ಎನ್ಐಎ ಹಾಗೂ ಶಂಕಿತ ಉಗ್ರ ಸುಹೇಲ್Image Credit source: tv9
ಬೆಂಗಳೂರು, ಜೂನ್ 27: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಶಂಕಿತ ಉಗ್ರ ಸುಹೇಲ್ನ ಜಾಲವನ್ನು ಬೇರುಸಹಿತ ಬಯಲಿಗೆಳೆಯಲು ರಾಷ್ಟ್ರೀಯ ತನಿಖಾ ದಳ (NIA) ಅಖಾಡಕ್ಕಿಳಿದಿದೆ. ಅಯೋಧ್ಯೆಯ ರಾಮಮಂದಿರ ಸ್ಫೋಟದ ಸಂಚು ಹಾಗೂ ಪಾಕಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆಘಾತಕಾರಿ ಮಾಹಿತಿ ಹೊರಬಂದ ಬೆನ್ನಲ್ಲೇ, ಶುಕ್ರವಾರ ಹರಿಹರಕ್ಕೆ ಆಗಮಿಸಿದ ಎನ್ಐಎ ಅಧಿಕಾರಿಗಳ ವಿಶೇಷ ತಂಡವು ಶಂಕಿತ ಉಗ್ರನನ್ನು ಸುಮಾರು ಹೊತ್ತು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಸಾಮಾಜಿಕ ಜಾಲತಾಣ ಹಾಗೂ ಬ್ಯಾಂಕ್ ಖಾತೆಗಳ ಜಾಲ ಜಪ್ತಿ
ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಸುಹೇಲ್ನನ್ನು ಸುಮಾರು ಒಂದು ಗಂಟೆಯ ಕಾಲ ಸುದೀರ್ಘವಾಗಿ ವಿಚಾರಣೆ ನಡೆಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ತಿಳಿಸಿದ್ದಾರೆ. ವಿಚಾರಣೆ ವೇಳೆ ಆತನ ಸಾಮಾಜಿಕ ಜಾಲತಾಣಗಳ ಖಾತೆಗಳು, ಸಂಶಯಾಸ್ಪದ ಇಂಟರ್ನೆಟ್ ಚಟುವಟಿಕೆಗಳು ಹಾಗೂ ಇತರ ಪ್ರಮುಖ ಬ್ಯಾಂಕ್ ಖಾತೆಗಳ ವಹಿವಾಟು ಸೇರಿದಂತೆ ವಿವಿಧ ಆಯಾಮಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.
ಬನ್ನಿಕೋಡು ಗ್ರಾಮದ ಗುಟ್ಯಪ್ಪ ಎಂಬುವವರ ಮನೆಯಲ್ಲಿದ್ದ ಶಂಕಿತ ಉಗ್ರ ಸುಹೇಲ್ನನ್ನು ಇತ್ತೀಚೆಗೆ ವಶಕ್ಕೆ ಪಡೆಯಲಾಗಿತ್ತು. ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಪೇಂಟಿಂಗ್ ಕೆಲಸಕ್ಕಾಗಿ ಬಂದಿದ್ದ 10 ಜನರ ತಂಡದಲ್ಲಿ ಈ ಸುಹೇಲ್ ಮಾತ್ರ ಅತ್ಯಂತ ಸಕ್ರಿಯನಾಗಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಕೋರ್ಟ್ನಿಂದ 10 ದಿನಗಳ ಕಸ್ಟಡಿ
ಸ್ಥಳೀಯ ಪೊಲೀಸರು ಹಾಗೂ ಎನ್ಐಎ ಜಂಟಿ ಕಾರ್ಯಾಚರಣೆಯ ಬಳಿಕ ಆರೋಪಿ ಸುಹೇಲ್ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಈತನ ದೇಶದ್ರೋಹಿ ಸಂಚು ಹಾಗೂ ಅಂತಾರಾಷ್ಟ್ರೀಯ ಲಿಂಕ್ಗಳ ಬಗ್ಗೆ ಇನ್ನಷ್ಟು ಆಳವಾದ ತನಿಖೆ ನಡೆಯಲಿದೆ.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ
ಸದ್ಯದ ವಿಚಾರಣೆಯ ವೇಳೆ ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವು ಅತ್ಯಂತ ಪ್ರಮುಖ ಹಾಗೂ ರಹಸ್ಯ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕಿದ್ದು, ಮುಂದಿನ ದಿನಗಳಲ್ಲಿ ಕರಾವಳಿ ಹಾಗೂ ಒಳನಾಡಿನ ಇತರ ಭಾಗಗಳಲ್ಲೂ ತನಿಖೆ ಚುರುಕುಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ