ಫಿಫಾ ವಿಶ್ವಕಪ್ನ ಕ್ವಾರ್ಟರ್ ಫೈನಲ್ ಪಂದ್ಯಗಳ ಆರಂಭಕ್ಕೂ ಮುನ್ನವೇ ಮೈದಾನದ ಹೊರಗೆ ಭಾರಿ ವಿವಾದವೊಂದು ಸೃಷ್ಟಿಯಾಗಿದೆ. ಜುಲೈ 9ರಂದು (ಭಾರತದಲ್ಲಿ ಜುಲೈ 10) ಬೋಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಬಲಿಷ್ಠ ಫ್ರಾನ್ಸ್ ಮತ್ತು ಮೊರಾಕೊ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಫಿಫಾ ಅರ್ಜೆಂಟೀನಾ ರೆಫರಿಗಳನ್ನೇ ನೇಮಿಸಿದ್ದಾರೆ. ಈ ಒಂದು ನಿರ್ಧಾರ ಇದೀಗ ಜಾಗತಿಕ ಫುಟ್ಬಾಲ್ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಫಿಫಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂದ್ಯವೊಂದರ ಎಲ್ಲಾ ಐದೂ ಆನ್-ಫೀಲ್ಡ್ ರೆಫರಿ ಒಂದೇ ದೇಶದಿಂದ ಆಯ್ಕೆ ಮಾಡಿದ್ದಾರೆ. ಇದರಲ್ಲೇನು ತಪ್ಪು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಫುಟ್ಬಾಲ್ ಪ್ರೇಮಿಗಳು ಮುಂದಿಡುತ್ತಿರುವ ಉತ್ತರ ಅರ್ಜೆಂಟೀನಾ ತಂಡದ ಸಾಂಪ್ರದಾಯಿಕ ಎದುರಾಳಿ ಫ್ರಾನ್ಸ್ ಎಂಬುದು.
ಐವರು ಅರ್ಜೆಂಟೀಯನ್ನರು!
ಸಾಮಾನ್ಯವಾಗಿ ವಿಶ್ವಕಪ್ನಂತಹ ದೊಡ್ಡ ಟೂರ್ನಿಗಳಲ್ಲಿ ಪಂದ್ಯ ಆಡುತ್ತಿರುವ ತಂಡಗಳ ಮೇಲೆ ಯಾವುದೇ ಪ್ರಭಾವ ಬೀರದಂತೆ ತಡೆಯಲು ತಟಸ್ಥ ದೇಶಗಳ ರೆಫರಿಗಳನ್ನು ನೇಮಿಸಲಾಗುತ್ತದೆ. ಆದರೆ, ಫ್ರಾನ್ಸ್-ಮೊರಾಕೊ ಪಂದ್ಯಕ್ಕೆ ಮುಖ್ಯ ರೆಫರಿಯಾಗಿ ಅನುಭವಿ ಫ್ಯಾಕುಂಡೋ ಟೆಲ್ಲೋ ಅವರನ್ನು ನೇಮಿಸಲಾಗಿದೆ.
ಇವರೊಂದಿಗೆ ಸಹಾಯಕರಾಗಿ ಜುವಾನ್ ಪ್ಯಾಬ್ಲೋ ಬೆಲಾಟ್ಟಿ, ಗೇಬ್ರಿಯಲ್ ಚೇಡ್, ನಾಲ್ಕನೇ ಅಧಿಕಾರಿಯಾಗಿ ಡೇರಿಯೊ ಹೆರೆರಾ ಮತ್ತು ಮೀಸಲು ಅಧಿಕಾರಿಯಾಗಿ ಕ್ರಿಸ್ಟಿಯನ್ ನವಾರೊ ಕಾರ್ಯನಿರ್ವಹಿಸಲಿದ್ದಾರೆ. ಈ ಐದೂ ಅಧಿಕಾರಿಗಳು ಅರ್ಜೆಂಟೀನಾ ದೇಶದವರಾಗಿದ್ದಾರೆ.
ವಿವಾದ ಏಕೆ?
ಕಳೆದ 2022ರ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಅರ್ಜೆಂಟೀನಾ ತಂಡವು ಫ್ರಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಫ್ರಾನ್ಸ್ ಸೋಲು ಮುಖ್ಯ ಕಾರಣ ರೆಫರಿಗಳು ತೋರಿದ ತಾರತಮ್ಯ ಮತ್ತು ಪಕ್ಷಪಾತದ ತೀರ್ಪುಗಳು ಎಂಬ ಆರೋಪಗಳು ಕೇಳಿ ಬಂದಿದ್ದವು.
ಇದಾದ ಬಳಿಕ ಉಭಯ ದೇಶಗಳ ಆಟಗಾರರು ಮತ್ತು ಅಭಿಮಾನಿಗಳ ನಡುವೆ ಮೈದಾನದ ಒಳಗೆ ಹಾಗೂ ಹೊರಗೆ ತೀವ್ರ ಪೈಪೋಟಿ ಮತ್ತು ಹಗೆತನ ಮುಂದುವರಿದಿದೆ.
ಇಂತಹ ಪರಿಸ್ಥಿತಿಯಲ್ಲಿ, ಫ್ರಾನ್ಸ್ ತಂಡದ ಸೆಮಿಫೈನಲ್ ಹಾದಿಯನ್ನು ನಿರ್ಧರಿಸುವ ಪಂದ್ಯಕ್ಕೆ ಅರ್ಜೆಂಟೀನಾದವರನ್ನೇ ರೆಫರಿಗಳನ್ನಾಗಿ ಹಾಕಿರುವುದು ಫ್ರೆಂಚ್ ಅಭಿಮಾನಿಗಳನ್ನು ಕೆರಳಿಸಿದೆ. ಅಲ್ಲದೆ “ಫ್ರಾನ್ಸ್ ತಂಡವನ್ನು ಟೂರ್ನಿಯಿಂದ ಹೊರಹಾಕಲು ಫಿಫಾ ಸಂಚು ರೂಪಿಸಿದೆ” ಎಂಬ ಗಂಭೀರ ಆರೋಪಗಳೂ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.
- ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದಕ್ಕೆ ಒಂದೇ ದೇಶದ ರೆಫರಿಗಳನ್ನು ನೇಮಿಸಿರುವುದು ಇದೇ ಮೊದಲು!.
- ಪ್ರಸ್ತುತ ವಿಶ್ವಕಪ್ನಲ್ಲಿ ನಡೆದಿರುವ ಹಿಂದಿನ 96 ಪಂದ್ಯಗಳಲ್ಲಿ ಯಾವುದೇ ಒಂದು ಪಂದ್ಯಕ್ಕೂ ಈ ರೀತಿ ಐದೂ ಆನ್-ಫೀಲ್ಡ್ ರೆಫರಿಗಳನ್ನು ಒಂದೇ ದೇಶದಿಂದ ಆಯ್ಕೆ ಮಾಡಿರಲಿಲ್ಲ.
ಪಂದ್ಯದ ಮೇಲೆ ಎಲ್ಲರ ಕಣ್ಣು!
2022ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಫ್ರಾನ್ಸ್ ತಂಡ ಮೊರಾಕೊವನ್ನು 2-0 ಇಂದ ಸೋಲಿಸಿತ್ತು. ಈಗ ಮೊರಾಕೊ ತಂಡಕ್ಕೆ ಅದಕ್ಕೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶವಿದೆ. ಆದರೆ, ಮೈದಾನದಲ್ಲಿ ಆಟಗಾರರ ಪ್ರದರ್ಶನಕ್ಕಿಂತ ಹೆಚ್ಚಾಗಿ ಅರ್ಜೆಂಟೀನಾದ ರೆಫರಿ ಫ್ಯಾಕುಂಡೋ ಟೆಲ್ಲೋ ಅವರ ಪ್ರತಿಯೊಂದು ನಿರ್ಧಾರ, ಕೊಡುವ ಪ್ರತಿಯೊಂದು ಫೌಲ್ ಹಾಗೂ ಹಳದಿ ಕಾರ್ಡ್ಗಳ ಮೇಲೆ ಇಡೀ ವಿಶ್ವದ ಫುಟ್ಬಾಲ್ ಪ್ರೇಮಿಗಳ ಕಣ್ಣು ಇರಲಿರುವುದಂತೂ ಸತ್ಯ.
ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!
ಹೀಗಾಗಿಯೇ ಈ ನಿರ್ಣಾಯಕ ಪಂದ್ಯವು ರೆಫರಿಗಳ ಕಾರಣದಿಂದ ಭಾರೀ ಮಹತ್ವ ಪಡೆದುಕೊಂಡಿದೆ. ಈ ಪಂದ್ಯವು ನಿಯಮಗಳ ಪ್ರಕಾರವೇ ನಡೆಯುತ್ತದೆಯೇ ಅಥವಾ ರೆಫರಿಗಳ ಸಣ್ಣ ತಪ್ಪು ನಿರ್ಧಾರವೂ ದೊಡ್ಡ ವಿವಾದಕ್ಕೆ ನಾಂದಿ ಹಾಡುತ್ತದೆಯೇ ಎಂಬ ಆತಂಕ ಎಲ್ಲರಲ್ಲಿದೆ. ಹೀಗಾಗಿ, ಈ ಪಂದ್ಯವು ಕೇವಲ ಎರಡು ದೇಶಗಳ ನಡುವಿನ ಸೆಣಸಾಟವಾಗಿ ಉಳಿಯದೆ, ಫಿಫಾ ಇತಿಹಾಸದ ಅತ್ಯಂತ ಜಿದ್ದಾಜಿದ್ದಿನ ಪರೀಕ್ಷೆಯಾಗಿ ಮಾರ್ಪಟ್ಟಿದೆ.
Published On – 9:27 am, Thu, 9 July 26