Headlines

ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್! – Kannada News | Bengaluru Deepfake Scandal: Educated Suspects Arrested for Rukmini Vasanth AI Exploitation

AI ಡೀಪ್‌ಫೇಕ್ ಫೋಟೋ-ವಿಡಿಯೋ ಸೃಷ್ಟಿಸಿದ ಮೂವರು ಸುಶಿಕ್ಷಿತ ಆರೋಪಿಗಳು

ಬೆಂಗಳೂರು, ಜೂ.20: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರುಕ್ಮಿಣಿ ವಸಂತ ಅವರ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಫೋಟೋ ಹಾಗೂ ವಿಡಿಯೋಗಳನ್ನು ಸೃಷ್ಟಿಸಿ ವೈರಲ್ ಮಾಡಿದ್ದ ಸೈಬರ್ ಅಪರಾಧಿಗಳನ್ನು ಬೆಂಗಳೂರಿನ ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದು, ಆರೋಪಿಗಳ ಆಘಾತಕಾರಿ ಹಿನ್ನೆಲೆ ಈಗ ಬೆಳಕಿಗೆ ಬಂದಿದೆ. ಬಂಧಿತರೆಲ್ಲರೂ ಸುಶಿಕ್ಷಿತರು ಮತ್ತು ಸಮಾಜದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದವರಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬಾಗಲಕೋಟೆ ನಿವಾಸಿ ರವಿಕುಮಾರ್ (24), ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ರಂಜಿತ್ ಕುಮಾರ್ (25) ಮತ್ತು ಮೂಲತಃ ತೀರ್ಥಹಳ್ಳಿಯವರಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದ ಚಂದ್ರಕಾಂತ್ (33) ಎಂದು ಗುರುತಿಸಲಾಗಿದೆ. ಒಬ್ಬರ ಹಿನ್ನಲೆ ನೋಡಿ ಪೊಲೀಸರಿಗೆ ಶಾಕ್ ಆಗಿದೆ. ಈ ಪ್ರಕರಣದ ಮೊದಲ ಆರೋಪಿ ರವಿ ಕುಮಾರ್ ಬಿಎಸ್‌ಸಿ ನರ್ಸಿಂಗ್ ಮುಗಿಸಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದನು. ಇತ್ತೀಚೆಗಷ್ಟೇ ಯೂಟ್ಯೂಬ್‌ನಿಂದ ಮೊದಲ ಗಳಿಕೆ (ಹಣ) ಪಡೆದಿದ್ದ ಈತನಿಗೆ ಸುಲಭವಾಗಿ ಹಣ ಸಂಪಾದಿಸುವ ಆಸೆ ಹುಟ್ಟಿತ್ತು. ಅಂದಿನಿಂದ ವೀಕ್ಷಣೆ (Views) ಹೆಚ್ಚಿಸಿಕೊಳ್ಳಲು ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಲು ಶುರು ಮಾಡಿದ್ದನು ಎಂದು ಹೇಳಲಾಗಿದೆ.

ಇನ್ನು ಎರಡನೇ ಆರೋಪಿ ರಂಜಿತ್ ಕುಮಾರ್, ವಾರ್ಷಿಕ 20 ಲಕ್ಷ ರೂಪಾಯಿ ಭಾರಿ ಸಂಬಳದ ಪ್ಯಾಕೇಜ್ ಹೊಂದಿದ್ದ ಈತ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ತಂತ್ರಜ್ಞಾನದ ಜ್ಞಾನವಿದ್ದ ಈತ ಕೇವಲ ‘ಫನ್’ (ವಿನೋದ) ಮತ್ತು ಮಜಾ ಮಾಡಲು ಎಲ್ಲಾ ಪ್ರಮುಖ ನಟಿಯರ ಎಐ ಡೀಪ್‌ಫೇಕ್ ವಿಡಿಯೋಗಳನ್ನು ತಯಾರಿಸುತ್ತಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿ ಚಂದ್ರಕಾಂತ್ ಈತ ಬೆಂಗಳೂರಿನ ಪ್ರತಿಷ್ಠಿತ ಚಾರ್ಟೆಡ್ ಅಕೌಂಟೆಂಟ್ (CA) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಸಂಬಳ ಪಡೆಯುತ್ತಿದ್ದನು. ಕೇವಲ ವಿಕೃತ ಸಂತೋಷ ಮತ್ತು ಮಜಾ ತೆಗೆದುಕೊಳ್ಳಲು ನಟಿಯರ ಫೋಟೋಗಳನ್ನು ಡೀಪ್‌ಫೇಕ್ ಮಾಡುತ್ತಿದ್ದಾಗಿ ಈತನೂ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ವಿಡಿಯೋ ಪ್ರಕರಣ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ

ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಹೈ-ಎಂಡ್ ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಎಐ ಆಪ್ ಮತ್ತು ಸಾಫ್ಟ್‌ವೇರ್‌ಗಳನ್ನು ಬಳಸಿ ನಟಿಯರ ಮುಖವನ್ನು ಅಶ್ಲೀಲ ವಿಡಿಯೋಗಳಿಗೆ ಎಡಿಟ್ ಮಾಡುತ್ತಿದ್ದರು. ಸದ್ಯ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಸೈಬರ್ ಕಮಾಂಡ್ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದು ತೀವ್ರ ತನಿಖೆ ನಡೆಸುತ್ತಿದ್ದಾರೆ. ಸುಶಿಕ್ಷಿತರೇ ಇಂತಹ ಸೈಬರ್ ವಿಕೃತಿಯಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *