ಸಿನಿಮಾ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಅವರು ದಳಪತಿ ವಿಜಯ್ ಅವರ (Vijay) ಕೊನೆಯ ಚಿತ್ರ ‘ಜನ ನಾಯಗನ್’ಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಇದರಿಂದ ವೆಂಕಟ್ ನಾರಾಯಣ್ ಅವರಿಗೆ ನಷ್ಟ ಆಗುತ್ತಿದೆ. ಹೀಗಿರುವಾಗಲೇ ಅವರಿಗೆ ತಮಿಳುನಾಡು ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿದೆ. ತಮಿಳುನಾಡು ಸರ್ಕಾರ ಇವರನ್ನು ನವದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ. ಮೇ ತಿಂಗಳಲ್ಲಿ ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಹೋದಾಗಲೂ ವೆಂಕಟ ನಾರಾಯಣ್ ಜೊತೆಯಲ್ಲಿದ್ದರು.
ವಿಜಯ್ ಜೊತೆಗಿನ ಆಪ್ತತೆ
ವೆಂಕಟ ನಾರಾಯಣ್ ಹಾಗೂ ವಿಜಯ್ ಮಧ್ಯೆ ಸಾಕಷ್ಟು ಆಪ್ತತೆ ಇದೆ. ವೆಂಕಟ್ ಅವರು ಅನುಭವಿಸುತ್ತಿರುವ ತೊಂದರೆ ನೋಡಿ ವಿಜಯ್ಗೆ ಮರುಕ ಇದೆ. ಈ ಸಿನಿಮಾ ಬಿಡುಗಡೆಗೆ ಮುನ್ನವೇ ಆನ್ಲೈನ್ನಲ್ಲಿ ಲೀಕ್ ಆಗಿತ್ತು. ಸೆನ್ಸಾರ್ ಮಂಡಳಿಯಿಂದಲೂ ಸಿನಿಮಾ ಬಿಡುಗಡೆ ತಡವಾಗಿದೆ. ಇದರಿಂದ ನಿರ್ಮಾಪಕರಿಗೆ ಭಾರಿ ನಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ವಿಜಯ್ ಸಂಪುಟ ದರ್ಜೆಯ ಸ್ಥಾನಮಾನ ನೀಡಿದರೇ ಎನ್ನುವ ಪ್ರಶ್ನೆ ಮೂಡಿದೆ.
ಈ ನೇಮಕಾತಿಯನ್ನು ತಮಿಳುನಾಡಿನ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ವಿಶೇಷ ಪ್ರತಿನಿಧಿ ಹುದ್ದೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಪ್ರಮುಖ ಕೊಂಡಿಯಾಗಿದೆ. ಕೇಂದ್ರ ಸಚಿವರೊಂದಿಗೆ ಸಮನ್ವಯ ಸಾಧಿಸಲು ಮತ್ತು ಸಂಸದರಿಗೆ ಸಹಾಯ ಮಾಡಲು ಈ ಹುದ್ದೆ ಮುಖ್ಯವಾಗಿದೆ. ಇಂತಹ ಜವಾಬ್ದಾರಿಯುತ ಸ್ಥಾನಕ್ಕೆ ಸಿನಿಮಾ ನಿರ್ಮಾಪಕರನ್ನು ತಂದಿರುವುದನ್ನು ಅನೇಕರು ವಿರೋಧಿಸಿದ್ದಾರೆ.
ಇದನ್ನೂ ಓದಿ: ‘ಪೆರಿಯಾರ್ ನಾಸ್ತಿಕತೆಯನ್ನು ಒಪ್ಪುವುದಿಲ್ಲ, ನಮಗೆ ದೇವರಲ್ಲಿ ನಂಬಿಕೆ ಇದೆ’; ಸಿಎಂ ವಿಜಯ್
ವಿಜಯ್ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ‘ಒಬ್ಬ ಸಿನಿಮಾ ನಿರ್ಮಾಪಕನನ್ನು ಇಂತಹ ಪ್ರಮುಖ ಹುದ್ದೆಗೆ ನೇಮಿಸುವುದು ಸರಿಯಲ್ಲ. ಈ ನಿರ್ಧಾರದಿಂದ ರಾಜ್ಯಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಅವಮಾನವಾಗುತ್ತದೆ’ ಎಂದು ಡಿಎಂಕೆ ಸಂಸದ ಪಿ. ವಿಲ್ಸನ್ ಹೇಳಿದ್ದಾರೆ.
ಮೊದಲೂ ಹೀಗೆ ಆಗಿತ್ತು
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿದ್ದರು. ಜ್ಯೋತಿಷಿಯೊಬ್ಬರಿಗೆ ಸರ್ಕಾರಿ ಅನುದಾನದ ಹುದ್ದೆ ನೀಡಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ಮಿತ್ರ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದವು. ಸಾರ್ವಜನಿಕ ವಲಯದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ತಕ್ಷಣವೇ ಎಚ್ಚೆತ್ತುಕೊಂಡು ನೇಮಕಾತಿ ಆದೇಶವನ್ನು ರದ್ದುಗೊಳಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.