ಭಾರತೀಯ ಸಿನಿಮಾ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ ‘ಲಗಾನ್’ (Lagaan) ಬಿಡುಗಡೆಯಾಗಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದೆ. ಈ ಬೆಳ್ಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಇಡೀ ಚಿತ್ರರಂಗವೇ ಈ ಸಿನಿಮಾವನ್ನು ಮತ್ತೆ ನೆನಪಿಸಿಕೊಳ್ಳುತ್ತಿದೆ. ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಕೂಡ ಈ ಚಿತ್ರದೊಂದಿಗಿನ ತಮ್ಮ ಅಪರೂಪದ ತೆರೆಮರೆಯ ಸಂಪರ್ಕವನ್ನು ನೆನಪು ಮಾಡಿಕೊಂಡಿದ್ದಾರೆ. ಆಮಿರ್ ಖಾನ್ ನಟನೆಯ ಈ ಸಿನಿಮಾ ತಂಡಕ್ಕೆ ಸಚಿನ್ ಅವರು ಒಂದು ಸಲಹೆಯನ್ನು ನೀಡಿದ್ದರು.
ಆಶುತೋಷ್ ಗೋವಾರಿಕರ್ ನಿರ್ದೇಶನದ, ಆಮಿರ್ ಖಾನ್ ನಿರ್ಮಾಣದ ಈ ಕ್ರೀಡಾ ಆಧಾರಿತ, ದೇಶಭಕ್ತಿ ಕಥಾಹಂದರದ ಸಿನಿಮಾ 2001ರಲ್ಲಿ ತೆರೆಕಂಡು ಇತಿಹಾಸ ಸೃಷ್ಟಿಸಿತ್ತು. ಬ್ರಿಟಿಷರ ಕಾಲಘಟ್ಟದ ಕಥೆ ಹೊಂದಿದ್ದ ಈ ಚಿತ್ರದಲ್ಲಿ, ಗ್ರಾಮಸ್ಥರು ಭಾರಿ ತೆರಿಗೆಯಿಂದ ಮುಕ್ತಿ ಪಡೆಯಲು ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಕ್ರಿಕೆಟ್ ಪಂದ್ಯದ ಸವಾಲನ್ನು ಗೆಲ್ಲಬೇಕಾದ ರೋಮಾಂಚನಕಾರಿ ಕಹಾನಿಯನ್ನು ತೋರಿಸಲಾಗಿತ್ತು.
ಇತ್ತೀಚಿನ ಸಂವಾದವೊಂದರಲ್ಲಿ ಸಚಿನ್ ತೆಂಡುಲ್ಕರ್ ಅವರು, ಸಿನಿಮಾದ ಶೂಟಿಂಗ್ ಹಂತದಲ್ಲಿ ನಡೆದ ಒಂದು ಆಸಕ್ತಿದಾಯಕ ಘಟನೆಯನ್ನು ಹಂಚಿಕೊಂಡಿದ್ದಾರೆ. ‘ಲಗಾನ್’ ಚಿತ್ರದ ಕ್ರಿಕೆಟ್ ಪಂದ್ಯಗಳ ದೃಶ್ಯಗಳಿಗಾಗಿ ನೈಜವಾದ ವೀಕ್ಷಕರ ಧ್ವನಿಗಾಗಿ ನಿರ್ದೇಶಕರು ಹುಡುಕಾಟ ನಡೆಸುತ್ತಿದ್ದಾಗ ತಾವು ನೆರವಾಗಿದ್ದನ್ನು ಸಚಿನ್ ನೆನಪಿಸಿಕೊಂಡಿದ್ದಾರೆ.
ಸಚಿನ್ ತೆಂಡುಲ್ಕರ್ ವಿಡಿಯೋ:
ಆ ದಿನಗಳನ್ನು ನೆನೆದ ಸಚಿನ್, ‘ಚಿತ್ರ ಬಿಡುಗಡೆಯಾಗುವ ಎರಡು ವರ್ಷಗಳ ಮೊದಲು, ನಿರ್ದೇಶಕರು ನನ್ನ ಬಳಿ ಬಂದು ಸ್ಟೇಡಿಯಂನಲ್ಲಿ ನೈಜವಾಗಿ ಕೇಳಿಸುವ ವೀಕ್ಷಕರ ಧ್ವನಿ ಎಲ್ಲಿ ಸಿಗಬಹುದು ಎಂದು ಕೇಳಿದ್ದರು. ನಾವು ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಆಡುತ್ತಿದ್ದೇವೆ. ನೀವೇಕೆ ನೇರವಾಗಿ ವಾಂಖೆಡೆ ಸ್ಟೇಡಿಯಂಗೆ ಬಂದು ಅಲ್ಲಿನ ಲೈವ್ ಆಡಿಯೋ ರೆಕಾರ್ಡ್ ಮಾಡಿಕೊಳ್ಳಬಾರದು ಅಂತ ನಾನು ಸಲಹೆ ನೀಡಿದ್ದೆ’ ಎಂದು ಹೇಳಿದ್ದಾರೆ. ಅದರಂತೆಯೇ ಚಿತ್ರತಂಡ ಸ್ಟೇಡಿಯಂ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡು ಸಿನಿಮಾದಲ್ಲಿ ಬಳಸಿಕೊಂಡಿತ್ತು.
ಇದನ್ನೂ ಓದಿ: ‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್
ಅಷ್ಟೇ ಅಲ್ಲದೆ, ತಮ್ಮ ಮಗ ಅರ್ಜುನ್ ತೆಂಡುಲ್ಕರ್ ಚಿಕ್ಕವನಿದ್ದಾಗ ಪ್ರತಿ ಸಂಜೆ ಕ್ರಿಕೆಟ್ ಆಡಿ ಬಂದ ನಂತರ ಊಟ ಮಾಡುವಾಗ ‘ಲಗಾನ್’ ಚಿತ್ರವನ್ನು ಟಿವಿಯಲ್ಲಿ ನೋಡುತ್ತಿದ್ದ ದಿನಗಳಲ್ಲಿ ಸಚಿನ್ ನೆನಪಿಸಿಕೊಂಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತದ ಈ ಚಿತ್ರದ ಹಾಡುಗಳು ಇಂದಿಗೂ ತಮ್ಮ ಇಡೀ ಕುಟುಂಬಕ್ಕೆ ಖುಷಿ ನೀಡುತ್ತವೆ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.