ಮೈಸೂರು, ಜು.11: ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇಡೀ ರಾಷ್ಟ್ರದಲ್ಲಿ ಜನಪ್ರಿಯತೆ, ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದ ಎಸ್. ಜಾನಕಿ ಅವರ ಅಗಲಿಕೆ ಕಲಾ ಲೋಕಕ್ಕೆ ತುಂಬಲಾರದ ನಷ್ಟ ಎಂದು ಅವರು ಬಣ್ಣಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ, 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿರುವ ಜಾನಕಿ ಅವರು ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ 28-30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ದೇಶ ಕಂಡ ಅತ್ಯುನ್ನತ ಹಿನ್ನೆಲೆ ಗಾಯಕಿಯರಲ್ಲಿ ಅವರು ಒಬ್ಬರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಂತೆ, ಎಸ್. ಜಾನಕಿ ಅವರನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ದೇವೇಗೌಡರು ಹೇಳಿದರು. ಜಾನಕಿ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ ಶಾಸಕರು, ಅವರ ಕುಟುಂಬ ವರ್ಗ, ಚಲನಚಿತ್ರ ಕಲಾವಿದರು ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಕೋರಿದರು. ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ತೋಟದ ಮನೆಯಲ್ಲಿ ಎಸ್. ಜಾನಕಿ ಅವರನ್ನು ಎರಡು-ಮೂರು ಬಾರಿ ಭೇಟಿಯಾಗಿ ಊಟ-ತಿಂಡಿ ಹಂಚಿಕೊಂಡಿದ್ದನ್ನು ದೇವೇಗೌಡರು ಭಾವುಕರಾಗಿ ಸ್ಮರಿಸಿದರು. ಮೈಸೂರಿನ ಬಗ್ಗೆ ಜಾನಕಿ ಅವರಿಗೆ ಅಪಾರ ಪ್ರೀತಿ ಇತ್ತು ಎಂದು ಅವರು ತಿಳಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ