ಸಿನಿಮಾ ರಂಗದಲ್ಲಿ ಬರೋಬ್ಬರಿ ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಪ್ರಯಾಣ ಬೆಳೆಸಿರುವ ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಈಗಲೂ ಕೆಲಸದ ಮೇಲಿನ ಶ್ರದ್ಧೆ ಹಾಗೆಯೇ ಇದೆ. ಸಿನಿಮಾ ಕೆಲಸದಿಂದ ಆಗುವ ಒತ್ತಡವು ರಾತ್ರಿ ಇಡೀ ನಿದ್ದೆ ಬರದಂತೆ ಮಾಡುತ್ತಿದೆಯಂತೆ. ಚಿತ್ರರಂಗದ ದಣಿವರಿಯದ ನಾಯಕ ಎಂದೇ ಹೆಸರಾಗಿರುವ ಅಮಿತಾಭ್ (Amitabh), ಶೂಟಿಂಗ್ ಮುಗಿದು ಮನೆಗೆ ಬಂದ ಮೇಲೂ ಸಿನಿಮಾದ ಆಲೋಚನೆಗಳೇ ತಲೆಯಲ್ಲಿ ಓಡುತ್ತಿರುತ್ತವೆ ಎಂದು ಒಪ್ಪಿಕೊಂಡಿದ್ದಾರೆ.
ಇತ್ತೀಚಿನ ತಮ್ಮ ಬ್ಲಾಗ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಬಿಗ್ ಬಿ, ಬಿಡುವಿಲ್ಲದ ಕೆಲಸದ ವೇಳಾಪಟ್ಟಿ ಹಾಗೂ ಅದರಿಂದಾಗಿ ತಮಗೆ ಎದುರಾಗುತ್ತಿರುವ ನಿದ್ರಾಹೀನತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮುಂಬರುವ ಶೂಟಿಂಗ್ಗಳು, ತಮಗಿರುವ ಜವಾಬ್ದಾರಿಗಳ ಬಗ್ಗೆಯೇ ಸದಾ ಯೋಚಿಸುವುದರಿಂದ ಸರಿಯಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆದಾಗ್ಯೂ, ಈ ವಯಸ್ಸಿನಲ್ಲೂ ಅವರು ಸಿನಿಮಾಗಾಗಿ ಶ್ರಮಿಸುತ್ತಿದ್ದಾರೆ.
‘ಬೆಳಗಾಗಿದ್ದೇ ಗೊತ್ತಾಗಲಿಲ್ಲ’ ಎಂದ ನಟ:
ಶುಕ್ರವಾರ ಮುಂಜಾನೆ ಹಿಂದಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಬಿಗ್ ಬಿ, ‘ಕೆಲಸದ ನಡುವೆ ಸಿಕ್ಕ ಕೆಲವು ಕ್ಷಣಗಳಿವು. ಶೂಟಿಂಗ್ ಮುಗಿಸಿದ ಬಳಿಕ, ಅದನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸಿತು. ಅದಕ್ಕೆ ಅನುಮತಿ ಪಡೆದು ಮತ್ತೊಮ್ಮೆ ಆ ದೃಶ್ಯವನ್ನು ಮಾಡಿದೆ. ಈಗ ಅದು ಮೊದಲಗಿಂತ ಚೆನ್ನಾಗಿ ಮೂಡಿಬಂದಿದೆಯೋ ಇಲ್ಲವೋ ಗೊತ್ತಿಲ್ಲ, ಪ್ರೇಕ್ಷಕರೇ ನಿರ್ಧರಿಸಬೇಕು. ಇದೇ ಯೋಚನೆಯಲ್ಲಿ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಮುಂಜಾನೆಯಾಗಿದ್ದೇ ತಿಳಿಯಲಿಲ್ಲ’ ಎಂದು ಬರೆದುಕೊಂಡು ತಮ್ಮ ಅಭಿಮಾನಿಗಳಿಗೆ ಪ್ರೀತಿ ಪೂರ್ವಕ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಅಮಿತಾಭ್ ಬಚ್ಚನ್-ಮಾಧುರಿ ಒಟ್ಟಿಗೆ ಕೆಲಸ ಮಾಡದಿರಲು ಕಾರಣವಾದ ಆ ಹೀರೋ ಯಾರು?
36 ಗಂಟೆಗಳ ದಿನ ಬೇಕಂತೆ!
ಅಮಿತಾಭ್ ಸದ್ಯ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಕುರಿತು ಮತ್ತೊಂದು ಪೋಸ್ಟ್ನಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದ ಅವರು, ‘ದಿನದ 24 ಗಂಟೆಗಳಲ್ಲಿ ಮಾಡಲು ತುಂಬಾ ಕೆಲಸಗಳಿವೆ, ಸಮಯವೇ ಸಾಲುತ್ತಿಲ್ಲ. ದಿನಕ್ಕೆ 36 ಗಂಟೆಗಳಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಒಂದು ವೇಳೆ 36 ಗಂಟೆ ಸಿಕ್ಕರೆ, ಆಗ ಮನುಷ್ಯ 48 ಗಂಟೆ ಬೇಕು ಎನ್ನಬಹುದು, ಅದು ಜೀವನದ ತತ್ವ. ಆದರೆ ಕಲಿಯಲು, ಸಾಧಿಸಲು ತುಂಬಾ ಇದೆ, ಸಮಯ ಮಾತ್ರ ಕಡಿಮೆ’ ಎಂದು ಬರೆದಿದ್ದಾರೆ. ಅಲ್ಲದೆ, ಸದಾ ನಮ್ಮನ್ನು ನಾವು ಶ್ರೇಷ್ಠ ಅಂದುಕೊಳ್ಳಬಾರದು, ನಮ್ಮನ್ನು ಮೀರಿಸುವವರು ಜಗತ್ತಿನಲ್ಲಿ ಇರುತ್ತಾರೆ, ಪರರ ಕೆಲಸವನ್ನು ಗೌರವಿಸಬೇಕು ಎಂಬ ಜೀವನದ ತತ್ವವನ್ನೂ ಅವರು ಹಂಚಿಕೊಂಡಿದ್ದಾರೆ.
‘ಕಲ್ಕಿ 2’ ಚಿತ್ರದಲ್ಲಿ ಮತ್ತೆ ಅಶ್ವತ್ಥಾಮ:
ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಚಿತ್ರದ ಎರಡನೇ ಭಾಗದ ಕೆಲಸಗಳು ಈಗಾಗಲೇ ಆರಂಭವಾಗಿವೆ ಎಂದು ಬಿಗ್ ಬಿ ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿ ಅವರು ಮತ್ತೊಮ್ಮೆ ಅಶ್ವತ್ಥಾಮನಾಗಿ ಅಬ್ಬರಿಸಲಿದ್ದಾರೆ. ಈ ಸೀಕ್ವೆಲ್ನಲ್ಲಿ ಅಮಿತಾಭ್ ಜೊತೆಗೆ ಪ್ರಭಾಸ್ ಹಾಗೂ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಮೊದಲ ಭಾಗದಲ್ಲಿದ್ದ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಇರುವುದಿಲ್ಲ ಎನ್ನಲಾಗಿದ್ದು, ಅವರ ಜಾಗಕ್ಕೆ ಸಾಯಿ ಪಲ್ಲವಿ ಬರಲಿದ್ದಾರೆ ಎಂಬ ವದಂತಿ ಇದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:33 am, Sat, 20 June 26