ಬೆಂಗಳೂರು, ಜು.4: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರಿಯಿಂದ ಅತ್ಯಂತ ಭಾರಿ ಮಳೆಯಾಗುವ (Heavy to Very Heavy Rain) ಸಾಧ್ಯತೆಯಿದೆ. ಮಳೆಯ ಜೊತೆಗೆ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಸಹ ಬಿರುಗಾಳಿ ಸಹಿತ ಭಾರಿಯಿಂದ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಜನಜೀವನಕ್ಕೆ ಅಲ್ಪಮಟ್ಟಿನ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗಗಳಲ್ಲೂ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!
ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಜುಲೈ 9 ಮತ್ತು ಜುಲೈ 10 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆಯ ಆರ್ಭಟ ಕೊಂಚ ಹೆಚ್ಚಿರಲಿದ್ದು, ಜುಲೈ 5, 6, 9 ಮತ್ತು 10 ರಂದು ಒಂದಲ್ಲಾ ಒಂದು ಕಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಮುನ್ಸೂಚನೆ ನೀಡಿರುವ ದಿನಗಳಂದು ರಾಜ್ಯದ ಒಳನಾಡಿನಲ್ಲಿ ಅಂದಾಜು 64.5 mm ನಿಂದ 115.4 mm ವರೆಗೆ ಭಾರಿ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ. ಬಿರುಗಾಳಿ ಮತ್ತು ಸಿಡಿಲಿನ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ಕೋರಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ