ಭಾರತೀಯ ರಿಸರ್ವ್ ಬ್ಯಾಂಕ್Image Credit source: Getty Images
ನವದೆಹಲಿ, ಜೂನ್ 26: ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ತಮ್ಮ ವ್ಯವಹಾರ ಹಾಗೂ ಗ್ರಾಹಕ ಸೇವೆಗಳಿಗಾಗಿ ಹೆಚ್ಚೆಚ್ಚು ಕೃತಕ ಬುದ್ಧಿಮತ್ತೆ (AI) ಮತ್ತು ಮಷಿನ್ ಲರ್ನಿಂಗ್ (ML) ಮಾದರಿಗಳನ್ನು ಬಳಸುತ್ತಿವೆ. ಇವುಗಳ ಮೇಲಿನ ನಿಯಂತ್ರಣ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಆರ್ಬಿಐ (RBI) ಒಂದು ಫ್ರೇಮ್ವರ್ಕ್ (Model Risk Management Framework – MRMF) ರಚಿಸಿ, ಅದರ ಕರಡನ್ನು ಬಿಡುಗಡೆ ಮಾಡಿದೆ.
ಹಣಕಾಸು ಸಂಸ್ಥೆಗಳು ಬಳಸುವ ಯಾವುದೇ AI ಮಾದರಿಯು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೆ, ಸೈಬರ್ ದಾಳಿಗೆ ಒಳಗಾಗಿದ್ದರೆ ಅಥವಾ ಅಸಹಜವಾಗಿ ವರ್ತಿಸುತ್ತಿದ್ದರೆ, ಅದನ್ನು ತಕ್ಷಣವೇ ಸ್ಥಗಿತಗೊಳಿಸಲು, ಅಮಾನತುಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು ಒಂದು ತುರ್ತು ‘ಕಿಲ್ ಸ್ವಿಚ್’ (Kill Switch) ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಆರ್ಬಿಐ ಪ್ರಸ್ತಾಪಿಸಿದೆ.
ಎಐ ಮಾಡಲ್ಗಳಿಗೆ ಮಾನವ ಉಸ್ತುವಾರಿ ಅಗತ್ಯ
ಬ್ಯಾಂಕಿಂಗ್ ವಲಯದಲ್ಲಿ ನಿರ್ಧಾರವನ್ನು AI ಸಂಪೂರ್ಣ ಸ್ವಯಂಚಾಲಿತವಾಗಿ ತೆಗೆದುಕೊಳ್ಳಲು ಬಿಡಬಾರದು. ಪ್ರತಿಯೊಂದು ಹಂತದಲ್ಲೂ ಮಾನವನ ಮೇಲ್ವಿಚಾರಣೆ (Human-in-the-loop) ಕಡ್ಡಾಯವಾಗಿ ಇರಬೇಕು ಮತ್ತು ತಂತ್ರಜ್ಞಾನದ ನಿರ್ಧಾರವನ್ನು ಬದಲಾಯಿಸುವ (Override) ಶಕ್ತಿ ಮಾನವ ಅಧಿಕಾರಿಗೆ ಇರಬೇಕು ಎಂದು ರಿಸರ್ವ್ ಬ್ಯಾಂಕ್ನ ಪ್ರಸ್ತಾಪಿತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕಾರ್ಪೊರೇಟ್ ಸಂಸ್ಥೆಗಳಿಗೆ ಭಾರತವೇ ಫೇವರಿಟ್; ಜಾಗತಿಕ ಬಿಕ್ಕಟ್ಟಿನ ನಡುವೆಯೂ ಹೂಡಿಕೆಯ ಮಹಾಪೂರ
ಎಐ ಸೇವೆ ಚಾಲನೆಯಲ್ಲಿದ್ದರೆ ಗ್ರಾಹಕರಿಗೆ ಮಾಹಿತಿ ನೀಡಬೇಕು
ಗ್ರಾಹಕರಿಗೆ ಸೇವೆ ನೀಡುವಾಗ ಅಥವಾ ಸಾಲದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ AI ಬಳಸಲಾಗುತ್ತಿದ್ದರೆ, ಆ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಅಷ್ಟೇ ಅಲ್ಲದೆ, ಗ್ರಾಹಕರು ಬಯಸಿದಲ್ಲಿ AI ಚಾಟ್ಬಾಟ್ಗಳ ಬದಲಿಗೆ ನೇರವಾಗಿ ಬ್ಯಾಂಕಿನ ಸಿಬ್ಬಂದಿಯೊಂದಿಗೆ (Human Assistance) ಮಾತನಾಡುವ ಆಯ್ಕೆಯನ್ನು ಒದಗಿಸಬೇಕು.
ಥರ್ಡ್ ಪಾರ್ಟಿಯ ಎಐ ಮಾಡಲ್ಗಳಿಂದ ತಪ್ಪಾದರೂ ಜವಾಬ್ದಾರಿ ಬ್ಯಾಂಕುಗಳದ್ದೇ
ಬ್ಯಾಂಕುಗಳು ತಾವೇ ಸ್ವತಃ ಅಭಿವೃದ್ಧಿಪಡಿಸಿದ AI ಮಾದರಿಗಳಿರಲಿ ಅಥವಾ ಬೇರೆ ಮೂರನೇ ವ್ಯಕ್ತಿ/ಸಂಸ್ಥೆಗಳಿಂದ (Third-party vendors) ಖರೀದಿಸಿದ ತಂತ್ರಜ್ಞಾನವಿರಲಿ, ಅದರಿಂದಾಗುವ ಯಾವುದೇ ತಪ್ಪು ನಿರ್ಧಾರಗಳು ಮತ್ತು ನಷ್ಟಗಳಿಗೆ ಆಯಾ ಬ್ಯಾಂಕುಗಳೇ ನೇರ ಜವಾಬ್ದಾರರಾಗಿರಬೇಕಾಗುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ
AI ಮಾಡಲ್ಗಳ ಜಟಿಲತೆ ಮತ್ತು ಅವುಗಳ ಪ್ರಭಾವದ ಆಧಾರದ ಮೇಲೆ ಅವುಗಳನ್ನು ವಿವಿಧ ಅಪಾಯದ ಹಂತಗಳಾಗಿ (Risk Tiering) ವರ್ಗೀಕರಿಸಬೇಕು. ಹೆಚ್ಚಿನ ಅಪಾಯವಿರುವ ಮಾದರಿಗಳಿಗೆ ಬ್ಯಾಂಕಿನ ಬೋರ್ಡ್ನ ಅಪಾಯ ನಿರ್ವಹಣಾ ಸಮಿತಿಯ ಒಪ್ಪಿಗೆ ಅಗತ್ಯವಿರುತ್ತದೆ.
ಆರ್ಬಿಐ ಯಾಕೆ ಈ ನಿಯಮ ರೂಪಿಸಲು ಮುಂದಾಗಿರುವುದು?
AI ತಂತ್ರಜ್ಞಾನದಲ್ಲಿ ಕಂಡುಬರುವ ತಪ್ಪು ಮಾಹಿತಿ (AI Hallucinations), ತಾರತಮ್ಯದ ಫಲಿತಾಂಶಗಳು (Bias), ಮತ್ತು ಡೇಟಾ ಸುರಕ್ಷತೆಯ ಕೊರತೆಯಿಂದಾಗಿ ಬ್ಯಾಂಕುಗಳಿಗೆ ಆರ್ಥಿಕ ನಷ್ಟ ಹಾಗೂ ಸೈಬರ್ ವಂಚನೆಗಳ ಅಪಾಯ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಆರ್ಬಿಐ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಪ್ರಸ್ತಾವನೆಗೆ ಸಾರ್ವಜನಿಕರು ಮತ್ತು ಪಾಲುದಾರರು ಜುಲೈ 24, 2026 ರವರೆಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ