ಪತ್ನಿಯ ಹೊತ್ತುಬಂದ ಪತಿImage Credit source: India Today
ಪನ್ನಾ, ಜೂನ್ 18: ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳು ತಳಮಟ್ಟದ ಬಡವರಿಗೆ ತಲುಪಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ಪಡಿತರ ಚೀಟಿ(Ration Card) ಸಿಗದೆ ವಂಚಿತರಾಗಿರುವ ಕುಟುಂಬವೊಂದರ ವ್ಯಕ್ತಿ ದಿವ್ಯಾಂಗ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.
ಪನ್ನಾ ಜಿಲ್ಲೆಯ ಕಲೆಕ್ಟರೇಟ್ಗೆ ಆಗಮಿಸಿದ ಪುಷ್ಪೇಂದ್ರ ಸಿಂಗ್ ಎಂಬ ವ್ಯಕ್ತಿ ತನ್ನ ಮಕ್ಕಳು ಹಾಗೂ ಪತ್ನಿ ನೀಲು ರಾಜಾ ಅವರೊಂದಿಗೆ ಅಧಿಕಾರಿಗಳ ಮುಂದೆ ತಮ್ಮ ಕಳವಳ ತೋಡಿಕೊಂಡಿದ್ದಾರೆ.
ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ನೀಲು ರಾಜಾ, ನಾವು ಅತ್ಯಂತ ಬಡವರಾಗಿದ್ದರೂ ನಮ್ಮ ಗ್ರಾಮ ಪಂಚಾಯತ್ ಅಧಿಕಾರಿಗಳು ನಮಗೆ ತಿಳಿಯದಂತೆ 10 ವರ್ಷಗಳ ಹಿಂದೆ ನಮ್ಮಲ್ಲಿದ್ದ ‘ಅಂತ್ಯೋದಯ ಅನ್ನ ಯೋಜನೆ’ ಕಾರ್ಡನ್ನು ಸಾಮಾನ್ಯ ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಿದ್ದರು. ಅದಾದ ನಂತರ ನಮಗೆ ಹೊಸ ಪಡಿತರ ಚೀಟಿಯನ್ನೇ ನೀಡಿಲ್ಲ. ಇದರಿಂದಾಗಿ ಕಳೆದ ಒಂದು ದಶಕದಿಂದ ನಮ್ಮ ಕುಟುಂಬಕ್ಕೆ ಸಿಗಬೇಕಿದ್ದ ರಿಯಾಯಿತಿ ದರದ ಆಹಾರ ಧಾನ್ಯಗಳು ಸಿಗದೆ ನಾವು ವಂಚಿತರಾಗಿದ್ದೇವೆ ಎಂದು ದೂರಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY-G) ಅಡಿಯಲ್ಲಿ ಸಿಗಬೇಕಿದ್ದ ಮನೆ ಮತ್ತು ಶೌಚಾಲಯ ನಿರ್ಮಾಣದ ಸಹಾಯ ಧನವನ್ನೂ ಈ ಕುಟುಂಬಕ್ಕೆ ನಿರಾಕರಿಸಲಾಗಿದೆ. ನೀಲು ರಾಜಾ ಅವರು ಪ್ರಸ್ತುತ ಭೋಪಾಲ್ನ ಏಮ್ಸ್ಆ ಸ್ಪತ್ರೆಯಲ್ಲಿ ತೀವ್ರ ಕಿಡ್ನಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಉದ್ಯೋಗವಿಲ್ಲದೆ, ಇತ್ತ ರೇಷನ್ ಕಾರ್ಡ್ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಇವರ ಪರಿಸ್ಥಿತಿ ಮಕ್ಕಳ ಶಿಕ್ಷಣದ ಮೇಲೂ ಭಾರಿ ಪರಿಣಾಮ ಬೀರಿದೆ.
ಮತ್ತಷ್ಟು ಓದಿ: BPL ಕಾರ್ಡ್ದಾರರಿಗೆ ಶೀಘ್ರವೇ ಗುಡ್ನ್ಯೂಸ್?: ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ
ಸ್ಥಳೀಯ ಪಂಚಾಯತ್ ಕಾರ್ಯದರ್ಶಿ, ಸರಪಂಚ್ನಿಂದ ಹಿಡಿದು ಮುಖ್ಯಮಂತ್ರಿ ಕಚೇರಿ ವರೆಗೂ ಹತ್ತಾರು ಬಾರಿ ದೂರು ನೀಡಿದರೂ ಯಾರೂ ತಮ್ಮ ಸಮಸ್ಯೆಯನ್ನು ಆಲಿಸಿಲ್ಲ ಎಂದು ದಂಪತಿಗಳು ಅಳಲು ತೋಡಿಕೊಂಡಿದ್ದಾರೆ. ಸಾರ್ವಜನಿಕ ವಿಚಾರಣೆಯ ವೇಳೆ ಮಹಿಳೆ ಭಾವುಕರಾಗಿ ತಕ್ಷಣದ ನೆರವಿಗಾಗಿ ಕೈಮುಗಿದು ಬೇಡಿಕೊಂಡಿದ್ದಾರೆ.
ದಂಪತಿ ಕಷ್ಟದ ಕಥೆಯನ್ನು ಆಲಿಸಿದ ಪನ್ನಾ ಜಿಲ್ಲಾಧಿಕಾರಿ ಉಷಾ ಪರ್ಮಾರ್ ಅವರು, ಈ ಪ್ರಕರಣವನ್ನು ತಕ್ಷಣವೇ ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕುಟುಂಬಕ್ಕೆ ಅಗತ್ಯವಿರುವ ಪಡಿತರ ದಾಖಲೆಗಳನ್ನು ಒದಗಿಸಲು ಮತ್ತು ಅವರು ಅರ್ಹರಾಗಿರುವ ಎಲ್ಲಾ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ತಕ್ಷಣವೇ ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ