ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಅವರು ‘ಡಾನ್ ಪಿಕ್ಚರ್ಸ್’ (Dawn Pictures) ನಿರ್ಮಾಣ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ. ‘ಪರಾಶಕ್ತಿ’ ಸಿನಿಮಾದಲ್ಲಿ ತಮಗೆ ಮೋಸವಾಗಿದೆ ಎಂದು ಅವರು ಹೇಳಿದ್ದಾರೆ. ತಮಗೆ ಬರಬೇಕಾದ ಸಂಭಾವನೆ ವಿಚಾರವಾಗಿ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದಾಗಿ ಡಾನ್ ಪಿಕ್ಚರ್ಸ್ ಸಂಸ್ಥೆಗೆ ದೊಡ್ಡ ತಲೆನೋವು ಶುರುವಾಗಿದೆ.
ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಸಿನಿಮಾವನ್ನು ಡಾನ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿದೆ. ಈ ಚಿತ್ರಕ್ಕೆ ಸುಧಾ ಕೊಂಗರ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಜನವರಿಯಲ್ಲಿ ತೆರೆಗೆ ಬಂತು. ಆದರೆ ತಮಗೆ ಬರಬೇಕಾದ ಬರೋಬ್ಬರಿ 8.39 ಕೋಟಿ ರೂಪಾಯಿ ಸಂಭಾವನೆಯನ್ನು ಇನ್ನು ನೀಡಿಲ್ಲ ಎಂದು ಸುಧಾ ಕೊಂಗರ ಕೋರ್ಟ್‌ನಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 8ರವರೆಗೆ ಚಿತ್ರವನ್ನು ದೂರದರ್ಶನದಲ್ಲಿ ಬಿಡುಗಡೆ ಮಾಡಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ.
‘ಹೃದಯಂ ಮುರಳಿ’ ಚಿತ್ರದ ರಿಲೀಸ್‌ಗೆ ಬ್ರೇಕ್?
ಸುಧಾ ಕೊಂಗರ ಅವರ ಈ ಕಾನೂನು ಹೋರಾಟ ಡಾನ್ ಪಿಕ್ಚರ್ಸ್‌ನ ಮತ್ತೊಂದು ಸಿನಿಮಾ ಮೇಲೂ ಪ್ರಭಾವ ಬೀರಿದೆ. ಆಕಾಶ್ ಭಾಸ್ಕರನ್ ನಿರ್ದೇಶನ ಹಾಗೂ ನಿರ್ಮಾಣದ ‘ಹೃದಯಂ ಮುರಳಿ’ ಸಿನಿಮಾ ಜುಲೈ 10ರಂದು ಬಿಡುಗಡೆಯಾಗಬೇಕಿತ್ತು. ಅಥರ್ವ ಮುರಳಿ, ಫಹಾದ್ ಫಾಸಿಲ್, ಪ್ರೀತಿ ಮುಕುಂಧನ್ ಮತ್ತು ಕಯಾದಯ ಲೋಹರ್ ನಟಿಸಿರುವ ಈ ರೋಮ್ಯಾಂಟಿಕ್ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ಸುಧಾ ಕೊಂಗರ ಕೋರಿದ್ದಾರೆ. ಈ ಚಿತ್ರಕ್ಕೆ ತಮನ್ ಸಂಗೀತ ನೀಡಿದ್ದು, ಅವರು ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿಹಾರಿಕಾ ಎನ್‌ಎಮ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಹಿಟ್ ಆಗಿಲ್ಲ
ಇಷ್ಟೆಲ್ಲಾ ವಿವಾದಗಳಿಗೆ ಕಾರಣವಾಗಿರುವ ಶಿವಕಾರ್ತಿಕೇಯನ್ ಅಭಿನಯದ ‘ಪರಾಶಕ್ತಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿಲ್ಲ. ಚಿತ್ರವು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಹಿಟ್ ಲಿಸ್ಟ್ ಸೇರಿಲ್ಲ. 150 ಕೋಟಿ ರೂಪಾಯಿ ಬಜೆಟ್ ಇದಕ್ಕೆ ಖರ್ಚಾಗಿದ್ದು, ಅರ್ಧದಷ್ಟು ಹಣ ಮರಳಿಲ್ಲ. ಈಗ ಸಿನಿಮಾ ಯಶಸ್ವಿಯಾಗದ ಬೆನ್ನಲ್ಲೇ ಈಗ ನಿರ್ದೇಶಕಿ ಮತ್ತು ನಿರ್ಮಾಪಕರ ನಡುವಿನ ಸಂಭಾವನೆ ಜಗಳ ಕೋರ್ಟ್ ಮೆಟ್ಟಿಲೇರಿರುವುದು ತಮಿಳು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.