Headlines

Jayamma Death: ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ – Kannada News | Jayamma Passed Away: Vijay Raghavendra, Sriimurali’s Mother Passes Away, Sandalwood Mourns

ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ (Vijay Raghavendra) ಮತ್ತು ಶ್ರೀಮುರಳಿ ಅವರ ತಾಯಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಇಂದು (ಜೂನ್ 16) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

ಜಯಮ್ಮ ಅವರು ಕೇವಲ ಒಂದು ಸ್ಟಾರ್ ಕುಟುಂಬದ ಗೃಹಿಣಿಯಾಗಿರಲಿಲ್ಲ. ಬದಲಿಗೆ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳ ಚಿತ್ರರಂಗದ ಸುದೀರ್ಘ ಪಯಣಕ್ಕೆ ದೊಡ್ಡ ಬೆನ್ನೆಲುಬಾಗಿ ನಿಂತವರು. ಪತಿ ಚಿನ್ನೇಗೌಡರು ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಳ್ಳಲು ಹಾಗೂ ಇಬ್ಬರು ಗಂಡುಮಕ್ಕಳು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಬೆಳೆಯಲು ಜಯಮ್ಮ ಅವರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ನೈತಿಕ ಬೆಂಬಲ ಅಪಾರವಾಗಿತ್ತು. ಸದಾ ತೆರೆಯ ಮರೆಯಲ್ಲೇ ಇದ್ದು ಇಡೀ ಕುಟುಂಬವನ್ನು ಮುನ್ನಡೆಸಿದ ಶಕ್ತಿ ಅವರಾಗಿದ್ದರು.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ‘ಚಿನ್ನಾರಿ ಮುತ್ತ’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹೆಮ್ಮೆ ವಿಜಯ್ ರಾಘವೇಂದ್ರ ಅವರದ್ದು. ನಂತರ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟರಾಗಿ, ರಿಯಾಲಿಟಿ ಶೋಗಳ ನೆಚ್ಚಿನ ಜಡ್ಜ್ ಆಗಿ ಗುರುತಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.

‘ಚಂದ್ರ ಚಕೋರಿ’ ಚಿತ್ರದ ಮೂಲಕ ಚಾಕೊಲೇಟ್ ಹೀರೊ ಆಗಿ ಎಂಟ್ರಿ ಕೊಟ್ಟ ಶ್ರೀಮುರಳಿ, ಆ ಬಳಿಕ ‘ಉಗ್ರಂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದರು. ಆ್ಯಕ್ಷನ್ ಪ್ಯಾಕ್ಡ್ ಸಿನಿಮಾಗಳ ಮೂಲಕ ‘ರೋರಿಂಗ್ ಸ್ಟಾರ್’ ಆಗಿ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದಾರೆ. ಇವರಿಬ್ಬರ ಸಿನಿ ಜರ್ನಿಗೆ ಜಯಮ್ಮ ಅವರ ಬೆಂಬಲ ಇತ್ತು.

ಇದನ್ನೂ ಓದಿ: ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು

ಚಿತ್ರರಂಗದ ಖ್ಯಾತ ನಟ ರಾಜ್‌ಕುಮಾರ್ ಕುಟುಂಬದ ಸಂಬಂಧಿಕರಾಗಿರುವ ಚಿನ್ನೇಗೌಡರ ಕುಟುಂಬದ ಬೆನ್ನೆಲಬು ಇಲ್ಲದಂತಾಗಿರುವುದು ಎಲ್ಲರಿಗೂ ನೋವನ್ನು ಉಂಟುಮಾಡಿದೆ. ಜಯಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *