ನವದೆಹಲಿ, ಜೂನ್ 24: ನಿನ್ನೆ ಸಖತ್ ಹಿನ್ನಡೆ ಕಂಡಿದ್ದ ಭಾರತದ ಷೇರು ಮಾರುಕಟ್ಟೆ (Stock Market) ಇವತ್ತು ಬುಧವಾರ ರಿಬೌಂಡ್ ಆಗಿದೆ. ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಉತ್ತಮವಾಗಿ ಚೇತರಿಸಿಕೊಂಡಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಶೇ. 1.04ರಷ್ಟು (790.54 ಅಂಕ) ಹೆಚ್ಚಳಗೊಂಡು 76,991 ಮಟ್ಟ ಮುಟ್ಟಿದೆ. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ-50 ಸೂಚ್ಯಂಕವು 197.55 ಅಂಕಗಳಷ್ಟು ಚೇತರಿಸಿ, 24,021.65 ಮಟ್ಟ ದಾಟಿದೆ. ನಿನ್ನೆ ಮಂಗಳವಾರ ಸೆನ್ಸೆಕ್ಸ್ 892, ಮತ್ತು ನಿಫ್ಟಿ ಸೂಚ್ಯಂಕ 278 ಅಂಕಗಳನ್ನು ಕಳೆದುಕೊಂಡಿದ್ದುವು. ಇವತ್ತು ತಕ್ಕಮಟ್ಟಿಗೆ ಚೇತರಿಸಿಕೊಂಡಿವೆ.
ಇಂದು ಮಾರುಕಟ್ಟೆ ಮೇಲಕ್ಕೆ ಹೋಗಲು ಪ್ರಮುಖ ಕಾರಣಗಳು
- ಐಟಿ ಷೇರುಗಳಲ್ಲಿ ಭರ್ಜರಿ ಖರೀದಿ: ಐಟಿ (IT) ವಲಯದ ಷೇರುಗಳು ಇಂದಿನ ಮಾರುಕಟ್ಟೆಯ ಏರಿಕೆಗೆ ಪ್ರಮುಖ ಇಂಧನವಾಗಿ ಕೆಲಸ ಮಾಡಿವೆ. ವಿಶೇಷವಾಗಿ ವಿಪ್ರೋ (Wipro) ಸಂಸ್ಥೆಯು ಅಮೆರಿಕ ಮೂಲದ ‘ಸರ್ವಿಸ್ನೌ’ (ServiceNow) ಕಂಪನಿಯೊಂದಿಗೆ ಜಂಟಿಯಾಗಿ ‘ಏಜೆಂಟಿಕ್ AI’ (Agentic AI) ತಂತ್ರಜ್ಞಾನವನ್ನು ವಿಸ್ತರಿಸಲು ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಅದರ ಷೇರುಗಳು ಶೇಕಡಾ 4 ಕ್ಕಿಂತ ಹೆಚ್ಚು ಏರಿಕೆ ಕಂಡವು. ಇದು ಇಡೀ ಐಟಿ ಇಂಡೆಕ್ಸ್ ಅನ್ನು ಶೇಕಡಾ 2.3 ರಷ್ಟು ಮೇಲಕ್ಕೆತ್ತಿತು.
- ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ (Crude Oil Drop) ಶೇ. 1.12 ರಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ 92.66 ಡಾಲರ್ಗೆ ತಲುಪಿದೆ. ಭಾರತವು ತನ್ನ ಬಳಕೆಯ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆ ಇಳಿಕೆಯಾದರೆ ದೇಶದ ಆಮದು ವೆಚ್ಚ ಮತ್ತು ಹಣದುಬ್ಬರ (Inflation) ನಿಯಂತ್ರಣಕ್ಕೆ ಬರುತ್ತದೆ. ಇದು ಮಾರುಕಟ್ಟೆಗೆ ಸಕಾರಾತ್ಮಕ ಅಂಶವಾಗಿದೆ.
- ಮಧ್ಯಪ್ರಾಚ್ಯದಲ್ಲಿ ಶಾಂತಿ ಸೂಚನೆ: ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಪ್ರಾಚ್ಯದಲ್ಲಿ (Middle East) ಕದನ ವಿರಾಮವನ್ನು ಮತ್ತೊಂದು 60 ದಿನಗಳ ಕಾಲ ವಿಸ್ತರಿಸಲು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಲು ಒಪ್ಪಂದ ಏರ್ಪಟ್ಟಿದೆ ಎಂಬ ವರದಿಗಳು ಬಂದಿವೆ. ಈ ಭೌಗೋಳಿಕ ರಾಜಕೀಯ (Geopolitical) ಉದ್ವಿಗ್ನತೆ ಕಡಿಮೆಯಾಗಿರುವುದು ಜಾಗತಿಕ ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.
- ಸಕಾರಾತ್ಮಕ ಜಾಗತಿಕ ಮಾರುಕಟ್ಟೆ: ಅಮೆರಿಕದ ಮಾರುಕಟ್ಟೆಗಳು ಹಿಂದಿನ ದಿನ ಲಾಭದೊಂದಿಗೆ ಮುಕ್ತಾಯಗೊಂಡಿದ್ದವು. ಇದರ ಬೆನ್ನಲ್ಲೇ ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ಜಪಾನ್ನ ನಿಕಿ (Nikkei), ದಕ್ಷಿಣ ಕೊರಿಯಾದ ಕಾಸ್ಪಿ (Kospi) ಮತ್ತು ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಕೂಡ ಏರಿಕೆ ಹಾದಿಯಲ್ಲಿ ವಹಿವಾಟು ನಡೆಸುತ್ತಿರುವುದು ಭಾರತೀಯ ಮಾರುಕಟ್ಟೆಗೆ ಬಲ (Positive Global Cues) ನೀಡಿದೆ.
- ರೂಪಾಯಿ ಮೌಲ್ಯ ವೃದ್ಧಿ: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 5 ಪೈಸೆ ಚೇತರಿಸಿಕೊಂಡು 95.53 ಕ್ಕೆ ತಲುಪಿದೆ.
- ಎಫ್ಐಐಗಳಿಂದ ಷೇರು ಖರೀದಿ ಏರಿಕೆ: ಭಾರತದ ಷೇರು ಮಾರುಕಟ್ಟೆ ಕಂಬ್ಯಾಕ್ ಮಾಡಲು ಎಫ್ಐಐಗಳ ಸಣ್ಣ ಕೊಡುಗೆಯೂ ಇದೆ. ಬುಧವಾರ ಎಫ್ಐಐಗಳು ಷೇರು ಮಾರಾಟ ಮಾಡಿದ್ದಕ್ಕಿಂತ ಖರೀದಿ ಮಾಡಿದ್ದು ಸ್ವಲ್ಪ ಹೆಚ್ಚಿದೆ.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಸೂರ್ಯಾಸ್ತ ನಿಯಮ ತರಲು ಭಾರತದ ಯತ್ನ; ಏನಿದು ಸನ್ಸೆಟ್ ಕ್ಲಾಸ್?
ಜೂನ್ 23ರಂದು ಮಾರುಕಟ್ಟೆ ಕುಸಿಯಲು ಕಾರಣವೇನು?
- ಕರಡಿಗಳ ಹಿಡಿತ: ಮಾರುಕಟ್ಟೆಯಲ್ಲಿ ‘ಹ್ಯಾಮರ್’ (Hammer pattern) ಮಾದರಿಯ ಚಾರ್ಟ್ ಪ್ರವೃತ್ತಿ ಕಂಡುಬಂದಿದ್ದು, ಮಾರುಕಟ್ಟೆಯ ಮೇಲಿನ ಮಟ್ಟದಲ್ಲಿ ಮಾರಾಟದ ಒತ್ತಡ (Bearish Dominance) ಹೆಚ್ಚಾಗಿತ್ತು.
- ಪ್ರಾಫಿಟ್ ಬುಕಿಂಗ್: ಹೂಡಿಕೆದಾರರು ಹೆಚ್ಚಿನ ಲಾಭ ಗಳಿಕೆಗೆ (Profit Booking) ಮುಂದಾಗಿದ್ದು ಮತ್ತು ಮಧ್ಯಪ್ರಾಚ್ಯದ ಬಿಕ್ಕಟ್ಟು ತಿಳಿಯಾಗುವ ಮುನ್ನ ಇದ್ದ ಆತಂಕಗಳು ನಿನ್ನೆ ಮಾರುಕಟ್ಟೆಯನ್ನು ಕೆಳಕ್ಕೆ ತಳ್ಳಿದ್ದವು.
ಪ್ರಸ್ತುತ ನಿಫ್ಟಿ 24,000 ಶ್ರೇಣಿ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದು, ಐಟಿ ಮತ್ತು ಬ್ಯಾಂಕಿಂಗ್ ವಲಯದ ಬೆಂಬಲದೊಂದಿಗೆ ಮಾರುಕಟ್ಟೆ ಗ್ರೀನ್ ಮಾರ್ಕ್ನಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ