ನವದೆಹಲಿ, ಜೂನ್ 19: ಪಶ್ಚಿಮ ಬಂಗಾಳದ ಸಾರ್ವತ್ರಿಕ ಚುನಾವಣೆಗಳ ಬೆನ್ನಲ್ಲೇ ಟಿಎಂಸಿ (TMC) ಪಕ್ಷದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಕ್ಷದ ನಿಲುವಿಗೆ ವಿರುದ್ಧವಾಗಿ ಬಂಡಾಯ ಎದ್ದು, ಬೇರೆ ಪಕ್ಷದೊಂದಿಗೆ ವಿಲೀನ ಪ್ರಕ್ರಿಯೆಗೆ ಮುಂದಾಗಿರುವ 20 ಸಂಸದರ ವಿರುದ್ಧ ಟಿಎಂಸಿ ಹೈಕಮಾಂಡ್ ಕಠಿಣ ಕ್ರಮಕ್ಕೆ ಮುಂದಾಗಿದೆ. ನವದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಆ ಎಲ್ಲಾ 20 ಬಂಡಾಯ ಸಂಸದರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಲಿಖಿತ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಟಿಎಂಸಿ ಪಕ್ಷದ ಸುಮಾರು 20 ಸಂಸದರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಪ್ರತ್ಯೇಕ ಬಣ ರಚಿಸಿಕೊಂಡಿದ್ದರು. ಈ ಬಣವು ಮತ್ತೊಂದು ಪ್ರಮುಖ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ಮಾತುಕತೆ ನಡೆಸಿತ್ತು. ಸಂಸತ್ತಿನಲ್ಲಿ ಪಕ್ಷಾಂತರ ನಿರೋಧಕ ಕಾಯ್ದೆಯಿಂದ ಬಚಾವಾಗಲು 2/3ರಷ್ಟು ಬಹುಮತದ ಅಗತ್ಯವಿದ್ದು, ಈ ಸಂಸದರು ಆ ತಾಂತ್ರಿಕತೆಯನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.
VIDEO | Delhi: After meeting Lok Sabha Speaker Om Birla, TMC MP Abhishek Banerjee says, “If any MP finds my statement offensive, they should file a case against me. I will prove my point in a court of law. By threatening people, intimidating them, and luring them with crores of… pic.twitter.com/jUF1tKrtlW
— Press Trust of India (@PTI_News) June 19, 2026
ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ಉನ್ನತ ಮಟ್ಟದ ನಿಯೋಗವು ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಯಿತು. ಪಕ್ಷದ 20 ಬಂಡಾಯ ಸಂಸದರು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷದೊಂದಿಗೆ ವಿಲೀನಗೊಂಡಿದ್ದೇವೆ ಎಂದು ಮಾಡಿರುವ ದಾವೆಯನ್ನು ನಿಯೋಗವು ಕಟ್ಟುನಿಟ್ಟಾಗಿ ವಿರೋಧಿಸಿತು. ಈ ನಿಯೋಗದಲ್ಲಿ ಟಿಎಂಸಿ ಹಿರಿಯ ನಾಯಕರಾದ ಕಲ್ಯಾಣ್ ಬ್ಯಾನರ್ಜಿ, ಡೆರೆಕ್ ಒಬ್ರಿಯಾನ್, ಮಹುವಾ ಮೊಯಿತ್ರಾ ಮತ್ತು ಸೌಗತಾ ರಾಯ್ ಇದ್ದರು.
ಇದನ್ನೂ ಓದಿ: ಎನ್‌ಸಿಪಿಐಗೆ ಹೊಸ ಅಧ್ಯಕ್ಷರ ನೇಮಕ: ಟಿಎಂಸಿ ಬಂಡಾಯ ಸಂಸದರ ಅರ್ಜಿ ಸ್ವೀಕರಿಸುತ್ತಾರಾ ಸ್ಪೀಕರ್ ಓಂ ಬಿರ್ಲಾ?
ಲೋಕಸಭೆಯಲ್ಲಿ ಟಿಎಂಸಿ ಪಕ್ಷದ ಸಂಸದೀಯ ನಾಯಕರೂ ಆಗಿರುವ ಅಭಿಷೇಕ್ ಬ್ಯಾನರ್ಜಿ ದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿರೋಧಕ ಕಾಯ್ದೆ) ಅಡಿಯಲ್ಲಿ ಈ 20 ಸಂಸದರು ಮೂಲ ಪಕ್ಷದ ವಿಪ್ಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಆದ್ದರಿಂದ ಇವರ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡು ಲೋಕಸಭೆಯಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
VIDEO | After meeting Lok Sabha Speaker Om Birla, TMC MP Abhishek Banerjee says, “I can only present my side before him, and I have done that. I submitted the disqualification petitions that I showed you. Around 20 such petitions have been submitted. All our prayers are included… pic.twitter.com/fD9A1reS3U
— Press Trust of India (@PTI_News) June 19, 2026
ಎನ್‌ಸಿಪಿಐ ಜೊತೆಗಿನ ವಿಲೀನದ ನಂತರ ತಮಗೆ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡಬೇಕೆಂದು ಕೋರಿ 20 ಬಂಡಾಯ ಸಂಸದರು ಸಲ್ಲಿಸಿದ್ದ ಮನವಿಯ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಲೋಕಸಭೆಯ ಟಿಎಂಸಿ ನಾಯಕರಾಗಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಪಕ್ಷದ ನಿಲುವನ್ನು ಮಂಡಿಸಲು ಸ್ಪೀಕರ್ ಓಂ ಬಿರ್ಲಾ ಆಹ್ವಾನ ನೀಡಿದ್ದರು. ಕಳೆದ ವಾರವಷ್ಟೇ ಬ್ಯಾನರ್ಜಿ ಅವರು ಸ್ಪೀಕರ್ ಅವರಿಗೆ ಪತ್ರ ಬರೆದು, ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಪ್ರತ್ಯೇಕ ಬಣ ಎಂದು ಹೇಳಿಕೊಳ್ಳುವ ಯಾವುದೇ ಗುಂಪಿಗೆ ಯಾವುದೇ ರೀತಿಯ ಮಾನ್ಯತೆ, ಸ್ಥಾನಮಾನ ಅಥವಾ ಸಂಸದೀಯ ಸೌಲಭ್ಯಗಳನ್ನು ನೀಡದಂತೆ ಒತ್ತಾಯಿಸಿದ್ದರು.
VIDEO | After meeting Lok Sabha Speaker Om Birla, TMC MP Abhishek Banerjee says, “If you join another political party, that means you have given up your membership of the All India Trinamool Congress. So, if you were elected on one symbol and then, after two years, suddenly claim… pic.twitter.com/ZVckRignf9
— Press Trust of India (@PTI_News) June 19, 2026
ಇದನ್ನೂ ಓದಿ: ‘ಎನ್‌ಸಿಪಿಐ’ ಜೊತೆ 20 ಟಿಎಂಸಿ ಬಂಡಾಯ ಸಂಸದರ ವಿಲೀನ, ಸಂಸತ್ತಿನಲ್ಲಿ ಹೊಸ ಬಣದ ಉದಯ
ಬಂಡಾಯ ಸಂಸದರ ವಿರುದ್ಧ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಕಾನೂನಾತ್ಮಕವಾಗಿಯೂ ಹೋರಾಡಲು ಮಮತಾ ಬ್ಯಾನರ್ಜಿ ಬ್ಲೂಪ್ರಿಂಟ್ ಸಿದ್ಧಪಡಿಸಿದ್ದಾರೆ. ಒಂದು ವೇಳೆ ಲೋಕಸಭಾ ಸ್ಪೀಕರ್ ಕಡೆಯಿಂದ ಕ್ರಮ ಕೈಗೊಳ್ಳಲು ವಿಳಂಬವಾದರೆ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೂಡ ಟಿಎಂಸಿ ಸಿದ್ಧತೆ ನಡೆಸಿದೆ. ಸದ್ಯಕ್ಕೆ ಓಂ ಬಿರ್ಲಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಎಲ್ಲರ ಗಮನ ನೆಟ್ಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ