Headlines

ಶೌಚಾಲಯದಲ್ಲಿ ಹಣದ ರಾಶಿ, ಭಕ್ತರು ರಾಮಲಲ್ಲಾಗೆ ನೀಡಿದ್ದ ಚಿನ್ನವೂ ಕಳವು; ರಾಮ ಮಂದಿರ ದೇಣಿಗೆ ಕಳ್ಳತನದ ಮಾಹಿತಿ ಬಯಲು – Kannada News | Cash Hidden In Toilet Inside Story Of Ram Temple Theft hidden camera reveals

ಅಯೋಧ್ಯೆ, ಜೂನ್ 26: ಒಬ್ಬ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾ ಮುಂದೆ ನಿಂತು ಅದನ್ನು ಮರೆಮಾಚುತ್ತಿದ್ದ, ಮತ್ತೊಬ್ಬ ಭಕ್ತರು ನೀಡಿದ ಕಾಣಿಕೆ ಹಣವನ್ನು ಲಪಟಾಯಿಸುತ್ತಿದ್ದ! ಅಯೋಧ್ಯೆಯ ರಾಮ ಮಂದಿರದ (Ram Mandir) ದೇಣಿಗೆ ಹುಂಡಿಗಳಿಂದ ಕೋಟ್ಯಂತರ ರೂ. ಹಣವನ್ನು ದೋಚಿದ ಆರೋಪಿಗಳ ಆಘಾತಕಾರಿ ವಿವರ ಈಗ ಬಯಲಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡವು (SIT) ತನ್ನ ಮಧ್ಯಂತರ ವರದಿಯಲ್ಲಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಇದರ ಬೆನ್ನಲ್ಲೇ, ನೈತಿಕ ಹೊಣೆ ಹೊತ್ತು ರಾಮ ಮಂದಿರ ಟ್ರಸ್ಟ್‌ನ ಪ್ರಮುಖ ಅಧಿಕಾರಿಗಳಾದ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಪ್ರಸ್ತುತ ಬಂಧನಕ್ಕೊಳಗಾಗಿರುವ 8 ಮಂದಿ ಆರೋಪಿಗಳ ತೀವ್ರ ವಿಚಾರಣೆ ಮುಂದುವರಿದಿದೆ.

ಬಂಡಲ್‌ಗಳ ಲೆಕ್ಕದಲ್ಲಿ ವಂಚನೆ:

ಟ್ರಸ್ಟ್‌ನ ಅಧಿಕಾರಿಗಳಿಗೆ ಬ್ಯಾಂಕ್‌ಗೆ ಜಮಾ ಆಗುತ್ತಿದ್ದ ಹಣದಲ್ಲಿ ವ್ಯತ್ಯಾಸ ಕಂಡುಬಂದಾಗ ಅನುಮಾನ ಶುರುವಾಗಿತ್ತು. ಸಾಮಾನ್ಯವಾಗಿ ಒಂದು ದೇಣಿಗೆ ಹುಂಡಿಯಲ್ಲಿ 6ರಿಂದ 7 ಲಕ್ಷ ರೂ. ಇರುತ್ತಿತ್ತು. ಆದರೆ, ಕೆಲವು ವಾರಗಳಿಂದ 500 ರೂ. ಮುಖಬೆಲೆಯ ನೋಟುಗಳ ಬಂಡಲ್‌ಗಳು ಕಡಿಮೆ ಇರುವುದು ಪತ್ತೆಯಾಯಿತು. ಅನುಮಾನ ಹೆಚ್ಚಾದಾಗ ಹಣ ಎಣಿಸುವ ಕೋಣೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಈ ರಹಸ್ಯ ಕ್ಯಾಮೆರಾಗಳೇ ಇವರ ಇಡೀ ಕಳ್ಳಾಟವನ್ನು ಹಿಡಿದಿಟ್ಟಿವೆ.

ಸಿಸಿಟಿವಿ ಬ್ಲಾಕ್ ಮಾಡುವ ತಂತ್ರ:

ರಹಸ್ಯ ಕ್ಯಾಮೆರಾದ ಒಂದು ವಾರದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಹಣ ಎಣಿಸುವ ಒಬ್ಬ ಉದ್ಯೋಗಿ ಸಿಸಿಟಿವಿ ಕ್ಯಾಮೆರಾದ ಮುಂದೆ ಬಂದು ನಿಲ್ಲುತ್ತಿದ್ದ. ಇದೇ ಸಮಯವನ್ನು ಬಳಸಿಕೊಂಡು ಆತನ ಸಹಚರ ನೋಟುಗಳ ಬಂಡಲ್‌ನಿಂದ ಹಣವನ್ನು ಕದ್ದು ತನ್ನ ಬಟ್ಟೆಯೊಳಗೆ ಅಡಗಿಸಿಟ್ಟುಕೊಳ್ಳುತ್ತಿದ್ದ. ಇದು ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿಗಳು ಹಣದ ಬಂಡಲ್‌ಗಳನ್ನು ಕಟ್ಟುವಾಗ ಪ್ರತಿಯೊಂದು ಬಂಡಲ್‌ನಲ್ಲಿ ಹೆಚ್ಚುವರಿ ನೋಟುಗಳನ್ನು ಸೇರಿಸುತ್ತಿದ್ದರು. ಅಧಿಕಾರಿಗಳು ಕೇವಲ ಬಂಡಲ್‌ಗಳ ಸಂಖ್ಯೆಯನ್ನು ಮಾತ್ರ ಪರಿಶೀಲಿಸಿ ವೋಚರ್ ಸಿದ್ಧಪಡಿಸುತ್ತಿದ್ದರು. ನಂತರ ಬ್ಯಾಂಕ್‌ಗೆ ಹಣವನ್ನು ಸಾಗಿಸುವಾಗ ಬಂಡಲ್‌ಗಳಲ್ಲಿದ್ದ ಆ ಹೆಚ್ಚುವರಿ ನೋಟುಗಳನ್ನು ಯಾರಿಗೂ ತಿಳಿಯದಂತೆ ತೆಗೆಯಲಾಗುತ್ತಿತ್ತು. ಇದರಿಂದಾಗಿ ಬ್ಯಾಂಕ್ ಲೆಕ್ಕ ಮತ್ತು ವೋಚರ್ ಲೆಕ್ಕ ಸರಿಯಾಗಿರುತ್ತಿತ್ತು. ಆದರೆ ಅದರ ನಡುವೆ ಕೋಟ್ಯಂತರ ರೂ. ಲೂಟಿಯಾಗುತ್ತಿತ್ತು!

ಶೌಚಾಲಯದಲ್ಲಿ ಹಣ ಅಡಗಿಸಿಡುತ್ತಿದ್ದರು!

ಭಕ್ತರು ರಾಮ ಮಂದಿರದ ನಿರ್ಮಾಣಕ್ಕೆ ನೀಡಿದ ಹಣವನ್ನು ಆರೋಪಿಗಳು ಕದ್ದ ತಕ್ಷಣವೇ ಅದನ್ನು ಮಂದಿರದ ಸಂಕೀರ್ಣದ ಒಳಗಿರುವ ಶೌಚಾಲಯಗಳಲ್ಲಿ ಅಡಗಿಸಿಡುತ್ತಿದ್ದರು. ನಂತರ ಸೂಕ್ತ ಸಮಯ ಸಿಕ್ಕಾಗ ಅದನ್ನು ಮಂದಿರದ ಆವರಣದಿಂದ ಹೊರಗೆ ಸಾಗಿಸಿ, ಬೇರೊಂದು ರಹಸ್ಯ ಸ್ಥಳದಲ್ಲಿ ತಮಗೆ ಬೇಕಾದಂತೆ ಹಂಚಿಕೊಳ್ಳುತ್ತಿದ್ದರು.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣಕ್ಕೆ ಭಾರಿ ತಿರುವು, ಎಸ್‌ಐಟಿಯಿಂದ 15 ಪುಟಗಳ ವರದಿ ಸಲ್ಲಿಕೆ, ಏನೇನಿದೆ?

2024ರಲ್ಲಿ ಮಂದಿರ ಉದ್ಘಾಟನೆಯಾದಾಗಿನಿಂದ ಈ ಜಾಲ ಸಕ್ರಿಯವಾಗಿತ್ತು ಎಂದು ಶಂಕಿಸಲಾಗಿದೆ. ಎಸ್‌ಐಟಿ ವರದಿಯ ಪ್ರಕಾರ, ಕೇವಲ ಈ ವರ್ಷದ ಏಪ್ರಿಲ್ 27ರಿಂದ ಜೂನ್ 5ರ ನಡುವೆ ಬರೋಬ್ಬರಿ 70 ಬಾರಿ ಕಳ್ಳತನ ನಡೆದಿರುವುದು ಸಿಸಿಟಿವಿ ದಾಖಲೆಗಳಿಂದ ಪತ್ತೆಯಾಗಿದೆ!

ಹಣ ಎಣಿಕೆಯ ಉಸ್ತುವಾರಿ ಹೊಂದಿದ್ದ 8 ಮಂದಿ ಆರೋಪಿಗಳನ್ನು ಎಸ್‌ಐಟಿ ಹೆಸರಿಸಿದೆ. ಅವರೆಂದರೆ, ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು. ಇವರೆಲ್ಲರೂ ವಿವಿಧ ಪ್ರಭಾವಿ ವ್ಯಕ್ತಿಗಳ ಶಿಫಾರಸಿನ ಮೇರೆಗೆ ಇಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು.

ಉದಾಹರಣೆಗೆ, ಚಂಪತ್ ರಾಯ್ ಅವರ ಚಾಲಕ ಹಾಗೂ ಅಧಿಕಾರಿಯಾಗಿದ್ದ ಟಿನ್ನು ಯಾದವ್, ತನ್ನ ಸೋದರಸಂಬಂಧಿ ಮನೀಶ್ ಯಾದವ್‌ನನ್ನು ಹಣ ಎಣಿಸುವ ತಂಡಕ್ಕೆ ಸೇರಿಸಿದ್ದ. ಮತ್ತೊಬ್ಬ ಆರೋಪಿ ಅನುಕಲ್ಪ್ ಮಿಶ್ರಾ ತನ್ನ ಭಾವ ಲವಕುಶ್ ಮಿಶ್ರಾ ನನ್ನು ಅದೇ ತಂಡಕ್ಕೆ ಸೇರಿಸಿದ್ದ.

ಅಧಿಕಾರಿಗಳ ನಿರ್ಲಕ್ಷ್ಯ:

ಹಣ ಎಣಿಸುವ ಸಿಬ್ಬಂದಿ ಕೆಲಸ ಮುಗಿಸಿ ಪ್ರತಿದಿನ ಹೊರಹೋಗುವಾಗ ಅಧಿಕಾರಿಗಳು ಅವರ ಭದ್ರತಾ ತಪಾಸಣೆ ನಡೆಸುತ್ತಿರಲಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯವೇ ಕಳ್ಳರಿಗೆ ಅನುಕೂಲವಾಯಿತು. ಆರೋಪಿಗಳು ಕೇವಲ ನಗದು ಮಾತ್ರವಲ್ಲದೆ, ಭಕ್ತರು ಭಕ್ತಿಯಿಂದ ರಾಮಲಲ್ಲಾನಿಗೆ ಅರ್ಪಿಸಿದ್ದ ಚಿನ್ನದ ಕಿವಿಯೋಲೆಗಳು, ಮೂಗುತಿಗಳು, ಬಳೆಗಳು ಮತ್ತು ಬೆಳ್ಳಿಯ ಗೆಜ್ಜೆಗಳನ್ನೂ ಸಹ ಕದ್ದಿದ್ದಾರೆ. ಕದ್ದ ಹಣವನ್ನು ಆರೋಪಿ ಅವಿನಾಶ್ ಶುಕ್ಲಾ ನೇರವಾಗಿ ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ: ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಸಹಾಯಕ ಸೇರಿ 8 ಮಂದಿ ಬಂಧನ

ಮಾಸ್ಟರ್​ಮೈಂಡ್ ಯಾರು?:

ಈ ಇಡೀ ಸಂಚಿನ ಹಿಂದೆ ಟಿನ್ನು ಯಾದವ್ ಮತ್ತು ಸುಭಾಷ್ ಶ್ರೀವಾಸ್ತವ ಪ್ರಮುಖ ಮಾಸ್ಟರ್‌ಮೈಂಡ್‌ಗಳಾಗಿದ್ದರು. ಸುಭಾಷ್ ಶ್ರೀವಾಸ್ತವ ಇತರರನ್ನು ಈ ಜಾಲಕ್ಕೆ ಸೇರಿಸಿಕೊಳ್ಳುವ ಮತ್ತು ಎಣಿಕೆಯ ಕರ್ತವ್ಯಗಳನ್ನು ನಿಯೋಜಿಸುವ ಜವಾಬ್ದಾರಿ ಹೊತ್ತಿದ್ದನು. ರಾಮ ಮಂದಿರದಲ್ಲಿ ಕಳೆದ 3 ವರ್ಷಗಳ ಆಂತರಿಕ ಆಡಿಟ್ ವರದಿಗಳನ್ನು ಪರಿಶೀಲಿಸಿದಾಗ ಹುಂಡಿಗಳ ಸಂಖ್ಯೆ ಮತ್ತು ದಾಖಲೆಗಳ ನಡುವೆ ಭಾರಿ ವ್ಯತ್ಯಾಸವಿರುವುದು ಕಂಡುಬಂದಿತ್ತು. ರಾಮ ಮಂದಿರದಲ್ಲಿ ಸಿಸಿಟಿವಿ ಕವರೇಜ್ ಸಮರ್ಪಕವಾಗಿರಲಿಲ್ಲ, ಉಸ್ತುವಾರಿ ಮಟ್ಟದಲ್ಲಿ ಯಾರು ಹೊಣೆಗಾರರು ಎಂಬ ಸ್ಪಷ್ಟತೆ ಇರಲಿಲ್ಲ. ಭದ್ರತಾ ನಿಯಮಗಳು ಕೇವಲ ಕಾಗದದ ಮೇಲಷ್ಟೇ ಉಳಿದಿದ್ದವು ಎಂದು ಎಸ್‌ಐಟಿ ವರದಿ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *