ ದಾಖಲೆ ಮೊತ್ತದ ಅಡ್ವಾನ್ಸ್ ಬುಕಿಂಗ್ ಆಗಿದೆ.
‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವು ಅಧಿಕೃತವಾಗಿ ಜುಲೈ 30 ರಂದು ಭಾರತೀಯ ಥಿಯೇಟರ್ಗಳಲ್ಲಿ ಮತ್ತು ಜುಲೈ 31 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಭಾರತದಲ್ಲಿ ಒಂದು ದಿನ ಮುಂಚಿತವಾಗಿಯೇ ಬಿಡುಗಡೆ ಆಗಲಿದೆ. ಜುಲೈ 30 ರಂದು ಥಿಯೇಟರ್ಗಳಿಗೆ ಅಪ್ಪಳಿಸಲಿರುವ ಈ ಚಿತ್ರವು, ಬಿಡುಗಡೆಗೆ ಮೂರು ದಿನಗಳ ಮುಂಚೆಯೇ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ. 2023 ರ ನಂತರ ‘ಬುಕ್ಮೈಶೋ’ (BookMyShow) ನಲ್ಲಿ ಅತಿ ಹೆಚ್ಚು ಮುಂಗಡ ಬುಕಿಂಗ್ ದಾಖಲಿಸಿದ ಹಾಲಿವುಡ್ ಚಿತ್ರ ಎನಿಸಿಕೊಂಡಿದೆ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’.
ಮಾರ್ವೆಲ್-ಸೋನಿ ನಿರ್ಮಾಣದ ಈ ಚಿತ್ರವು ಅಡ್ವಾನ್ಸ್ ಬುಕಿಂಗ್ನಲ್ಲಿ 8,00,000 ಟಿಕೆಟ್ಗಳನ್ನು ದಾಟಿ ದಾಖಲೆ ಬರೆದಿದೆ. ಹಾಲಿವುಡ್ನ ಇನ್ಯಾವುದೇ ಸಿನಿಮಾ ಮುಂಗಡವಾಗಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್ಗಳನ್ನು ಭಾರತದಲ್ಲಿ ಮಾರಾಟ ಮಾಡಿರಲಿಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಡೆಡ್ಪೂಲ್ & ವೊಲ್ವೆರಿನ್’ ಚಿತ್ರದ ಒಟ್ಟು ಟಿಕೆಟ್ ಸಂಖ್ಯೆಯನ್ನು ಕೇವಲ ಮುಂಗಡ ಬುಕಿಂಗ್ನಲ್ಲಿಯೇ ಹಿಂದಿಕ್ಕಿದೆ ‘ಸ್ಪೈಡರ್ ಮ್ಯಾನ್’. ಆ ಮೂಲಕ ಭಾರತದಲ್ಲಿ ಈ ಸಿನಿಮಾ ಭಾರಿ ದೊಡ್ಡ ಓಪನಿಂಗ್ ಪಡೆದುಕೊಳ್ಳುವ ಭರವಸೆಯನ್ನು ಮೂಡಿಸಿದೆ.
ಇದನ್ನೂ ಓದಿ:‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್ಗಳು ಸೋಲ್ಡ್ ಔಟ್
‘ದಿ ಆಡಸ್ಸಿ’ ಇನ್ನೂ ಒಳ್ಳೆಯ ಪ್ರದರ್ಶನ ಮಾಡುತ್ತಿದ್ದರೂ ಸಹ ‘ಸ್ಪೈಡರ್ ಮ್ಯಾನ್’ ಬಗ್ಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಜುಲೈ 17 ರಂದು ಸುಮಾರು 43,000 ಇದ್ದ ಟಿಕೆಟ್ ಮಾರಾಟವು, ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ಜುಲೈ 26 ರಂದು ಗರಿಷ್ಠ 141,000 ಕ್ಕೆ ಏರಿಕೆಯಾಗಿದ್ದು, ಬೇಡಿಕೆಯಲ್ಲಿ ಭಾರಿ ಹೆಚ್ಚಳ ಆಗುತ್ತಲೇ ಸಾಗಿದೆ. ಬೆಂಗಳೂರಿನಲ್ಲಿ ಸಹ ಈಗಾಗಲೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಬಹುತೇಕ ಶೋಗಳು ಹೌಸ್ ಫುಲ್ ಆಗಿಬಿಟ್ಟಿವೆ.
ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಸರಪಳಿಗಳಲ್ಲಿಯೂ ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಿವಿಆರ್ (PVR), ಐನಾಕ್ಸ್ (INOX) ಮತ್ತು ಸಿನಿಪೊಲಿಸ್ (Cinepolis) ಮಲ್ಟಿಪ್ಲೆಕ್ಸ್ ಗಳಲ್ಲಿ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಈಗಾಗಲೇ ಸುಮಾರು 3.19 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಿದ್ದು, ಮುಂಗಡವಾಗಿ ಒಟ್ಟು 16 ಕೋಟಿ ರೂ. ಗಳಿಕೆ ಮಾಡಿದೆ. ಪಿವಿಆರ್ 8.35 ಕೋಟಿ ರೂ. ಮೌಲ್ಯದ 1.57 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡುವ ಮೂಲಕ ಅತಿ ಹೆಚ್ಚು ಕೊಡುಗೆ ನೀಡಿದೆ. ಇದರ ನಂತರ ಐನಾಕ್ಸ್ 4.70 ಕೋಟಿ ರೂ. ಮೌಲ್ಯದ 1.02 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಿದೆ. ಸಿನಿಪೊಲಿಸ್ ಮತ್ತೊಂದು 60,000 ಟಿಕೆಟ್ಗಳೊಂದಿಗೆ 2.95 ಕೋಟಿ ರೂ. ಗಳಿಸಿದೆ. ಈ ಚಿತ್ರವು 4,000 ಕ್ಕೂ ಹೆಚ್ಚು ಶೋಗಳಲ್ಲಿ ಶೇಕಡಾ 36 ರಷ್ಟು ಮುಂಗಡ ಆಕ್ಯುಪೆನ್ಸಿ ದಾಖಲಿಸುತ್ತಿದೆ.
ಟಾಮ್ ಹಾಲೆಂಡ್ ನಟಿಸಿರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’, ‘ಸ್ಪೈಡರ್ ಮ್ಯಾನ್’ ಸರಣಿಯ 12ನೇ ಸಿನಿಮಾ ಆಗಿದೆ. ಹಾಗೂ ಟಾಮ್ ಹಾಲೆಂಡ್ ಅವರ ಏಳನೇ ಸಿನಿಮಾ ಆಗಿದೆ. ಸಿನಿಮಾದ ಟ್ರೈಲರ್ನಲ್ಲಿ ತೋರಿಸಿರುವಂತೆ ‘ಸ್ಪೈಡರ್ ಮ್ಯಾನ್’ ಅನ್ನು ಇಡೀ ಜಗತ್ತು ಮರೆತು ಹೋಗಿದೆ, ಆತನ ಗೆಳೆಯ, ಗರ್ಲ್ಫ್ರೆಂಡ್ ಸಹ ಸ್ಪೈಡರ್ ಮ್ಯಾನ್ ಬಗ್ಗೆ ಮರೆತು ಹೋಗಿದ್ದಾರೆ. ಜೊತೆಗೆ ಸ್ಪೈಡರ್ ಮ್ಯಾನ್ಗೆ ಹಲವು ಹೊಸ ವೈರಿಗಳು ಹುಟ್ಟುಕೊಂಡಿದ್ದಾರೆ. ಹಲ್ಕ್ ಸಹ ಸ್ಪೈಡರ್ ಮ್ಯಾನ್ಗೆ ಎದುರಾಳಿ ಆಗಿದ್ದಾನೆ. ಸಿನಿಮಾ ಜುಲೈ 30ರಂದು ಭಾರತದಲ್ಲಿ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ