Headlines

ಗದಗ‌ದ ನರೇಗಲ್ ಪಟ್ಟಣದಲ್ಲಿ ಇದ್ದೂ ಇಲ್ಲದಂತಾದ ಸರ್ಕಾರಿ ಆಸ್ಪತ್ರೆ: ರೋಗಿಗಳಿಗೆ ತಪ್ಪದ ಪರದಾಟ – Kannada News | Upgraded But Empty: Patients Suffer As Naregal Govt Hospital Runs With Only One Dentist

ಗದಗ, ಜೂನ್​​ 16: ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆ ನಿರ್ಮಿಸಲಾಗಿದ್ದರೂ ವೈದ್ಯರು ಮತ್ತು ಸಿಬ್ಬಂದಿ ಕೊರತೆಯ ಕಾರಣ ರೋಗಿಗಳು ಪರದಾಟ ನಡೆಸುತ್ತಿರುವ ಸ್ಥಿತಿ ಗದಗ‌ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಕಂಡುಬಂದಿದೆ. ಕೇಂದ್ರ ಸರ್ಕಾರ ಎನ್ಎಚ್ಎಂ ಯೋಜನೆಯಲ್ಲಿ 2 ಕೋಟಿಗೂ ಅಧಿಕ ಮೊತ್ತದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಭಡ್ತಿ ಪಡೆದಿದೆಯಾದರೂ, ವೈದ್ಯರ ಕೊರತೆಯಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಮಾತ್ರ ಮರಿಚೀಕೆಯಾಗಿಯೇ ಉಳಿದಿದೆ.

ಆಸ್ಪತ್ರೆಗೆ ಒಬ್ಬನೇ ವೈದ್ಯ!

ಪ್ರತಿನಿತ್ಯ ನೂರಾರು ಮಂದಿ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆಯಾದರೂ ಇಲ್ಲಿ ಲಭ್ಯವಿರೋದು ಮಾತ್ರ ಕೇವಲ ಒಬ್ಬ ವೈದ್ಯರು. ಅವರು ಕೂಡ ದಂತ ವೈದ್ಯರಾಗಿರುವ ಕಾರಣ, ಉಳಿದ ರೋಗಿಗಳ ಪಾಡು ಹೇಳತೀರದಾಗಿದೆ. ಅಲ್ಲದೆ ಕೋಟ್ಯಾಂತರ ಹಣ ಖರ್ಚು ಮಾಡಿ ನಿರ್ಮಿಸಿರುವ ಆಸ್ಪತ್ರೆಯ ನಿರ್ವಹಣೆಗೆ ಸಿಬ್ಬಂದಿಯ ಕೊರತೆಯೂ ಇರುವ ಕಾರಣ ಕಟ್ಟಡ ಪಾಳುಬಿದ್ದ ಬಂಗಲೆಯಂತಾಗಿದ್ದರೆ, ಯಂತ್ರೋಪಕರಣಗಳು ಉಪಯೋಗವಿಲ್ಲದೆ ಧೂಳು ಹಿಡಿಯುತ್ತಿವೆ. 30 ಹಾಸಿಗೆ ಸಾಮರ್ಥ್​ಯವಿರುವ ಈ ಆಸ್ಪತ್ರೆಗೆ 6 ವೈದ್ಯರ ಅಗತ್ಯವಿದೆ. ನರ್ಸ್​​ಗಳು ಸೇರಿದಂತೆ 30 ಸಿಬ್ಬಂದಿ ಬೇಕಿದೆ. ಹೀಗಿದ್ದರೂ ಆಡಳಿತ ನಡೆಸುತ್ತಿರುವವರು ಮಾತ್ರ ಇತ್ತ ಗಮನಹರಿಸಲ್ಲ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: 33 ದಿನ ಅನ್ನ, ನೀರಿಲ್ಲದೇ ಸ್ವಾಮೀಜಿಯಿಂದ ಶಿವಯೋಗ ಸಮಾಧಿ; ಇಟ್ಟಿಗೆಯಿಂದ ಗರ್ಭಗುಡಿ ಬಂದ್​​

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗದಗ ಡಿಎಚ್ಒ ಎಸ್. ಎಸ್. ನಿಲಗುಂದ, ಆಸ್ಪತ್ರೆಗೆ ಬೇಕಿರುವ ವೈದ್ಯರು, ಸಿಬ್ಬಂದಿ ನೇಮಕಾತಿ ಹಾಗೂ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಅದೇನೇ ಇದ್ದರೂ ಶೀಘ್ರವೇ ಆಸ್ಪತ್ರೆಗೆ ಅಗತ್ಯ ವೈದ್ಯರ ನೇಮಕ ಆಗಬೇಕು. ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *