ವೈಷ್ಣವ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಸ್ಥಾನ ಪಡೆದಿರುವ ಉಪವಾಸ ಎಂದರೆ ಅದು ‘ನಿರ್ಜಲ ಏಕಾದಶಿ’. ಶ್ರೀಮನ್ನಾರಾಯಣನಿಗೆ ಅರ್ಪಿತವಾದ ಈ ಶ್ರೇಷ್ಠ ವ್ರತದ ಉಲ್ಲೇಖಗಳು ವಿಷ್ಣು ಪುರಾಣ ಸೇರಿದಂತೆ ಸನಾತನ ಧರ್ಮದ ಹಲವು ಪ್ರಮುಖ ಗ್ರಂಥಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಒಂದು ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ. ಆದರೆ, ಅಧಿಕ ಮಾಸ ಬರುವ ವರ್ಷಗಳಲ್ಲಿ ಈ ಸಂಖ್ಯೆ 26ಕ್ಕೆ ಏರುತ್ತದೆ. ಈ ಎಲ್ಲಾ ಏಕಾದಶಿಗಳಲ್ಲಿ ಜ್ಯೇಷ್ಠ ಮಾಸದ ಶುಕ್ಲ ಪಕ್ಷದಲ್ಲಿ ಬರುವ ‘ನಿರ್ಜಲ ಏಕಾದಶಿ’ ಅತ್ಯಂತ ಮಂಗಳಕರ ಹಾಗೂ ಆಧ್ಯಾತ್ಮಿಕವಾಗಿ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ.
ಭೀಮನಿಗಾಗಿಯೇ ಮೂಡಿಬಂದ ವ್ರತದ ಹಿನ್ನೆಲೆ:
ಧಾರ್ಮಿಕ ನಂಬಿಕೆಗಳ ಪ್ರಕಾರ, ನಿರ್ಜಲ ಏಕಾದಶಿ ಉಪವಾಸವನ್ನು ನಿಗದಿತ ನಿಯಮಗಳೊಂದಿಗೆ ಆಚರಿಸುವುದರಿಂದ ವರ್ಷದ ಉಳಿದೆಲ್ಲಾ ಏಕಾದಶಿ ವ್ರತಗಳನ್ನು ಆಚರಿಸಿದಷ್ಟೇ ಪುಣ್ಯ ಲಭಿಸುತ್ತದೆ. ಮಹಾಭಾರತದ ಕಾಲದಲ್ಲಿ ಪಾಂಡವರಲ್ಲಿ ಒಬ್ಬನಾದ ಭೀಮನಿಗೆ ತನ್ನ ಅತಿಯಾದ ಹಸಿವಿನ ಕಾರಣದಿಂದಾಗಿ ಪ್ರತಿ ತಿಂಗಳೂ ಬರುವ ಏಕಾದಶಿ ಉಪವಾಸಗಳನ್ನು ಆಚರಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ವ್ಯಾಸ ಮಹರ್ಷಿಗಳು ಭೀಮನಿಗೆ ಇಡೀ ವರ್ಷದ ಏಕಾದಶಿಗಳ ಫಲವನ್ನು ಒಂದೇ ದಿನದಲ್ಲಿ ಪಡೆಯಲು ಜ್ಯೇಷ್ಠ ಮಾಸದ ಈ ನಿರ್ಜಲ ಏಕಾದಶಿಯನ್ನು ಆಚರಿಸಲು ಸೂಚಿಸಿದರು. ಈ ಕಾರಣದಿಂದಾಗಿಯೇ ಇದಕ್ಕೆ ‘ಭೀಮ ಏಕಾದಶಿ’ ಅಥವಾ ‘ಪಾಂಡವ ಏಕಾದಶಿ’ ಎಂಬ ಹೆಸರೂ ಇದೆ.
ನೀರಿಲ್ಲದ ಕಠಿಣ ಉಪವಾಸದ ಮಹತ್ವ:
ಹೆಸರೇ ಸೂಚಿಸುವಂತೆ ‘ನಿರ್ಜಲ’ ಎಂದರೆ ನೀರಿಲ್ಲದೆ ಇರುವುದು. ಈ ಉಪವಾಸವನ್ನು ಅತ್ಯಂತ ಕಠಿಣವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ವ್ರತದ ದಿನದಂದು ಭಕ್ತರು ಅನ್ನ-ಆಹಾರ ಮಾತ್ರವಲ್ಲದೆ, ಕನಿಷ್ಠ ಒಂದು ಹನಿ ನೀರನ್ನೂ ಸಹ ಸೇವಿಸದೆ ಸಂಪೂರ್ಣ ಉಪವಾಸ ಮಾಡಬೇಕಾಗುತ್ತದೆ. ಜ್ಯೇಷ್ಠ ಮಾಸದ ಕಡು ಬೇಸಿಗೆಯ ಸಮಯದಲ್ಲಿ ನೀರನ್ನೂ ಕುಡಿಯದೆ ಇಂತಹ ಕಠಿಣ ನಿಯಮವನ್ನು ಪಾಲಿಸುವುದು ಭಕ್ತರ ಮಾನಸಿಕ ಶಿಸ್ತು, ಧೃಢತೆ ಮತ್ತು ಭಗವಂತನ ಮೇಲಿರುವ ಅಚಲ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
2026ರ ನಿರ್ಜಲ ಏಕಾದಶಿಯ ವಿಶೇಷತೆ ಏನು?
2026ನೇ ವರ್ಷದಲ್ಲಿ ನಿರ್ಜಲ ಏಕಾದಶಿಯನ್ನು ಜೂನ್ 25 ರಂದು ಆಚರಿಸಲಾಗುತ್ತಿದೆ. ಈ ವರ್ಷದ ವಿಶೇಷತೆಯೆಂದರೆ, ಜ್ಯೇಷ್ಠ ಮಾಸದಲ್ಲಿ ‘ಅಧಿಕ ಮಾಸ’ ಸಂಭವಿಸಿದೆ. ಈ ಅಧಿಕ ಮಾಸದಲ್ಲಿ ಬರುವ ಪದ್ಮಿನಿ ಏಕಾದಶಿ ಮತ್ತು ಪರಮ ಏಕಾದಶಿಗಳನ್ನು ಸಹ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ಎರಡು ವಿಶೇಷ ಏಕಾದಶಿಗಳ ಪುಣ್ಯವೂ ಸಹ ನಿರ್ಜಲ ಏಕಾದಶಿಯನ್ನು ಆಚರಿಸುವುದರಿಂದಲೇ ಸಿಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ, ಈ ವರ್ಷ ನಿರ್ಜಲ ಏಕಾದಶಿ ವ್ರತವನ್ನು ಶ್ರದ್ಧೆಯಿಂದ ಆಚರಿಸುವ ಭಕ್ತರಿಗೆ ಒಟ್ಟು 26 ಏಕಾದಶಿಗಳ ಮಹಾ ಪುಣ್ಯ ಫಲ ಪ್ರಾಪ್ತಿಯಾಗಲಿದೆ ಎಂದು ವಿದ್ವಾಂಸರು ಹೇಳುತ್ತಾರೆ.
ನಿರ್ಜಲ ಏಕಾದಶಿ ವ್ರತದ ದಿವ್ಯ ಫಲಗಳು:
ಇಡೀ ವರ್ಷದ ಎಲ್ಲಾ ಏಕಾದಶಿ ಉಪವಾಸಗಳನ್ನು ಆಚರಿಸಲು ಸಾಧ್ಯವಾಗದವರಿಗೆ ಧರ್ಮಶಾಸ್ತ್ರಗಳು ಈ ಒಂದು ನಿರ್ಜಲ ಏಕಾದಶಿಯನ್ನು ಭಕ್ತಿಯಿಂದ ಆಚರಿಸಲು ನಿರ್ದೇಶಿಸುತ್ತವೆ. ಈ ಪವಿತ್ರ ದಿನದಂದು ಶ್ರೀ ಮಹಾವಿಷ್ಣುವನ್ನು ಷೋಡಶೋಪಚಾರಗಳಿಂದ ಪೂಜಿಸಬೇಕು ಹಾಗೂ ವಿಷ್ಣು ಸಹಸ್ರನಾಮ ಸೇರಿದಂತೆ ಭಗವಂತನ ನಾಮಸ್ಮರಣೆ ಮತ್ತು ಜಪವನ್ನು ಮಾಡಬೇಕು. ಸಾಧ್ಯವಾದರೆ, ರಾತ್ರಿಯಿಡೀ ನಿದ್ದೆಗೆಟ್ಟು ‘ಜಾಗರಣೆ’ ಮಾಡುವುದು ಅತ್ಯಂತ ಶ್ರೇಷ್ಠ. ಈ ರೀತಿ ನಿಯಮಬದ್ಧವಾಗಿ ವ್ರತ ಮುಗಿಸುವವರಿಗೆ ಸರ್ವ ಪಾಪಗಳು ನಾಶವಾಗಿ, ಕುಟುಂಬದಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಅಂತಿಮವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಪುರಾಣಗಳು ಹೇಳುತ್ತವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ