ಆರೋಗ್ಯಕರ ಜೀವನಕ್ಕೆ ಊಟದ ನಂತರ ಪಾಲಿಸಬೇಕಾದ ಸರಿಯಾದ ನಿಯಮಗಳುImage Credit source: Getty Images
ಆರೋಗ್ಯಕರ ಜೀವನಶೈಲಿಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯವೋ, ಊಟದ ನಂತರ ಪಾಲಿಸುವ ಅಭ್ಯಾಸಗಳೂ ಅಷ್ಟೇ ಮುಖ್ಯ. ಹಲವರು ಊಟ ಮುಗಿದ ತಕ್ಷಣ ಮಲಗುವುದು, ಭಾರೀ ವ್ಯಾಯಾಮ ಮಾಡುವುದು ಅಥವಾ ಹೆಚ್ಚು ನೀರು ಕುಡಿಯುತ್ತಾರೆ. ಆದರೆ ಇಂತಹ ಅಭ್ಯಾಸಗಳು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಊಟ ಮಾಡಿದ ನಂತರ ದೇಹವು ಆಹಾರವನ್ನು ಜೀರ್ಣಿಸಿ, ಅದರಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಕಾರ್ಯದಲ್ಲಿರುತ್ತದೆ. ಹಾಗಾಗಿ ಕೆಲವು ಅಭ್ಯಾಸಗಳು ಹೊಟ್ಟೆ ಉಬ್ಬರ, ಅಜೀರ್ಣ, ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಊಟದ ನಂತರ ತಪ್ಪಿಸಬೇಕಾದ ಅಭ್ಯಾಸಗಳು
ತಕ್ಷಣ ಭಾರೀ ವ್ಯಾಯಾಮ ಮಾಡಬೇಡಿ: ಊಟದ ಬಳಿಕ ತಕ್ಷಣ ಜಿಮ್, ರನ್ನಿಂಗ್ ಅಥವಾ ವ್ಯಾಯಾಮ ಮಾಡಿದರೆ ಹೊಟ್ಟೆನೋವು, ವಾಕರಿಕೆ ಮತ್ತು ಅಜೀರ್ಣ ಉಂಟಾಗಬಹುದು. ಕನಿಷ್ಠ 1.5 ರಿಂದ 2 ಗಂಟೆಗಳ ಬಳಿಕ ಮಾತ್ರ ವ್ಯಾಯಾಮ ಮಾಡುವುದು ಉತ್ತಮ.
ಕೂಡಲೇ ಮಲಗಬೇಡಿ: ರಾತ್ರಿ ಊಟ ಮಾಡಿದ ತಕ್ಷಣ ಮಲಗುವುದರಿಂದ ಆಸಿಡ್ ರಿಫ್ಲಕ್ಸ್, ಎದೆಯುರಿ ಹಾಗೂ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಊಟದ ನಂತರ 2– 3 ಗಂಟೆಗಳ ಅಂತರವಿಟ್ಟು ಮಲಗುವುದು ಸೂಕ್ತ.
ಅತಿಯಾಗಿ ನೀರು ಕುಡಿಯಬೇಡಿ: ಊಟದ ವೇಳೆ ಅಥವಾ ತಕ್ಷಣವೇ ಹೆಚ್ಚು ನೀರು ಕುಡಿಯುವುದರಿಂದ ಕೆಲವರಿಗೆ ಹೊಟ್ಟೆ ತುಂಬಿದ ಭಾವನೆ, ಉಬ್ಬರ ಅಥವಾ ಅಸ್ವಸ್ಥತೆ ಕಾಣಿಸಬಹುದು. ಅಗತ್ಯವಿದ್ದರೆ ಸ್ವಲ್ಪ ಪ್ರಮಾಣದಲ್ಲಿ ನೀರು ಕುಡಿಯಬಹುದು.
ತಕ್ಷಣ ಧೂಮಪಾನ ಅಥವಾ ಮದ್ಯಪಾನ ಬೇಡ: ಇವು ಜೀರ್ಣಕ್ರಿಯೆಯನ್ನು ಹದಗೆಡಿಸಿ, ಹೊಟ್ಟೆಯ ಒಳಪದರಕ್ಕೆ ಹಾನಿ ಉಂಟುಮಾಡುವ ಅಪಾಯವಿರುತ್ತದೆ.
ಹೆಚ್ಚು ತಿನ್ನುವ ಅಭ್ಯಾಸ ಬೇಡ: ಅತಿಯಾಗಿ ಆಹಾರ ಸೇವಿಸುವುದರಿಂದ ಗ್ಯಾಸ್ಟ್ರಿಕ್, ಹೊಟ್ಟೆಭಾರ, ಅಜೀರ್ಣ ಮತ್ತು ತೂಕ ಹೆಚ್ಚಾಗಬಹುದು.
ಇದನ್ನೂ ಓದಿ: ಮಳೆಗಾಲದಲ್ಲಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆ ಕಂಡುಬರುತ್ತಿದ್ದರೆ ಈ ಸಿಂಪಲ್ ಟಿಪ್ಸ್ ನಿಮಗಾಗಿ!
ಊಟವಾದ ನಂತರ ಏನು ಮಾಡಬೇಕು?
- 10–15 ನಿಮಿಷ ನಿಧಾನವಾಗಿ ವಾಕ್ ಮಾಡಬಹುದು.
- ಆಹಾರವನ್ನು ಚೆನ್ನಾಗಿ ಜಗಿದು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ.
- ಊಟದ ಬಳಿಕ ತಕ್ಷಣ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮುಂದೆ ಗಂಟೆಗಳ ಕಾಲ ಕುಳಿತುಕೊಳ್ಳಬೇಡಿ.
- ಊಟದ ತಕ್ಷಣ ಹಣ್ಣುಗಳನ್ನು ಸೇವಿಸುವ ಬದಲು 1–2 ಗಂಟೆಗಳ ನಂತರ ಸೇವಿಸುವುದು ಒಳ್ಳೆಯದು.
- ಜೀರ್ಣಕ್ರಿಯೆ ಸುಧಾರಿಸಲು ಪ್ರತಿದಿನ ಒಂದೇ ಸಮಯಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
ಊಟದ ನಂತರ ಆಗಾಗ ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಅಥವಾ ಅಜೀರ್ಣ ಸಮಸ್ಯೆಗಳು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಇಂತಹ ಲಕ್ಷಣಗಳು ನಿರಂತರವಾಗಿದ್ದರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಅಥವಾ ಅರ್ಹ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯುವುದು ಉತ್ತಮ. ಆರೋಗ್ಯಕರ ಆಹಾರದ ಜೊತೆಗೆ ಸರಿಯಾದ ಆಹಾರ ಪದ್ಧತಿಯೂ ಉತ್ತಮ ಆರೋಗ್ಯದ ಗುಟ್ಟು ಎಂಬುದನ್ನು ಮರೆಯಬೇಡಿ.
Disclaimer: ಇದು ವೈದ್ಯರ ಸಲಹೆಯಾಗಿದೆಯೇ ಹೊರತು ಟಿವಿ9 ಕನ್ನಡ ವಯಕ್ತಿಕ ಆರೋಗ್ಯ ಸಲಹೆಗಳನ್ನು ಕೊಡುವುದಿಲ್ಲ. ಹೆಚ್ಚಿನ ಆರೋಗ್ಯ ಸಲಹೆಗಳಿಗೆ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ