ಪಾಟ್ನಾ, ಜುಲೈ 14: ಚುನಾವಣಾ ರಾಜಕೀಯಕ್ಕೆ ಪ್ರಥಮ ಬಾರಿಗೆ ನೇರವಾಗಿ ಧುಮುಕಿರುವ ಪ್ರಶಾಂತ್ ಕಿಶೋರ್(Prashanth Kishor), ಜುಲೈ 30ರಂದು ನಡೆಯಲಿರುವ ಬಂಕಿಪುರ ವಿಧಾನಸಭಾ ಉಪ ಚುನಾವಣೆ(Assembly Election)ಗಾಗಿ ಸೋಮವಾರ ರೋಡ್ ಶೂ ಮಾಡಿ ಬಳಿಕ ನಾಮಪತ್ರ ಸಲ್ಲಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಪ್ರಶಾಂತ್ ಕಿಶೋರ್ ಹಾಗೂ ಅವರ ಪತ್ನಿ ಡಾ. ಜಹಾನ್ವಿ ದಾಸ್ ಅವರ ಒಟ್ಟು ಕುಟುಂಬದ ಆಸ್ತಿ ಮೌಲ್ಯ ಬರೋಬ್ಬರಿ 198 ಕೋಟಿ ರೂ.ಗೂ ಅಧಿಕ ಎಂದು ಘೋಷಿಸಲಾಗಿದೆ. ಅವರು ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡಿದ್ದರು.
ಪ್ರಶಾಂತ್ ಕಿಶೋರ್ ಆಸ್ತಿ ವಿವರ
ಪ್ರಶಾಂತ್ ಕಿಶೋರ್ ಅವರ ವೈಯಕ್ತಿಕ ಆಸ್ತಿ (ಒಟ್ಟು: 96.06 ಕೋಟಿ ರೂ.)
ಚರ ಆಸ್ತಿ: 22.19 ಕೋಟಿ ರೂ. (ಬ್ಯಾಂಕ್ ಫಿಕ್ಸ್ಡ್ ಡಿಪಾಸಿಟ್ ಹಾಗೂ ಮಾರುಕಟ್ಟೆ ಹೂಡಿಕೆಗಳು ಸೇರಿ).
ಸ್ಥಿರ ಆಸ್ತಿ : 73.87 ಕೋಟಿ ರೂ. (ಬಿಹಾರದ ರೋಹ್ತಾಸ್‌ನಲ್ಲಿರುವ ಮೂರು ಎಕರೆಗೂ ವಿಸ್ತರಿಸಿರುವ ಹಳೆಯ ರೈಸ್ ಮಿಲ್ ಜಾಗ ಹಾಗೂ ವಿವಿಧ ನಗರಗಳಲ್ಲಿನ ವಸತಿ ಆಸ್ತಿಗಳು).
ಕೈಯಲ್ಲಿರುವ ನಗದು: 65,570 ರೂ.
ಸಾಲ: 5.77 ಕೋಟಿ ರೂ.
ಪತ್ನಿ ಡಾ. ಜಹಾನ್ವಿ ದಾಸ್ ಅವರ ಆಸ್ತಿ (ಒಟ್ಟು: 101.93 ಕೋಟಿ ರೂ.)
ದೆಹಲಿಯ ಅಪೊಲೊ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಹಿರಿಯ ಸಲಹೆಗಾರರಾಗಿರುವ ಪ್ರಶಾಂತ್ ಕಿಶೋರ್ ಅವರ ಪತ್ನಿ ಡಾ. ಜಹಾನ್ವಿ ದಾಸ್ ಅವರು ತಮ್ಮ ಪತಿಗಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
ಚರ ಆಸ್ತಿ: 89.51 ಕೋಟಿ ರೂ.
ಸ್ಥಿರ ಆಸ್ತಿ: 12.42 ಕೋಟಿ ರೂ.
ಚಿನ್ನಾಭರಣ: 64.12 ಲಕ್ಷ ರೂ. ಮೌಲ್ಯದ 475 ಗ್ರಾಂ ಚಿನ್ನ ಹಾಗೂ 200 ಗ್ರಾಂ ಬೆಳ್ಳಿ.
ಕೈಯಲ್ಲಿರುವ ನಗದು: 1,95,200 ರೂ.
ಸಾಲ: 55.38 ಲಕ್ಷ ರೂ.
ವಿಡಿಯೋ
VIDEO | Patna, Bihar: Jan Suraaj founder and Bankipur candidate Prashant Kishor files his nomination.
(Full video available on PTI Videos – https://t.co/n147TvrpG7) pic.twitter.com/9SaB8RLw8Q
— Press Trust of India (@PTI_News) July 13, 2026
ಖಾಸಗಿ ಕಂಪನಿಯ ಶೇ. 100 ರಷ್ಟು ಒಡೆತನ ಮತ್ತು ಕೋಟಿ ಕೋಟಿ ರೂ. ದೇಣಿಗೆ
ಪ್ರಶಾಂತ್ ಕಿಶೋರ್ ಅವರು ‘ವೇಧಾಸ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಖಾಸಗಿ ಕಂಪನಿಯಲ್ಲಿ ಶೇ. 100 ರಷ್ಟು ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ. ಈ ಕಂಪನಿಯ ಮೌಲ್ಯವೇ ಸುಮಾರು 95.26 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ವಿಶೇಷವೆಂದರೆ, ಇದೇ ಕಂಪನಿಯ ಮೂಲಕ ಪ್ರಶಾಂತ್ ಕಿಶೋರ್ ಅವರು ತಮ್ಮ ಸ್ವಂತ ‘ಜನ ಸುರಾಜ್ ಪಕ್ಷ’ಕ್ಕೆ ಬರೋಬ್ಬರಿ 85 ಕೋಟಿ ರೂ. ಹಾಗೂ ‘ಜನ ಸುರಾಜ್ ಫೌಂಡೇಶನ್’ಗೆ 50 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ತಾವು ರಾಜಕೀಯಕ್ಕೆ ಬರುವ ಮುನ್ನ ಕಾರ್ಪೊರೇಟ್ ಸಲಹೆಗಾರರಾಗಿ ಕೇವಲ 3 ವರ್ಷಗಳಲ್ಲಿ 241 ಕೋಟಿ ರೂ. ಸಂಪಾದಿಸಿದ್ದಾಗಿ ಅವರು ಈ ಹಿಂದೆ ತಿಳಿಸಿದ್ದರು.
ಮತ್ತಷ್ಟು ಓದಿ: Assembly Elections: ಠೇವಣಿ ಉಳಿಯಬೇಕಾದರೆ ಅಭ್ಯರ್ಥಿ ಎಷ್ಟು ಮತ ಪಡೆಯಬೇಕು?
10ನೇ ತರಗತಿ: 1991 ರಲ್ಲಿ ಬಕ್ಸಾರ್‌ನ ಎಂ.ಪಿ ಪ್ರೌಢಶಾಲೆಯಲ್ಲಿ ಅಧ್ಯಯನ
12ನೇ ತರಗತಿ: 1993 ರಲ್ಲಿ ಪ್ರಸಿದ್ಧ ಪಾಟ್ನಾ ವಿಜ್ಞಾನ ಕಾಲೇಜಿನಿಂದ ಅಧ್ಯಯನ ಪೂರ್ಣ
ಬಿಬಿಎ (BBA) ಪದವಿ: 1996 – 1999 ರ ಅವಧಿಯಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಪದವಿ.
ಮಾಸ್ಟರ್ ಆಫ್ ಹೆಲ್ತ್ ಅಡ್ಮಿನಿಸ್ಟ್ರೇಷನ್ (MHA): 2001 – 2003 ರ ಅವಧಿಯಲ್ಲಿ ಹೈದರಾಬಾದ್‌ನ ‘ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ’ದಿಂದ (ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ) ಸ್ನಾತಕೋತ್ತರ ಪದವಿ.
ಫ್ರೆಂಚ್ ಭಾಷಾ ಪ್ರಾವೀಣ್ಯತೆ: 2010 ರಲ್ಲಿ ಫ್ರಾನ್ಸ್‌ನ ಕ್ಲರ್ಮಾಂಟ್-ಫೆರಾಂಡ್ ವಿಶ್ವವಿದ್ಯಾಲಯದ ಸಂಯೋಜಿತ ಸಂಸ್ಥೆಯಲ್ಲಿ ತೀವ್ರತರವಾದ ಫ್ರೆಂಚ್ ಭಾಷಾ ಅಧ್ಯಯನ ನಡೆಸಿದ್ದಾರೆ.
2021 ರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯ ಭಾರಿ ಗೆಲುವಿನ ನಂತರ ಪ್ರಶಾಂತ್ ಕಿಶೋರ್ ಅವರು ತಾವು ಇತರ ಪಕ್ಷಗಳಿಗೆ ರಾಜಕೀಯ ತಂತ್ರಜ್ಞ ಆಗಿ ಕೆಲಸ ಮಾಡುವುದನ್ನು ಅಧಿಕೃತವಾಗಿ ನಿಲ್ಲಿಸುವುದಾಗಿ ಘೋಷಿಸಿದರು. ನಂತರ ಬಿಹಾರಕ್ಕೆ ಮರಳಿ ‘ಜನ ಸುರಾಜ್’ ಎಂಬ ಸ್ವಂತ ರಾಜಕೀಯ ಸಂಘಟನೆಯನ್ನು ಕಟ್ಟಿ, ಪ್ರಸ್ತುತ ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯ ಮೂಲಕ ತಾವೇ ಖುದ್ದಾಗಿ ನೇರ ರಾಜಕಾರಣಕ್ಕೆ ಇಳಿದಿದ್ದಾರೆ.
ಬಂಕಿಪುರದಲ್ಲಿ ಉಪಚುನಾವಣೆ ಏಕೆ?
ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ನಿತಿನ್ ನಬಿನ್ ಅವರು 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಂಕಿಪುರ ಕ್ಷೇತ್ರದಿಂದ ಭಾರಿ ಅಂತರದಲ್ಲಿ ಗೆದ್ದಿದ್ದರು. ಆದರೆ, ಇತ್ತೀಚೆಗೆ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಹಾಗೂ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಹೀಗಾಗಿ ಈ ಕ್ಷೇತ್ರ ತೆರವಾಗಿದ್ದು, ಸದ್ಯ ಬಿಜೆಪಿ ಅಭ್ಯರ್ಥಿ ನೀರಜ್ ಸಿನ್ಹಾ ಮತ್ತು ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ನಡುವೆ ಬಂಕಿಪುರದಲ್ಲಿ ನೇರ ಹಾಗೂ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿದೆ. ಜುಲೈ 30ರ ಮತದಾನ ಹಾಗೂ ಆಗಸ್ಟ್ 3ರ ಫಲಿತಾಂಶದ ಮೇಲೆ ಇಡೀ ಬಿಹಾರದ ಕಣ್ಣಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 9:44 am, Tue, 14 July 26