Headlines

POCSO ಪ್ರಕರಣಗಳಿಗೆ ಬ್ರೇಕ್: ದೇಶದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಲೈಂಗಿಕ ಶಿಕ್ಷಣ’ ಕಡ್ಡಾಯ, ಕೇಂದ್ರದ ಪ್ಲ್ಯಾನ್ – Kannada News | Centre Tells Supreme Court Age Appropriate Health Education Will Be Integrated Into Curriculum

ನವದೆಹಲಿ, ಜುಲೈ 14: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಹದಿಹರೆಯದವರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಒಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ದೇಶಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ‘ಸಮಗ್ರ ದೈಹಿಕ ಹಾಗೂ ಲೈಂಗಿಕ ಶಿಕ್ಷಣ’ವನ್ನು ಅಧಿಕೃತ ವಿಷಯವಾಗಿ ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, ರಾಷ್ಟ್ರೀಯ ತಜ್ಞರ ಸಮಿತಿ ನೀಡಿರುವ ಈ ಕ್ರಾಂತಿಕಾರಿ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಂಡಿದ್ದು, ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ತಕ್ಷಣವೇ ದೇಶಾದ್ಯಂತ ಇದನ್ನು ಜಾರಿಗೆ ತರಲು ಸಿದ್ಧವಾಗಿದೆ ಎಂದು  ತಿಳಿಸಿದ್ದಾರೆ.

ಪಠ್ಯಕ್ರಮದಲ್ಲಿ ಏನಿರಲಿದೆ? ವಾರಕ್ಕೆ 2 ಕ್ಲಾಸ್ ಕಡ್ಡಾಯ

ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-2020) ರ ಉದ್ದೇಶಗಳಿಗೆ ಅನುಗುಣವಾಗಿ ಎನ್‌ಸಿಇಆರ್‌ಟಿ (NCERT) ಈ ಹೊಸ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಿದೆ. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳ ವಯಸ್ಸಿಗೆ ತಕ್ಕಂತೆ ಈ ಕೆಳಗಿನ ಪ್ರಮುಖ ವಿಷಯಗಳನ್ನು ಬೋಧಿಸಲಾಗುತ್ತದೆ.

ಮತ್ತಷ್ಟು ಓದಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಉತ್ತೇಜಿಸುವ ಇನ್​ಸ್ಟಾ ಜಾಹೀರಾತುಗಳು; ಮೆಟಾಗೆ ನೋಟೀಸ್

ಗುಡ್ ಟಚ್ ಮತ್ತು ಬ್ಯಾಡ್ ಟಚ್: ಮಕ್ಕಳಿಗೆ ಯಾವುದು ಸುರಕ್ಷಿತ ಸ್ಪರ್ಶ ಮತ್ತು ಯಾವುದು ಅಸುರಕ್ಷಿತ ಸ್ಪರ್ಶ ಎಂಬುದನ್ನು ಸರಳವಾಗಿ ಕಲಿಸುವುದು.

ದೌರ್ಜನ್ಯದ ವಿರುದ್ಧ ಜಾಗೃತಿ: ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಯಾರಿಗೆ ದೂರು ನೀಡಬೇಕು ಎಂಬ ಅರಿವು ಮೂಡಿಸುವುದು.

ದೇಹದ ತಿಳಿವಳಿಕೆ ಮತ್ತು ನೈರ್ಮಲ್ಯ: ವೈಯಕ್ತಿಕ ನೈರ್ಮಲ್ಯ ಹಾಗೂ ಮಾನವ ದೇಹದ ಭಾಗಗಳ ಮೂಲಭೂತ ಮತ್ತು ವೈಜ್ಞಾನಿಕ ಜ್ಞಾನವನ್ನು ನೀಡುವುದು.

ವಿಶೇಷ ತರಬೇತಿ ಪಡೆದ ಶಿಕ್ಷಕರು: ಈ ವಿಷಯವನ್ನು ಬೋಧಿಸಲು ಪ್ರಾಥಮಿಕ ಹಂತದಿಂದಲೇ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಲಾಗುತ್ತದೆ. ಪ್ರತಿ ವಾರಕ್ಕೆ ಕನಿಷ್ಠ ಎರಡು ಬಾರಿ 15 ರಿಂದ 20 ನಿಮಿಷಗಳ ಕಾಲ ಈ ಜಾಗೃತಿ ತರಗತಿಗಳನ್ನು ನಡೆಸುವುದು ಕಡ್ಡಾಯವಾಗಲಿದೆ.

ಈ ಸಮಿತಿಯನ್ನು ರಚಿಸಿದ್ದು ಏಕೆ?

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹದಿಹರೆಯದ ಯುವಕ-ಯುವತಿಯರು ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದಿದ್ದರೂ ಸಹ, ಭಾರತೀಯ ಕಾನೂನಿನ ಪ್ರಕಾರ 18 ವರ್ಷ ತುಂಬದ ಕಾರಣ ಅವರ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಕಠಿಣ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಇದು ಯುವಜನರ ಇಡೀ ಭವಿಷ್ಯವನ್ನೇ ಹಾಳುಮಾಡುತ್ತಿದೆ.

ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಹಾಗೂ ಇಂತಹ ಪ್ರಕರಣಗಳನ್ನು ತಡೆಯಲು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 26 ಸದಸ್ಯರ ರಾಷ್ಟ್ರೀಯ ತಜ್ಞರ ಸಮಿತಿಯನ್ನು ರಚಿಸಿತ್ತು. ಇದರಲ್ಲಿ ಪ್ರಸಿದ್ಧ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS), ಮಕ್ಕಳ ಮನಶ್ಶಾಸ್ತ್ರಜ್ಞರು ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ತಜ್ಞರು ಪಾಲ್ಗೊಂಡು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಪೋಷಕರಿಗೂ ಇರಲಿದೆ ವಿಶೇಷ ತರಗತಿ

ಪೋಷಕರು-ಶಿಕ್ಷಕರ ಸಭೆ: ಕೇವಲ ಮಕ್ಕಳಿಗೆ ಮಾತ್ರವಲ್ಲದೆ, ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಪೋಷಕರು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ತಂದೆ-ತಾಯಂದಿರಿಗೂ ವಿಶೇಷ ಸಭೆಗಳ ಮೂಲಕ ಕೌನ್ಸಿಲಿಂಗ್ ನೀಡಲು ಸಮಿತಿ ಶಿಫಾರಸು ಮಾಡಿದೆ.

ಹಿರಿಯ ವಕೀಲರಾದ ಮಾಧವಿ ದಿವಾನ್ ಅವರು ಈ ವರದಿಯನ್ನು ಸ್ವಾಗತಿಸಿದ್ದಾರಾದರೂ, ಭಾರತೀಯ ಸಮಾಜ ಮತ್ತು ಸಂಸ್ಕೃತಿಗೆ ತಕ್ಕಂತೆ ‘ಸಮಗ್ರ ಲೈಂಗಿಕ ಶಿಕ್ಷಣ’ ಎಂಬ ಪದವನ್ನು ಹೆಚ್ಚು ಸ್ಪಷ್ಟವಾಗಿ ಮತ್ತು ಸೂಕ್ಷ್ಮವಾಗಿ ಪಠ್ಯದಲ್ಲಿ ವ್ಯಾಖ್ಯಾನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಇಡೀ ವರದಿಯನ್ನು ಪೂರ್ಣವಾಗಿ ಅಧ್ಯಯನ ಮಾಡಿದ ನಂತರ ತನ್ನ ಅಂತಿಮ ಆದೇಶವನ್ನು ಪ್ರಕಟಿಸಲಿದೆ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲಾಗುವ ಮುನ್ಸೂಚನೆ ಸಿಕ್ಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *