Headlines

ಇರಾನ್ ಜನರು ಖಮೇನಿಯನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ, ಆದರೆ : ಡೊನಾಲ್ಡ್ ಟ್ರಂಪ್ ಆಶ್ಚರ್ಯ – Kannada News | Trump Stunned by Iran Khamenei Funeral Crowds: Millions Mourn Slain Leader

ವಾಷಿಂಗ್ಟನ್, ಜುಲೈ 05: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ. ಇರಾನ್‌ನೊಳಗೆ ಪರಿಸ್ಥಿತಿ ತದ್ವಿರುದ್ಧವಾಗಿರುತ್ತದೆ ಎಂದು ತಾವು ನಿರೀಕ್ಷಿಸಿದ್ದಾಗಿ ಅವರು ತಿಳಿಸಿದ್ದಾರೆ.

ಅಂತ್ಯಕ್ರಿಯೆಯ ದೃಶ್ಯಗಳ ಕುರಿತು ಆಕ್ಸಿಯಾಸ್ ಸಂಸ್ಥೆಯೊಂದಿಗೆ ಮಾತನಾಡಿದ ಟ್ರಂಪ್, ಅಲ್ಲಿನ ಜನಸಾಗರ ನೋಡಿ ನನಗೆ ಆಘಾತವಾಯಿತು. ಇರಾನ್‌ನ ಜನರು ಖಮೇನಿಯನ್ನು ದ್ವೇಷಿಸುತ್ತಾರೆ ಎಂದೇ ನಾನು ಭಾವಿಸಿದ್ದೆ ಎಂದು ತಮ್ಮ ಆಶ್ಚರ್ಯವನ್ನು ಹೊರಹಾಕಿದ್ದಾರೆ.

ಟೆಹ್ರಾನ್‌ನಲ್ಲಿ ಹರಿದುಬಂದ ಜನಸಾಗರ
ಶನಿವಾರ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿದ್ದು, ಲಕ್ಷಾಂತರ ಶೋಕತಪ್ತರು ಜಮಾಯಿಸಿದ್ದಾರೆ. ಜನರು ಖಮೇನಿ ಅವರ ಚಿತ್ರವಿರುವ ಬ್ಯಾನರ್‌ಗಳನ್ನು ಹಿಡಿದು, ನಮ್ಮ ಮಾತು ಒಂದೇ ಸೇಡು ಸೇಡು ಎಂದು ಘೋಷಣೆ ಕೂಗುತ್ತಿದ್ದಾರೆ. ಶಿಯಾ ಸಂಪ್ರದಾಯದಂತೆ ಪುರುಷರ ಗುಂಪುಗಳು ದುಃಖದಿಂದ ಎದೆಗೆ ಬಡಿದುಕೊಳ್ಳುತ್ತಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: ಅಮೆರಿಕ ಮತ್ತು ಇರಾನ್ ನಡುವೆ ಉತ್ತಮ ಬಾಂಧವ್ಯವಿದೆ; ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ

1989 ರಿಂದ ಇರಾನ್ ಅನ್ನು ಮುನ್ನಡೆಸಿದ್ದ 86 ವರ್ಷದ ಖಮೇನಿ ಅವರು, ಇರಾನ್-ಇಸ್ರೇಲ್ ಯುದ್ಧದ ಆರಂಭದಲ್ಲಿ ನಡೆದ ಇಸ್ರೇಲಿ ದಾಳಿಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹತರಾಗಿದ್ದರು. ಯುದ್ಧದ ತೀವ್ರತೆಯ ಕಾರಣದಿಂದಾಗಿ ಇಷ್ಟು ದಿನ ಅವರ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು.

ಖಮೇನಿ ಅವರ ಪಾರ್ಥಿವ ಶರೀರವನ್ನು ಮೂರು ದಿನಗಳ ಕಾಲ ಟೆಹ್ರಾನ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಜುಲೈ 7 (ಮಂಗಳವಾರ), ಪವಿತ್ರ ನಗರವಾದ ಕೋಮ್‌ಗೆ ಕೊಂಡೊಯ್ಯಲಾಗುವುದು. ಬುಧವಾರ ನೆರೆಯ ದೇಶವಾದ ಇರಾಕ್‌ನಲ್ಲಿ ಮೆರವಣಿಗೆ ನಡೆಸಲಾಗುವುದು.

ಗುರುವಾರ: ಅವರ ಹುಟ್ಟೂರಾದ ಮಶಾದ್‌ನಲ್ಲಿ ಸಮಾಧಿ ಮಾಡಲಾಗುವುದು. ದಾಳಿಯಲ್ಲಿ ಮೃತಪಟ್ಟ ಅವರ ಮಗಳು, ಅಳಿಯ ಹಾಗೂ ಮೊಮ್ಮಗಳ ಪಕ್ಕದಲ್ಲೇ ಖಮೇನಿ ಅವರನ್ನು ಹೂಳಲಾಗುವುದು.

ತಂದೆಯ ಅಂತ್ಯಕ್ರಿಯೆಗೆ ಗೈರಾದ ಹೊಸ ಸುಪ್ರೀಂ ಲೀಡರ್
ಇರಾನ್‌ನ ಪ್ರಸ್ತುತ ಹೊಸ ಸರ್ವೋಚ್ಚ ನಾಯಕ ಹಾಗೂ ಖಮೇನಿ ಅವರ ಪುತ್ರರಾದ ಮೊಜ್ತಬಾ ಖಮೇನಿ ಅವರು ಭದ್ರತಾ ಕಾರಣಗಳಿಂದಾಗಿ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ. ಇಸ್ರೇಲ್‌ನ ನಿರಂತರ ಬೆದರಿಕೆ ಹಾಗೂ ಕಣ್ಗಾವಲು ಇರುವುದರಿಂದ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪಾಯಕಾರಿ ಎಂದು ಭಾರತದಲ್ಲಿನ ಇರಾನ್ ಪ್ರತಿನಿಧಿ ಅಯತೊಲ್ಲಾ ಹಕೀಮ್ ಇಲಾಹಿ ಸ್ಪಷ್ಟಪಡಿಸಿದ್ದಾರೆ.

ಇರಾನ್‌ಗೆ ಈ ಅಂತ್ಯಕ್ರಿಯೆ ಏಕೆ ಮುಖ್ಯ?
ಈ ಭಾರಿ ಅಂತ್ಯಕ್ರಿಯೆಯು ಇರಾನ್‌ನ ಹೊಸ ನಾಯಕತ್ವಕ್ಕೆ ಮತ್ತು ಅಲ್ಲಿನ ಆಡಳಿತಕ್ಕೆ ಹೊಸ ಶಕ್ತಿ ನೀಡುವ ಸಾಧ್ಯತೆಯಿದೆ. ಸದ್ಯ ಇರಾನ್ ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಹಿಡಿತವನ್ನು ಬಳಸಿಕೊಂಡು, ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಇಸ್ರೇಲ್ ಮತ್ತೆ ದಾಳಿ ಮಾಡಬಹುದು ಎಂಬ ಆತಂಕವೂ ಇರಾನ್ ಅನ್ನು ಕಾಡುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *