ಮುಂಬೈ, ಜೂನ್ 29: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮಹಾರಾಷ್ಟ್ರದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal Case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಪ್ರಮುಖ ಆದೇಶವೊಂದನ್ನು ಹೊರಡಿಸಿದೆ. ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ನನ್ನು ಜುಲೈ 3ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ.
ಈ ಪ್ರಕರಣದ ಹೆಚ್ಚಿನ ವಿಚಾರಣೆ ಹಾಗೂ ಕೊಲೆಗೆ ಬಳಕೆಯಾದ ಆಯುಧಗಳು ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲು ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕೆಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪೊಲೀಸರ ವಾದವನ್ನು ಆಲಿಸಿದ ನ್ಯಾಯಾಧೀಶರು ಜುಲೈ 3ರವರೆಗೆ ಆರೋಪಿಗಳನ್ನು ಪೊಲೀಸ್ ವಿಚಾರಣೆಗೆ ಒಪ್ಪಿಸಿದ್ದಾರೆ.
ಏನಿದು ಪ್ರಕರಣ?:
ಕೇತನ್ ಅಗರ್ವಾಲ್ ಅವರ ನಿಗೂಢ ಕೊಲೆಯ ನಂತರ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಡಿಜಿಟಲ್ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸಿಯಾ ಗೋಯಲ್ ಮತ್ತು ಚೇತನ್ನನ್ನು ಬಂಧಿಸಿದ್ದರು. ತನ್ನ ಪ್ರಿಯಕರ ಚೇತನ್ ಜೊತೆ ಸೇರಿ ತಾನು ಮದುವೆಯಾಗಬೇಕಿದ್ದ ಕೇತನ್ನನ್ನು ಸಿಯಾ ರಾಯಗಢ ಕೋಟೆ ಮೇಲಿಂದ ತಳ್ಳಿ ಕೊಲೆ ಮಾಡಿದ್ದಳು. ಬಳಿಕ, ಆತ ಫೋಟೋಗೆ ಪೋಸ್ ಕೊಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದನೆಂದು ನಾಟಕವಾಡಿದ್ದಳು.
ಇದನ್ನೂ ಓದಿ: ವಿಗ್ ಧರಿಸಿದ್ದರಿಂದಲೇ ಕೇತನ್ನನ್ನು ಕೊಂದಳಾ ಸಿಯಾ?; ಮಹಾರಾಷ್ಟ್ರ ಸಿಎಂ ಭೇಟಿ ಬಳಿಕ ತಂದೆಯ ಶಾಕಿಂಗ್ ಹೇಳಿಕೆ
ಇದಕ್ಕೂ ಮುನ್ನ ಜೂನ್ 14ರಂದೂ ಕೇತನ್ನನ್ನು ಕೊಲ್ಲಲು ಇಂತಹುದೇ ಪ್ರಯತ್ನ ನಡೆದಿತ್ತು, ಆದರೆ ಅದು ವಿಫಲವಾಗಿತ್ತು ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಕೇತನ್ ತಂದೆ ವಿಶಾಲ್ ಅಗರ್ವಾಲ್ ಅವರ ಪ್ರಕಾರ, ಸಿಯಾ ಜೂನ್ 14ರಂದು ಪ್ರಪಾತದ ಅಂಚಿನಲ್ಲಿ ಕೇತನ್ನನ್ನು ತಳ್ಳಿದ್ದಳು. ಆದರೆ ಅವರು ಪಕ್ಕದಲ್ಲಿದ್ದ ಮರವನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಸಮಯದಲ್ಲಿ ಸಿಯಾ, “ನಿನ್ನನ್ನು ಹಾವಿನಿಂದ ರಕ್ಷಿಸಲು ನಾನು ತಳ್ಳಿದೆ” ಎಂದು ಸುಳ್ಳು ಹೇಳಿದ್ದರಿಂದ ಕೇತನ್ ಆಕೆಯ ಮೇಲೆ ಯಾವುದೇ ಅನುಮಾನ ಪಟ್ಟಿರಲಿಲ್ಲ.
ಇದನ್ನೂ ಓದಿ: ಕೇತನ್ ಕೊಲೆಗೂ ಮುನ್ನ ಲವರ್ ಜೊತೆ ಕೆಫೆಯಲ್ಲಿ ಕುಳಿತು ಪ್ಲಾನ್ ಮಾಡಿದ್ದಳು ಸಿಯಾ ಗೋಯಲ್!
ಪೊಲೀಸರ ಪ್ರಕಾರ, ಮೇ 31ರಂದು ಸಿಯಾ ಮೊದಲ ಬಾರಿಗೆ ಕೇತನ್ ಜೊತೆ ಲೋಹಗಢ್ ಕೋಟೆಗೆ ಭೇಟಿ ನೀಡಿದ್ದಳು. ಆ ಪ್ರವಾಸದ ವೇಳೆಯಲ್ಲೇ ಆಕೆ ಕೇತನ್ನನ್ನು ಕೊಂದು, ಅದನ್ನು ಅಪಘಾತ ಎಂದು ಬಿಂಬಿಸುವ ಆಲೋಚನೆಯನ್ನು ರೂಪಿಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಕೊನೆಗೆ ಜೂನ್ 18ರಂದು ಮತ್ತೊಮ್ಮೆ ಕೋಟೆಗೆ ಭೇಟಿ ನೀಡಿದಾಗ ಸಿಯಾ ಮತ್ತು ಚೇತನ್ ಇಬ್ಬರೂ ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ