ಪ್ರಾತಿನಿಧಿಕ ಚಿತ್ರImage Credit source: Getty images
ಬೆಂಗಳೂರು, ಜುಲೈ 12: ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಶಿಕ್ಷಣ ಇಲಾಖೆ (education department) ಮುಂದಾಗಿದೆ. 5, 7, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ಮೌಲ್ಯಮಾಪನ ಪರೀಕ್ಷೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ. ಆದರೆ ಈ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆ ಎಂದು ಕರೆಯದೇ, ಮೌಲ್ಯಮಾಪನ ಪರೀಕ್ಷೆ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಎರಡು ವರ್ಷಗಳ ಹಿಂದೆ ಇದೇ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಸಲು ಇಲಾಖೆ ಯೋಜನೆ ರೂಪಿಸಲು ಮುಂದಾಗಿದೆ.
ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ
ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 5, 7, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ ಈ ಪರೀಕ್ಷೆ ನಡೆಸಲು ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಕರ್ನಾಟಕದ 2 ಸೇರಿ ಭಾರತದ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್; ಕಾರಣ ಗೊತ್ತಾ?
ಈ ಹಿಂದೆ ಬೋರ್ಡ್ ಮಾದರಿಯ ವಾರ್ಷಿಕ ಪರೀಕ್ಷೆ ಎಂಬ ಹೆಸರಿನಲ್ಲಿ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದ್ದಾಗ ಪೋಷಕರು, ಖಾಸಗಿ ಶಾಲೆಗಳು ಹಾಗೂ ಶಿಕ್ಷಣ ತಜ್ಞರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ಕೋರ್ಟ್ ಮೊರೆ ಕೂಡ ಹೋಗಲಾಗಿತ್ತು. ಆದರೆ ಈ ಬಾರಿ ಅದೇ ಪರೀಕ್ಷೆಯನ್ನು ಮೌಲ್ಯಮಾಪನ ಪರೀಕ್ಷೆ ಎಂಬ ಮಾದರಿಯಲ್ಲಿ ಫೇಲ್ ಮಾಡದೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಾಗೂ ಕಲಿಕಾ ಸುಧಾರಣೆ ಕ್ರಮಗಳನ್ನ ರೂಪಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಪ್ಲ್ಯಾನ್ಗೆ ಮುಂದಾಗಿದೆ.
ಮೌಲ್ಯಮಾಪನ ಪರೀಕ್ಷೆಯ ವಿಶೇಷತೆಗಳು ಏನು?
- 5, 7, 8 ಹಾಗೂ 9ನೇ ತರಗತಿಗಳಿಗೆ ಅನ್ವಯ
- ಬೋರ್ಡ್ ಪರೀಕ್ಷೆ ಎಂದು ಕರೆಯುವ ಬದಲು ಮೌಲ್ಯಮಾಪನ ಪರೀಕ್ಷೆ ಎಂಬ ಹೆಸರಿನಲ್ಲಿ ಪರೀಕ್ಷೆ
- ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮೌಲ್ಯಮಾಪನ ಉದ್ದೇಶ
- ಪರೀಕ್ಷಾ ಮಂಡಳಿಯಿಂದ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುವುದು.
- ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ಮಾಡಿ, ಉತ್ತರ ಪತ್ರಿಕೆಗಳನ್ನು ಶಾಲೆಗಳಿಗೆ ರವಾನೆ ಮಾಡಲಾಗುವುದು.
- ಮಕ್ಕಳ ಕಲಿಕಾ ಪ್ರಗತಿಗೆ ಅನುಕೂಲ ಜೊತೆಗೆ ಮಕ್ಕಳ ವಾರ್ಷಿಕ ಕಲಿಕಾ ಮಟ್ಟ ಪರಿಶೀಲನೆ
ಪರೀಕ್ಷಾ ಮಂಡಳಿಯೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಸಿದ್ಧಪಡಿಸಿ ಆಯಾ ಶಾಲೆಗಳಿಗೆ ಕಳುಹಿಸಲಿದೆ. ಬಳಿಕ ತಾಲೂಕು ಮಟ್ಟದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಿಂದ ರಾಜ್ಯಾದ್ಯಂತ ಏಕರೂಪದ ಮೌಲ್ಯಮಾಪನ ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು
ಇನ್ನು ಈ ಕ್ರಮಕ್ಕೆ ಆರಂಭದಲ್ಲೇ ಪರ-ವಿರೋಧ ಕೇಳುಬಂದಿದ್ದವು. ಪುಟ್ಟ ಮಕ್ಕಳ ಮೇಲೆ ಪರೀಕ್ಷೆಯ ಒತ್ತಡ ಹೆಚ್ಚಾಗುವ ಸಾಧ್ಯತೆ ಎಂಬ ಆತಂಕ ವ್ಯಕ್ತವಾಗಿತ್ತು. ಪಬ್ಲಿಕ್ ಮಾದರಿಯಂತೆಯೇ ಪರೀಕ್ಷೆ ಇರಲಿದೆಯೇ? ಅಥವಾ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಇದು ಪರಿಣಾಮಕಾರಿ ಹೆಜ್ಜೆಯಾಗಲಿದೆಯಾ ಕಾದು ನೋಡಬೇಕಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.