ರಿಯಾನ್ಸ್ ಪಟ್ಟಣಶೆಟ್ಟಿImage Credit source: tv9
ವಿಜಯಪುರ, ಜುಲೈ 11: ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಜಗತ್ತಿನಾದ್ಯಂತ ಹಲವರು ಸಾಬೀತುಪಡಿಸಿದ್ದಾರೆ. ಇದೀಗ ಅದೇ ಸಾಲಿಗೆ ವಿಜಯಪುರ (Vijayapura) ಜಿಲ್ಲೆಯ ಪುಟ್ಟ ಬಾಲಕನೊಬ್ಬ ಸೇರಿದ್ದು, ವಯಸ್ಸಿಗೂ ಮೀರಿದ ಅಸಾಧಾರಣ ಸಾಧನೆ ಮಾಡಿದ್ದಾನೆ. ವಿಜಯಪುರ ನಗರದ ನಿವಾಸಿಗಳಾದ ಸಚಿನ್ ಪಟ್ಟಣಶೆಟ್ಟಿ ಹಾಗೂ ಸಿಂಚನಾ ದಂಪತಿಯ ಪುತ್ರ, ಕೇವಲ 10 ತಿಂಗಳ ಮಗು ರಿಯಾನ್ಸ್ ಪಟ್ಟಣಶೆಟ್ಟಿ ಅಂಬೆಗಾಲಿಡುವ ಪ್ರಾಯದಲ್ಲೇ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Noble Book of World Records)’ ಗೌರವಕ್ಕೆ ಪಾತ್ರನಾಗಿದ್ದಾನೆ.
ರಿಯಾನ್ಸ್ ಸಾಧನೆ ಏನು?
ಬಾಲಕ ರಿಯಾನ್ಸ್ ಕೇವಲ 10 ತಿಂಗಳ ವಯಸ್ಸಿದ್ದಾಗ ಬರೋಬ್ಬರಿ 21 ಮೆಟ್ಟಿಲುಗಳನ್ನು ಕೇವಲ 36 ಸೆಕೆಂಡುಗಳಲ್ಲಿ ಸರಾಗವಾಗಿ ಹತ್ತುವ ಮೂಲಕ ದಾಖಲೆ ಬರೆದಿದ್ದಾನೆ. ಇಷ್ಟು ಸಣ್ಣ ಪ್ರಾಯದಲ್ಲಿ ಮಗುವೊಂದು ಇಷ್ಟು ವೇಗವಾಗಿ ಮೆಟ್ಟಿಲು ಹತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಮಗುವಿನ ಸಾಮರ್ಥ್ಯ ಗುರುತಿಸಿದ ಪೋಷಕರು
ಬಾಲಕ ರಿಯಾನ್ಸ್ ಆರಂಭದಲ್ಲಿ ಮನೆಯೊಳಗಿನ ಮೆಟ್ಟಿಲುಗಳನ್ನು ಅತ್ಯಂತ ವೇಗವಾಗಿ ಹತ್ತಿ ಇಳಿಯುತ್ತಿದ್ದ. ಮಗನ ಈ ವಿಶಿಷ್ಟ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ತಾಯಿ ಸಿಂಚನಾ, ಆತನಿಗೆ ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತುವುದಕ್ಕೆ ಪ್ರೇರೇಪಿಸಿದರು. ತಾಯಿಯ ಪ್ರೋತ್ಸಾಹದೊಂದಿಗೆ ರಿಯಾನ್ಸ್ ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಕೂಡ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಹತ್ತಿ ತೋರಿಸಿದ. ಮಗನ ಈ ವಿಶಿಷ್ಟ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಬೇಕೆಂದು ನಿರ್ಧರಿಸಿದ ಪೋಷಕರು, ರಿಯಾನ್ಸ್ ಮೆಟ್ಟಿಲು ಹತ್ತುವ ದೃಶ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದರು. ಎಲ್ಲಾ ದಾಖಲೆ ಹಾಗೂ ವಿಡಿಯೋಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳು ಬಾಲಕನ ಸಾಧನೆಯನ್ನು ಜಾಗತಿಕ ದಾಖಲೆಯಾಗಿ ಮಾನ್ಯ ಮಾಡಿ ಅಧಿಕೃತ ಪ್ರಮಾಣಪತ್ರ ನೀಡಿದ್ದಾರೆ.
ರಿಯಾನ್ಸ್ ಪೋಷಕರು ಹೇಳುವುದೇನು ನೋಡಿ?
ರಿಯಾನ್ಸ್ನ ಈ ಅಪರೂಪದ ಸಾಧನೆ ಇಡೀ ಪಟ್ಟಣಶೆಟ್ಟಿ ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ‘ನಮ್ಮ ಮಗು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ದೊಡ್ಡ ಸಾಧನೆ ಮಾಡುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ. ಮನೆಯಲ್ಲಿ ನಾವು ಮೆಟ್ಟಿಲು ಹತ್ತುವಾಗ ಆತ ಮುಂಚೂಣಿಯಲ್ಲಿ ಓಡುತ್ತಿದ್ದ. ಇದನ್ನು ನೋಡಿದ ನೆರೆಹೊರೆಯವರು ಮಗುವಿನ ವೇಗವನ್ನು ಕಂಡು ಮೆಚ್ಚಿಕೊಳ್ಳುತ್ತಿದ್ದರು. ಇದೀಗ ನಮ್ಮ ಮಗನ ಸಾಧನೆಯನ್ನು ಗುರುತಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಅಭಿನಂದಿಸಿರುವುದು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ’ ಎಂದು ಪೋಷಕರಾದ ಸಚಿನ್ ಮತ್ತು ಸಿಂಚನಾ ಹರ್ಷ ಹಂಚಿಕೊಂಡಿದ್ದಾರೆ.
‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆ ಮಾತಿಗೆ ಅನ್ವರ್ಥವಾಗಿರುವ ಪುಟ್ಟ ಪೋರ ರಿಯಾನ್ಸ್ ಭವಿಷ್ಯದಲ್ಲಿ ಇನ್ನೂ ಮಿಗಿಲಾದ ಸಾಧನೆಗಳನ್ನು ಮಾಡಲಿ ಎಂದು ವಿಜಯಪುರದ ಜನತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಾರೈಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:34 am, Sat, 11 July 26