ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಈ ಸಿನಿಮಾ ಪ್ರತಿಷ್ಠಿತ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ 2026ರಲ್ಲಿಸ್ಥಾನ ಪಡೆದಿದೆ. ಜುಲೈ 23 ರಂದು ಚಿತ್ರದ ಫಸ್ಟ್ ಲುಕ್ ಜಾಗತಿಕ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ. ಈ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಟರಾದ ರಣಬೀರ್ ಕಪೂರ್ ಮತ್ತು ಯಶ್ ಭಾಗವಹಿಸಲಿದ್ದಾರೆ ಎಂಬುದು ವಿಶೇಷ. ಇದಕ್ಕೂ ಮುನ್ನ ಜುಲೈ 18 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಚಿತ್ರದ ಭವ್ಯವಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
ಕಾಮಿಕ್ ಕಾನ್‌ನಲ್ಲಿ ಭಾರತೀಯ ಸಿನಿಮಾ ದಾಖಲೆ
‘ಕಲ್ಕಿ 2898 ಎಡಿ’ ಚಿತ್ರದ ನಂತರ ಕಾಮಿಕ್ ಕಾನ್ ವೇದಿಕೆಗೆ ಪ್ರವೇಶಿಸುತ್ತಿರುವ ಎರಡನೇ ಭಾರತೀಯ ಸಿನಿಮಾ ‘ರಾಮಾಯಣ’. ಹಾಲಿವುಡ್ ಸಿನಿಮಾಗಳೇ ಹೆಚ್ಚಾಗಿ ರಾರಾಜಿಸುವ ಈ ವೇದಿಕೆಯಲ್ಲಿ ರಾಮಾಯಣ ಪ್ರದರ್ಶನಗೊಳ್ಳುತ್ತಿರುವುದು ದೊಡ್ಡ ಸಾಧನೆ. ಸುಮಾರು 4,800 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣದಲ್ಲಿ ಈ ಚಿತ್ರದ ಝಲಕ್ ಅನಾವರಣಗೊಳ್ಳಲಿದೆ. ಇದನ್ನು ಕೇವಲ ಭಾರತೀಯ ಸಿನಿಮಾವಾಗಿ ಅಲ್ಲದೆ ಜಾಗತಿಕ ಮಟ್ಟದ ಅದ್ಭುತ ದೃಶ್ಯ ಕಾವ್ಯವಾಗಿ ಪ್ರಸ್ತುತಪಡಿಸಲು ಮೇಕರ್ಸ್ ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿಯ ಭಾರತ್ ಮಂಟಪದಲ್ಲಿ ರಣಬೀರ್ ಕಪೂರ್ ನಟನೆಯ ರಾಮಾಯಣ ಟ್ರೇಲರ್ ಲಾಂಚ್?
ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ
ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಲು ನಿರ್ಮಾಪಕರು ಭರ್ಜರಿ ತಯಾರಿ ನಡೆಸಿದ್ದಾರೆ. ಚಿತ್ರಕ್ಕೆ ಸಂಗೀತ ನೀಡುತ್ತಿರುವ ಖ್ಯಾತ ಸಂಯೋಜಕರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಲೈವ್ ಮ್ಯೂಸಿಕ್ ಶೋಗಳನ್ನು ವಿದೇಶಗಳಲ್ಲಿ ಆಯೋಜಿಸಲು ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಜೆಟ್ ಹಾಗೂ ತಾರಾಗಣ
‘ರಾಮಾಯಣ’ ಸಿನಿಮಾ ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸುತ್ತಿದ್ದಾರೆ. ಈ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.