ಕಳೆದ ವರ್ಷ ನಡೆದಿದ್ದ ಏಷ್ಯಾಕಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೆ. ಆದರೆ ಏಷ್ಯಾಕಪ್ ಟ್ರೋಫಿ ಇದುವರೆಗೂ ಟೀಂ ಇಂಡಿಯಾದ ಕೈ ಸೇರಿಲ್ಲ. ಈ ವಿಚಾರವಾಗಿ ಬಿಸಿಸಿಐ ಹಾಗೂ ಎಸಿಸಿ ನಡುವೆ ಸಾಕಷ್ಟು ಮಾತುಗಕೆತಗಳು ನಡೆದ ಹೊರತಾಗಿಯೂ ಟ್ರೋಫಿಯನ್ನು ಟೀಂ ಇಂಡಿಯಾಕ್ಕೆ ಹಸ್ತಾಂತರಿಸುವ ಕೆಲಸವನ್ನು ಎಸಿಸಿ ಮಾಡಿಲ್ಲ. ಇದೀಗ ಏಷ್ಯಾಕಪ್ ಟ್ರೋಫಿಗೆ ಸಂಬಂಧಿಸಿದಂತೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ರಾಜೀವ್ ಶುಕ್ಲಾ, ‘ಏಷ್ಯಾ ಕಪ್ ಟ್ರೋಫಿಗೆ ಸಂಬಂಧಿಸಿದಂತೆ, ನಾವು ಎಸಿಸಿ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಟ್ರೋಫಿಯನ್ನು ಹಸ್ತಾಂತರಿಸುವಂತೆ ಪದೇ ಪದೇ ವಿನಂತಿಸಿದ್ದೇವೆ. ಆದರೆ ನಮಗೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಸಿಸಿ ಅಧ್ಯಕ್ಷರು ಟ್ರೋಫಿಯನ್ನು ಹಸ್ತಾಂತರಿಸದಿದ್ದರೆ ಏನು ವ್ಯತ್ಯಾಸವಾಗುತ್ತದೆ? ಹೇಳಿ. ಏಕೆಂದರೆ ಏಷ್ಯಾಕಪ್ ಗೆದ್ದಿರುವುದು ನಾವು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಹೀಗಾಗಿ ನಮಗೆ ಟ್ರೋಫಿ ಸಿಗದಿದ್ದರೂ, ನಾವೇ ವಿಜೇತರು ಎಂಬುದನ್ನು ಮರೆ ಮಾಚಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ.