Headlines

“ನಾನು ಈ ವರ್ಷವೇ ನನ್ನ ದೇಶಕ್ಕೆ ಮರಳುತ್ತೇನೆ”; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ – Kannada News | Will Return To My Country This Year Bangladesh Former PM Sheikh Hasina says

ನವದೆಹಲಿ, ಜೂನ್ 28: ಬಾಂಗ್ಲಾದೇಶದಿಂದ ಪದಚ್ಯುತಗೊಂಡು ದೇಶಭ್ರಷ್ಟರಾಗಿ ಸುಮಾರು 2 ವರ್ಷಗಳಾಗುತ್ತ ಬಂದಿದ್ದರೂ, ತಾಯ್ನಾಡಿಗೆ ಮರಳುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸಂಕಲ್ಪ ಕುಗ್ಗಿಲ್ಲ. ತಮ್ಮ ವಿರುದ್ಧ ಮರಣದಂಡನೆ ತೀರ್ಪು ಪ್ರಕಟವಾಗಿದ್ದರೂ ಮತ್ತು ತಮ್ಮ ಪಕ್ಷವಾದ ‘ಅವಾಮಿ ಲೀಗ್’ ಮೇಲೆ ನಿಷೇಧ ಹೇರಲಾಗಿದ್ದರೂ ಅವರು ಧೃತಿಗೆಟ್ಟಿಲ್ಲ. ಬಾಂಗ್ಲಾದಿಂದ ಪಲಾಯನಗೊಂಡು ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ (Sheikh Hasina) 2 ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿದ್ದಾರೆ. ಇದೀಗ ಅವರು ಖಾಸಗಿ ಚಾನೆಲ್​ಗೆ ನೀಡಿರುವ ವಿಶೇಷ ಸಂದರ್ಶನವೊಂದರಲ್ಲಿ “ನಾನು ಈ ವರ್ಷವೇ ನನ್ನ ದೇಶಕ್ಕೆ ಮರಳಲಿದ್ದೇನೆ” ಎಂದು ಹೇಳಿದ್ದಾರೆ.

“ನನ್ನ ವಿರುದ್ಧದ ಕೋರ್ಟ್ ತೀರ್ಪು ನ್ಯಾಯಸಮ್ಮತವಲ್ಲ, ಅದು ರಾಜಕೀಯ ದ್ವೇಷದ ಭಾಗವಾಗಿದೆ. ನಾನು ಸಾವಿಗೆ ಹೆದರುವುದಿಲ್ಲ. 1975ರಲ್ಲಿ ನನ್ನ ಪೋಷಕರು, ಸಹೋದರರು ಸೇರಿದಂತೆ ಇಡೀ ಕುಟುಂಬವನ್ನು ಕಳೆದುಕೊಂಡೆ. ನನ್ನ ಮೇಲೆಯೂ ಹಲವು ಬಾರಿ ಕೊಲೆ ಯತ್ನಗಳು ನಡೆದಿವೆ. ಎಲ್ಲಾ ಪಿತೂರಿಗಳನ್ನು ಭೇದಿಸಿ ನಾನು ಜನರ ಪರ ನಿಂತಿದ್ದೇನೆ. 5 ಬಾರಿ ಪ್ರಧಾನಿಯಾಗಿ ಬಾಂಗ್ಲಾದೇಶದ ಅಭಿವೃದ್ಧಿಗೆ ಶ್ರಮಿಸಿದ್ದೇನೆ” ಎಂದು ಎನ್​ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಶೇಖ್ ಹಸೀನಾ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಒಳಗಾಗಿರುವ ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು? ಸರ್ಕಾರದ ಉತ್ತರ ಇಲ್ಲಿದೆ

ಕಳೆದ ಜೂನ್ 23ರಂದು ಕಠಿಣ ನಿಷೇಧದ ನಡುವೆಯೂ ಅವಾಮಿ ಲೀಗ್ ತನ್ನ 77ನೇ ಸಂಸ್ಥಾಪನಾ ದಿನವನ್ನು ಆಚರಿಸಿತು. ಈ ಬಗ್ಗೆ ಮಾತನಾಡಿದ ಅವರು, “ಅವಾಮಿ ಲೀಗ್ ಕೇವಲ ಕಾಗದದ ಮೇಲಿರುವ ಸಂಸ್ಥೆಯಲ್ಲ. ಇದು ಬಾಂಗ್ಲಾದೇಶದ ಮಣ್ಣಿನಲ್ಲಿ, ಜನರ ಹೃದಯದಲ್ಲಿ ಬೇರೂರಿರುವ ಶಕ್ತಿ. ನಮ್ಮ 77 ವರ್ಷಗಳ ಪಯಣದಲ್ಲಿ ಹಲವು ಬಾರಿ ನಿಷೇಧ, ದಬ್ಬಾಳಿಕೆಗಳನ್ನು ಎದುರಿಸಿ, ಜನರ ಬೆಂಬಲದಿಂದಲೇ ಮತ್ತೆ ಪುಟಿದೆದ್ದಿದ್ದೇವೆ. ಪ್ರಸ್ತುತ ನಮ್ಮ ಪಕ್ಷದ ಕಾರ್ಯಕರ್ತರನ್ನು ಜೈಲಿಗೆ ಹಾಕುವ ಮೂಲಕ ಸರ್ಕಾರ ತನ್ನ ದೌರ್ಬಲ್ಯವನ್ನು ಪ್ರದರ್ಶಿಸುತ್ತಿದೆ” ಎಂದಿದ್ದಾರೆ.

ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗೆ ಕಳವಳ:

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಇತರ ಸಮುದಾಯಗಳ ಮೇಲಿನ ದಾಳಿಯ ಬಗ್ಗೆ ಶೇಖ್ ಹಸೀನಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 5ರ ನಂತರ ಹಿಂದೂ ದೇವಾಲಯಗಳು, ಸೂಫಿ ದರ್ಗಾಗಳು ಹಾಗೂ ಸಾಂಸ್ಕೃತಿಕ ಕೇಂದ್ರಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಸುಳ್ಳು ಮೊಕದ್ದಮೆಯಡಿ ಇಂದಿಗೂ ಜೈಲಿನಲ್ಲಿಟ್ಟಿರುವುದು ಸರ್ಕಾರದ ದ್ವೇಷದ ರಾಜಕಾರಣವನ್ನು ತೋರಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Sheikh Hasina: ಶೇಖ್ ಹಸೀನಾಗೆ ಮರಣದಂಡನೆ, ಬಾಂಗ್ಲಾಗೆ ಕಳುಹಿಸಿ ಎಂದಿದ್ದಕ್ಕೆ ಭಾರತ ಕೊಟ್ಟ ಪ್ರತಿಕ್ರಿಯೆ ಏನು?

“ಅಲ್ಪಸಂಖ್ಯಾತರು ಕೇವಲ ವೋಟ್ ಬ್ಯಾಂಕ್ ಅಲ್ಲ, ಅವರು ದೇಶದ ಸಮಾನ ನಾಗರಿಕರು. ಅಲ್ಪಸಂಖ್ಯಾತರ ಮೇಲಿನ ದಾಳಿಯು ಬಾಂಗ್ಲಾದೇಶದ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ. ಧರ್ಮದ ಹೆಸರಿನಲ್ಲಿ ಬೆದರಿಕೆ ಹಾಕುವವರು ದೇಶದ ಶತ್ರುಗಳು” ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಅವಾಮಿ ಲೀಗ್ ಮೇಲಿನ ನಿಷೇಧ ಹಿಂಪಡೆಯಲು ಬಿಎನ್‌ಪಿ ನಾಯಕರೊಂದಿಗೆ ರಹಸ್ಯ ಮಾತುಕತೆ ಅಥವಾ ಒಪ್ಪಂದ ನಡೆಯುತ್ತಿದೆ ಎಂಬ ವದಂತಿಗಳನ್ನು ಶೇಖ್ ಹಸೀನಾ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ಜನರನ್ನು ದಾರಿ ತಪ್ಪಿಸಲು ಇಂತಹ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ನಾವು ಯಾರ ಬಳಿಯೂ ರಾಜಕೀಯ ಭಿಕ್ಷೆ ಬೇಡುವುದಿಲ್ಲ” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *