ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಮತ್ತು ಭರತನಾಟ್ಯ ನೃತ್ಯಗಾರ್ತಿ ರೂಪಿಕಾ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅಂಕಿತ್ ಅವರೊಂದಿಗೆ ನಟಿ ರೂಪಿಕಾ ಹಸೆಮಣೆ ಏರುತ್ತಿದ್ದು, ಇತ್ತೀಚೆಗಷ್ಟೇ ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಇವರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಮದುವೆ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಈ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಯಾರು ಈ ಅಂಕಿತ್?
ರೂಪಿಕಾ ಕೈಹಿಡಿಯಲಿರುವ ಅಂಕಿತ್ ಅವರು ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 5 ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಸದ್ಯ ಕೆನಡಾದ ‘ಇನ್ವೆಸ್ಕೋ’ (Invesco) ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮ್ಯೂಸಿಕಲ್ ಕಂಪೋಸರ್ ಕೂಡ ಆಗಿರುವ ಅಂಕಿತ್ ಅವರಿಗೆ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿದೆ.
ಆಗಸ್ಟ್‌ನಲ್ಲಿ ಮದುವೆ
ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲೇ ಇವರ ವಿವಾಹ ನಡೆಯಲಿದೆ. ಈ ಮದುವೆ ಸಮಾರಂಭಕ್ಕೆ ರೂಪಿಕಾ ಅವರ ಆಪ್ತರು, ಚಿತ್ರರಂಗದ ಸ್ನೇಹಿತರು ಹಾಗೂ ರಾಜಕೀಯ ರಂಗದ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ ರುತ್ ಪ್ರಭು
ಬಾಲನಟಿಯಿಂದ ಹಿಡಿದು ‘ಲಕ್ಷ್ಮಿ ನಿವಾಸ’ದವರೆಗೆ ರೂಪಿಕಾ ಜರ್ನಿ:
ರೂಪಿಕಾ ಅವರ ನಟನಾ ಪಯಣ ಆರಂಭವಾಗಿದ್ದು ಕಿರುತೆರೆಯಲ್ಲಿ ಬಾಲನಟಿಯಾಗಿ. ಅವರು ‘ಬೆಳ್ಳಿಚುಕ್ಕಿ’, ‘ಬದುಕು’, ‘ಅವಳ ಮನೆ’ ಹಾಗೂ ‘ತ್ರಿವೇಣಿ ಸಂಗಮ’ದಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಪ್ರೇಕ್ಷಕರ ಮನ ಗೆದ್ದರು. 2009ರಲ್ಲಿ ತೆರೆಕಂಡ ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚಿಲಿಪಿಲಿ’ ಸಿನಿಮಾ ಮೂಲಕ ರೂಪಿಕಾ ಚಂದನವನಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ನಂತರ ‘ತೀರ್ಥರೂಪ’, ‘ಮಾಯದಂಥ ಮಳೆ’, ‘ಬೀರ’, ‘ಥರ್ಡ್‌ಕ್ಲಾಸ್’, ‘ರುದ್ರಾಕ್ಷಿಪುರ’, ‘ಮಂಜರಿ’, ‘ನವರಂಗಿ’, ‘ಡೈಮಂಡ್ ಕ್ರಾಸ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಅಷ್ಟೇ ಅಲ್ಲದೆ, ‘ಚಿಲ್ ಬ್ರೋ’ ಎಂಬ ತೆಲುಗು ಚಿತ್ರದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ಸಿಂಚನಾ ಹೆಸರಿನ ಪಾತ್ರದ ಮೂಲಕ ರೂಪಿಕಾ ಪ್ರೇಕ್ಷಕರ ಮನೆಮಾತಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.