ಶ್ರೀಲಂಕಾದ ದಂಬುಲಾದಲ್ಲಿ ನಡೆದ ಟ್ರೈ-ನೇಷನ್ ‘ಎ’ ಸರಣಿಯ 4ನೇ ಪಂದ್ಯವು ಹೈ-ಡ್ರಾಮಾಗೆ ಸಾಕ್ಷಿಯಾಗಿದೆ. ಭಾರತ ಎ ಮತ್ತು ಶ್ರೀಲಂಕಾ ಎ ನಡುವಣ ಏಕದಿನ ಪಂದವು ಮೊದಲಿಗೆ ಟೈನಲ್ಲಿ ಅಂತ್ಯಗೊಂಡಿತು. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ. ಈ ಸೋಲಿನ ಬೆನ್ನಲ್ಲೇ ಆಟಗಾರರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಈ ಮ್ಯಾಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ‘ಎ’ ತಂಡ ಸೂರ್ಯಂಶ್ ಶೆಡ್ಗೆ (72) ಅವರ ಅರ್ಧಶತಕದ ನೆರವೇರಿಕೆಯಿಂದ 265 ರನ್ ಗಳಿಸಿತ್ತು. ಶ್ರೀಲಂಕಾ ತಂಡವೂ ಸರಿಯಾಗಿ 265 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಗಿ, ಸೂಪರ್ ಓವರ್ ಆಡಲಾಯಿತು.
- ಸೂಪರ್ ಓವರ್ನಲ್ಲಿ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್ ಗುರಿ ನೀಡಿತು.
- 17 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಹಾಗೂ ಸೂರ್ಯಂಶ್ ಶೆಡ್ಗೆ ಕಣಕ್ಕಿಳಿದಿದ್ದರು.
ಸೂಪರ್ ಓವರ್ನ ಮೊದಲ 4 ಎಸೆತಗಳಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು 5 ರನ್ಗಳು ಮಾತ್ರ. ಅದರಂತೆ ಕೊನೆಯ 2 ಎಸೆತಗಳಲ್ಲಿ ಭಾರತ ತಂಡಕ್ಕೆ 12 ರನ್ಗಳು ಬೇಕಿದ್ದವು. 5ನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಫೋರ್ ಬಾರಿಸಿದರು.
ಆದರೆ ಶ್ರೀಲಂಕಾದ 19 ವರ್ಷದ ಮಿಸ್ಟರಿ ಸ್ಲಿಂಗರ್ ಕುಗಥಾಸ್ ಮಥುಲನ್ ಎಸೆದ ಕೊನೆಯ ಎಸೆತವನ್ನು ಕನೆಕ್ಟ್ ಮಾಡಲು ವೈಭವ್ ವಿಫಲರಾದರು. ಈ ಮೂಲಕ ಟೀಮ್ ಇಂಡಿಯಾ 7 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಕೆರಳಿದ ವೈಭವ್ ಸೂರ್ಯವಂಶಿ!
ಸೂಪರ್ ಓವರ್ನಲ್ಲಿ 7 ರನ್ಗಳಿಂದ ಗೆಲ್ಲುತ್ತಿದ್ದಂತೆ ಶ್ರೀಲಂಕಾ ಆಟಗಾರರು ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಾಗೆ, ನಿರಾಸೆಯಿಂದ ಪೆವಿಲಿಯನ್ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿಯವರನ್ನು ನೋಡಿ ಅದೇನೋ ಹೇಳಿದ್ದಾರೆ.
ಈ ಮಾತಿನಿಂದ ಕೆರಳಿದ 15 ವರ್ಷದ ವೈಭವ್ ಸೂರ್ಯವಂಶಿ, ನೇರವಾಗಿ ಹಾಲಂಬಾಗೆ ಅವರತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದರು. ಈ ವಾಗ್ವಾದದ ನಡುವೆ ವೈಭವ್, ಲಂಕಾ ಆಟಗಾರನ ಎದೆಗೆ ಜೋರಾಗಿ ಕೈಯಿಂದ ತಳ್ಳಿದ್ದಾರೆ.
ಆಟಗಾರರ ನಡುವಣ ಈ ಜಗಳದಿಂದಾಗಿ ಮೈದಾನದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ತಕ್ಷಣವೇ ಶ್ರೀಲಂಕಾದ ಹಿರಿಯ ವಿಕೆಟ್ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ಕೆಲ ಆಟಗಾರರು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ ನಡೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
Oh noo.. Wait for the ugly fight by Vaibhav Sooriyavanshi.. That’s too much for a 15 year old. ( If its true ) #SLAVINDA pic.twitter.com/zUS3FviHSr
— Nibraz Ramzan (@nibraz88cricket) June 15, 2026
ಸದ್ಯ ಶ್ರೀಲಂಕಾ ಎ ವಿರುದ್ಧ ಸೋತಿರುವ ಭಾರ ಎ ತಂಡವು ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ್ ಎ ವಿರುದ್ಧ ಆಡಲಿದೆ. ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ತ್ರಿಕೋನ ಸರಣಿಯಲ್ಲಿ ಫೈನಲ್ ಆಡಬಹುದು.