ಹೆಚ್ಚಿನ ತಂದೆ ತಾಯಿ, ಅಜ್ಜ ಅಜ್ಜಿಯಂದಿರಿಗೆ ಸ್ಮಾರ್ಟ್ ಫೋನ್ ಬಳಕೆ ಅಷ್ಟೊಂದು ತಿಳಿದಿಲ್ಲ. ಆದರೆ ಈಗಿನ ಮಕ್ಕಳು ಮನೆಯಲ್ಲಿ ತಂದೆ ತಾಯಿ ಅಥವಾ ಅಜ್ಜ ಅಜ್ಜಿಯಂದಿರು ಇದ್ದರೆ ಅವರಿಗೆ ಸ್ಮಾರ್ಟ್ ಫೋನ್ (smart phone) ಹಾಗೂ ಕಂಪ್ಯೂಟರ್ ಬಳಕೆ ಹೀಗೆ ಹತ್ತು ಹಲವು ವಿಷಯಗಳನ್ನು ಹೇಳಿ ಕೊಡುವುದನ್ನು ನೋಡಬಹುದು. ಇದೀಗ ಇಂತಹದ್ದೇ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಅಮೆಜಾನ್ನಲ್ಲಿ (amazon) ಆರ್ಡರ್ ಮಾಡುವುದು ಹೇಗೆಂದು ತನ್ನ ತಾಯಿಗೆ ಕಲಿಸುತ್ತಿರುವ ಯುವತಿಯ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ಕ್ಲಿಪಿಂಗ್ಗೆ ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಧಿ ಚೌಧರಿ (nikum_diaries) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ಗೆ ತಂತ್ರಜ್ಞಾನದ ಬಗ್ಗೆ ಸಣ್ಣಪುಟ್ಟ ವಿಷಯಗಳನ್ನು ಅವಳಿಗೆ ಕಲಿಸುವುದು ನನಗೆ ತುಂಬಾ ಇಷ್ಟ. ಇಂದು, ನಾನು ಅವಳಿಗೆ ಅಮೆಜಾನ್ ನಿಂದ ಹೇಗೆ ಆರ್ಡರ್ ಮಾಡಬೇಕೆಂದು ಕಲಿಸಿದೆ. ಅವಳು ತನ್ನ 2002 ರಿಂದ ತನ್ನ ದಿನಚರಿಯಲ್ಲಿ ಪ್ರತಿ ಕೆಲಸವನ್ನು ಎಚ್ಚರಿಕೆಯಿಂದ ಬರೆದಿದ್ದಾಳೆ ಎಂದು ಶೀರ್ಷಿಕೆ ನೀಡಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
ಯುವತಿ ಅಮೆಜಾನ್ನಿಂದ ಆರ್ಡರ್ ಮಾಡುವ ಪ್ರಕ್ರಿಯೆಯನ್ನು ಹಂತ ಹಂತವಾಗಿ ವಿವರಿಸುವುದನ್ನು ಕಾಣಬಹುದು. ಯುವತಿಯ ತಾಯಿ ಬಹಳ ಎಚ್ಚರಿಕೆಯಿಂದ ಆಲಿಸುತ್ತಾ, ತನ್ನ 2002ರ ಹಳೆಯ ಡೈರಿಯಲ್ಲಿ ಪ್ರತಿ ಸೂಚನೆಯನ್ನು ಬರೆದಿಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಆರ್ಡರ್ನ್ನು ಮನೆಗೆ ತಲುಪಿಸಿದ ಡೆಲಿವರಿ ಬಾಯ್ಗೆ 500 ರೂ ಟಿಪ್ಸ್ ಕೊಟ್ಟ ಯುವತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ತಾಯಿಯ ಕೈ ಬರಹ ನನ್ನ ತಾಯಿಯ ಕೈಬರಹವನ್ನು ಹೋಲುತ್ತದೆ. ದಯವಿಟ್ಟು ಇಂದು ನಿಮ್ಮ ತಾಯಿಗೆ ನನ್ನದೊಂದು ಅಪ್ಪುಗೆ ನೀಡಿ ಎಂದಿದ್ದಾರೆ. ಇನ್ನೊಬ್ಬರು, ಈ ವಯಸ್ಸಿನಲ್ಲಿ ಕಲಿಯುವ ಮನಸ್ಸು ಇರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸದ್ದನ್ನು ಕಲಿಯುವ ನಿಮ್ಮ ತಾಯಿಯ ಉತ್ಸಾಹಕ್ಕೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ