ಬೆಳಗಾವಿ/ಬೀದರ್, (ಜೂನ್ 20): ಕರ್ನಾಟಕದ ಹಲವು ಭಾಗಗಳಲ್ಲಿ ಆರಂಭದಲ್ಲಿ ಅಬ್ಬರಿಸಿದ್ದ ಮಳೆ ಇದೀಗ ಕೈಕೊಟ್ಟಿದ್ದು, ಮುಂಗಾರು ಮಳೆ ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ.ಕೆಲ ಕಡೆ ಆರಂಭಿಕ ಮುಂಗಾರು ಹದಬರಿತವಾಗಿ ಆದ ಪರಿಣಾಮ ರೈತರು ಬಿತ್ತನೆ ಮಾಡಿದ್ದಾರೆ.ಇನ್ನೂ ಕೆಲ ಕಡೆ ಮಳೆಯಾಗದ ಕಾರಣ ಬಿತ್ತನೆಯೇ ಆಗಿಲ್ಲ.ಬಿತ್ತನೆ ಮಾಡಿದ ರೈತರು ಮಳೆಯಾಗದ ಹಿನ್ನೆಲೆ ಬೆಳೆ ಒಣಗಿ ನಷ್ಟ ಅನುಭವಿಸುತ್ತಿದ್ದರೆ, ಇನ್ನು ಅದೆಷ್ಟೊ ರೈತರು ಬಿತ್ತನೆ ಮಾಡದೆ ಆಕಾಶ ನೋಡುವಂತಾಗಿದೆ. ವರುಣ ಕೃಪೆತೋರದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.