ನವದೆಹಲಿ, ಜುಲೈ 2: ಅಹಮದಾಬಾದ್ನಲ್ಲಿ ಭಿಕ್ಷಾಟನೆ ಜಾಲಕ್ಕೆ ಮಕ್ಕಳನ್ನು ತಳ್ಳುತ್ತಿದ್ದ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಸರಪಂಚರ ಕರಾಳ ಮುಖ ಅನಾವರಣವಾಗಿದೆ. ಅಹಮದಾಬಾದ್ನ ರಸ್ತೆಗಳು, ದೇವಸ್ಥಾನಗಳು ಮತ್ತು ಮಾಲ್ಗಳ ಮುಂದೆ ನಡೆಯುತ್ತಿದ್ದ ಮಕ್ಕಳ ಭಿಕ್ಷಾಟನೆಯ ಹಿಂದೆ ಅಂತಾರಾಜ್ಯ ಮಟ್ಟದ ಆಘಾತಕಾರಿ ಮಾನವ ಕಳ್ಳಸಾಗಣೆ (Human Trafficking) ಜಾಲ ಪತ್ತೆಯಾಗಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಗ್ರಾಮಗಳ ಸರಪಂಚರೇ (ಗ್ರಾಮ ಮುಖ್ಯಸ್ಥರು) ದಲ್ಲಾಳಿಗಳಾಗಿ ಕೆಲಸ ಮಾಡಿ, ಬಡ ಕುಟುಂಬಗಳ ಮಕ್ಕಳನ್ನು ಗುಜರಾತ್ನ ಭಿಕ್ಷಾಟನೆ ದಂಧೆಗೆ ಮಾರಾಟ ಮಾಡುತ್ತಿರುವುದು ಅಹಮದಾಬಾದ್ ಕ್ರೈಂ ಬ್ರಾಂಚ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಅಹಮದಾಬಾದ್ನಲ್ಲಿ ಮುಂಬರುವ 2030ರ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯದ ಸಿದ್ಧತೆಯ ಭಾಗವಾಗಿ, ನಗರದ ರಸ್ತೆಗಳನ್ನು ಭಿಕ್ಷುಕರ ಮುಕ್ತ ಮಾಡಲು ಅಹಮದಾಬಾದ್ ಮಹಾನಗರ ಪಾಲಿಕೆ (AMC) ಮತ್ತು ಕ್ರೈಂ ಬ್ರಾಂಚ್ ಜಂಟಿ ಕಾರ್ಯಾಚರಣೆ ಹಮ್ಮಿಕೊಂಡಿದ್ದವು. ಈ ವೇಳೆ ಕೇವಲ ಅಹಮದಾಬಾದ್ ಒಂದರಲ್ಲೇ ಬರೋಬ್ಬರಿ 276 ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿದೆ. ಆರಂಭದಲ್ಲಿ ಇದು ಸಾಮಾನ್ಯ ಭಿಕ್ಷಾಟನೆ ಎಂದುಕೊಂಡಿದ್ದ ಪೊಲೀಸರಿಗೆ ತನಿಖೆಯ ವೇಳೆ ಇದು ವ್ಯವಸ್ಥಿತ ಜಾಲ ಎಂಬುದು ತಿಳಿದುಬಂದಿದೆ.
ಡೀಲ್ ನಡೆಯುವುದು ಹೇಗೆ?:
ಭಿಕ್ಷಾಟನೆ ದಂಧೆಯ ಮುಖ್ಯಸ್ಥರು ಗ್ರಾಮೀಣ ಭಾಗದ ಅತ್ಯಂತ ಬಡ ಕುಟುಂಬಗಳನ್ನು ಗುರುತಿಸಲು ಮೊದಲು ಸರಪಂಚರನ್ನು ಸಂಪರ್ಕಿಸುತ್ತಾರೆ. ಈ ಸರಪಂಚರು ದಲ್ಲಾಳಿಗಳಾಗಿ ಕೆಲಸ ಮಾಡಿ ಈ ಡೀಲ್ ಕುದುರಿಸುತ್ತಾರೆ. ಮಕ್ಕಳನ್ನು ಕರೆತರಲು ಬಳಸುವ ಒಟ್ಟು ಹಣದಲ್ಲಿ ತಮ್ಮ ಪಾಲನ್ನು ಪಡೆಯುವುದರ ಜೊತೆಗೆ, ಅಹಮದಾಬಾದ್ನ ರಸ್ತೆಗಳಲ್ಲಿ ಆ ಮಕ್ಕಳು ಪ್ರತಿದಿನ ಭಿಕ್ಷೆ ಬೇಡಿ ಗಳಿಸುವ ಹಣದಲ್ಲಿ ಶೇ. 20ರಷ್ಟು ಪಾಲನ್ನು ಕಮಿಷನ್ ರೂಪದಲ್ಲಿ ಕಬಳಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಅಪ್ರಾಪ್ತ ಮಕ್ಕಳ ರಕ್ಷಣೆ
ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಈ ದಂಧೆಯಲ್ಲಿ ಭಾಗಿಯಾಗಿರುವ ಹಳ್ಳಿಗಳು ಮತ್ತು ನೆಟ್ವರ್ಕ್ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಈ ಕೃತ್ಯದಲ್ಲಿ ಶಾಮೀಲಾಗಿರುವ ಸರಪಂಚರು ಮತ್ತು ಪೋಷಕರ ವಿರುದ್ಧ ಮಕ್ಕಳ ಕಳ್ಳಸಾಗಣೆಯಂತಹ ಗಂಭೀರ ಪ್ರಕರಣಗಳನ್ನು ದಾಖಲಿಸಲು ಅಧಿಕಾರಿಗಳು ಸಕ್ರಿಯವಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಅಹಮದಾಬಾದ್ ಮಹಾನಗರ ಪಾಲಿಕೆ (AMC) ಮತ್ತು ಮಾನವ ಕಳ್ಳಸಾಗಣೆ ತಡೆ ಘಟಕ (AHTU) ಜಂಟಿಯಾಗಿ ನಡೆಸಿದ 3 ದಿನಗಳ ಸಂಘಟಿತ ಕಾರ್ಯಾಚರಣೆಯ ಫಲವಾಗಿ ನೂರಾರು ಮಕ್ಕಳನ್ನು ಈ ಭಿಕ್ಷಾಟನೆ ದಂಧೆಯಿಂದ ರಕ್ಷಿಸಲಾಗಿದೆ.
ಮಕ್ಕಳ ಗಳಿಕೆಯಲ್ಲಿ ಶೇ. 20ರಷ್ಟು ಕಮಿಷನ್:
ಗುಜರಾತ್ನ ಭಿಕ್ಷಾಟನೆ ದಂಧೆಯ ಮುಖ್ಯಸ್ಥರು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಳ್ಳಿಗಳ ಸರಪಂಚರನ್ನು ಸಂಪರ್ಕಿಸುತ್ತಿದ್ದರು. ಅತ್ಯಂತ ಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸುವುದು ಈ ಸರಪಂಚರ ಕೆಲಸವಾಗಿತ್ತು. ಮಕ್ಕಳನ್ನು ದಂಧೆಗೆ ಒಪ್ಪಿಸಲು ಸರಪಂಚರಿಗೆ ಭಾರಿ ಹಣ ನೀಡಲಾಗುತ್ತಿತ್ತು. ಆ ಹಣದಲ್ಲಿ ಸ್ವಲ್ಪ ಭಾಗವನ್ನು ಪೋಷಕರಿಗೆ ಕೊಟ್ಟು, ಬಾಕಿ ಹಣವನ್ನು ಸರಪಂಚರು ತಾವೇ ಇಟ್ಟುಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ, ಆ ಮಕ್ಕಳು ಪ್ರತಿದಿನ ಭಿಕ್ಷೆ ಬೇಡಿ ಗಳಿಸುವ ಹಣದಲ್ಲಿ ಶೇಕಡಾ 20 ರಷ್ಟು ಪಾಲನ್ನು ಈ ಸರಪಂಚರು ಕಮಿಷನ್ ರೂಪದಲ್ಲಿ ಪಡೆಯುತ್ತಿದ್ದರು!
ಇದನ್ನೂ ಓದಿ: ಸರ್ಕಾರದಿಂದ 7,093 ಕೋಟಿ ರೂ ಬೆಗ್ಗರ್ ಸೆಸ್ ಸಂಗ್ರಹ: ಆದ್ರೂ ಭಿಕ್ಷಾಟನೆ ಮುಂದುವರಿಕೆಗೆ ಹೈಕೋರ್ಟ್ ಕಳವಳ!
ಮಕ್ಕಳನ್ನು ಎಲ್ಲೆಂದರಲ್ಲಿ ಭಿಕ್ಷೆ ಬೇಡಲು ಬಿಡುತ್ತಿರಲಿಲ್ಲ. ಗರಿಷ್ಠ ಹಣ ಗಳಿಕೆಯಾಗುವ ಜಾಗಗಳನ್ನು ನೋಡಿ ಪ್ಲಾನ್ ಮಾಡಲಾಗುತ್ತಿತ್ತು. ಧಾರ್ಮಿಕ ಸ್ಥಳಗಳು ಮತ್ತು ದೇವಸ್ಥಾನಗಳಲ್ಲಿ ಅತಿ ಹೆಚ್ಚು ಭಿಕ್ಷೆ ಹಣ ವಸೂಲಾಗುತ್ತಿತ್ತು. ಟ್ರಾಫಿಕ್ ಜಂಕ್ಷನ್ಗಳು, ಆಸ್ಪತ್ರೆಗಳು ಮತ್ತು ಶಾಪಿಂಗ್ ಮಾಲ್ಗಳಲ್ಲಿ ಕೂಡ ಮಕ್ಕಳನ್ನು ಇಲ್ಲಿ ನಿಯೋಜಿಸಲಾಗುತ್ತಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ