Headlines

ಏಕದಿನ ವಿಶ್ವಕಪ್​ನಿಂದ 2 ತಂಡಗಳನ್ನು ಕೈ ಬಿಡಲು ಮುಂದಾದ ಐಸಿಸಿ! – Kannada News | ICC explores 12 team ODI World Cup 2027

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಿಂದ ಎರಡು ತಂಡಗಳನ್ನು ಕೈ ಬಿಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಗಂಭೀರ ಚಿಂತನೆ ನಡೆಸಿದೆ. ಇತ್ತೀಚೆಗೆ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಮುಖ ಪ್ರಸ್ತಾಪದ ಬಗ್ಗೆ ಆಡಳಿತ ಮಂಡಳಿ ಸುದೀರ್ಘ ಚರ್ಚೆ ನಡೆಸಿದ್ದು, ಈ ಚರ್ಚೆಯಂತೆ ಮುಂದಿನ ವಿಶ್ವಕಪ್​ನಿಂದ ಎರಡು ತಂಡಗಳನ್ನು ಕೈ ಬಿಡುವ ಸಾಧ್ಯತೆಯಿದೆ.

ಏಕಪಕ್ಷೀಯ ಪಂದ್ಯಗಳ ಕಡಿತ:

ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆ ಹೆಚ್ಚಾದಾಗ ಬಲಿಷ್ಠ ತಂಡಗಳು ಹಾಗೂ ತೀರಾ ಕೆಳಹಂತದ ತಂಡಗಳ ನಡುವೆ ಪಂದ್ಯಗಳು ನಡೆದು, ಅವು ತೀರಾ ನೀರಸ ಅಥವಾ ಏಕಪಕ್ಷೀಯವಾಗಿ ಮುಗಿಯುವ ಸಾಧ್ಯತೆ ಇರುತ್ತದೆ. ಇದು ಪ್ರಸಾರಕರಿಗೆ ಮತ್ತು ಜಾಹೀರಾತುದಾರರಿಗೆ ನಷ್ಟ ಉಂಟುಮಾಡಬಹುದು ಎಂಬ ಆತಂಕ ಐಸಿಸಿಗಿದೆ. ಇದೇ ಕಾರಣದಿಂದಾಗಿ ಎರಡು ತಂಡಗಳಿಗೆ ಕೋಕ್ ನೀಡಲು ಚಿಂತಿಸಲಾಗಿದೆ.

  • 2027ರ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 14 ತಂಡಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು.
  • ಐಸಿಸಿ ಇದೀಗ ತನ್ನ ನಿರ್ಧಾರ ಬದಲಿಸಿ, 12 ತಂಡಗಳಿಗೆ ಮಾತ್ರ ಅವಕಾಶ ನೀಡಲು ಮುಂದಾಗಿದೆ.

ವಾಣಿಜ್ಯ ಲಾಭಕ್ಕಾಗಿ ಮಾಸ್ಟರ್ ಪ್ಲ್ಯಾನ್:

ಮೂಲಗಳ ಪ್ರಕಾರ, ಮುಂಬರುವ ಜಾಗತಿಕ ಪ್ರಸಾರ ಹಕ್ಕುಗಳ ಮಾತುಕತೆಯ ವೇಳೆ ಗರಿಷ್ಠ ವಾಣಿಜ್ಯ ಲಾಭ ಗಳಿಸುವುದು ಐಸಿಸಿಯ ಮುಖ್ಯ ಉದ್ದೇಶವಾಗಿದೆ. ಟೂರ್ನಿಯಲ್ಲಿ ರೋಮಾಂಚನವನ್ನು ಹೆಚ್ಚಿಸಲು ಹಳೆಯ ‘ಸೂಪರ್ ಸಿಕ್ಸ್’ ಹಂತದ ಬದಲಿಗೆ ಹೊಸದಾಗಿ ‘ಸೂಪರ್ ಸೆವೆನ್’ ಹಂತವನ್ನು ಪರಿಚಯಿಸಲು ಯೋಜಿಸಲಾಗುತ್ತಿದೆ.

ಈ ಹೊಸ ಮಾದರಿಯಿಂದಾಗಿ ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ಹೈ-ವೋಲ್ಟೇಜ್ ಪಂದ್ಯವಾದ ‘ಭಾರತ ಮತ್ತು ಪಾಕಿಸ್ತಾನ’ ನಡುವಿನ ಹಣಾಹಣಿಗಳು ಹೆಚ್ಚು ಬಾರಿ ಎದುರಾಗುವ ಸಾಧ್ಯತೆ ಇರುತ್ತದೆ. ಇದು ದೂರದರ್ಶನ ಮತ್ತು ಡಿಜಿಟಲ್ ಪ್ರಸಾರಕರಿಗೆ ಭಾರಿ ಜಾಹೀರಾತು ಆದಾಯ ತಂದುಕೊಡಲಿದೆ.

ಸಹವರ್ತಿ ದೇಶಗಳ ಆಕ್ರೋಶ:

ಐಸಿಸಿಯ ಈ ಹಠಾತ್ ನಿರ್ಧಾರವು ಉದಯೋನ್ಮುಖ ಮತ್ತು ಸಹವರ್ತಿ ಕ್ರಿಕೆಟ್ ರಾಷ್ಟ್ರಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 2019 ಮತ್ತು 2023 ರ ವಿಶ್ವಕಪ್‌ಗಳಲ್ಲಿ ಕೇವಲ 10 ತಂಡಗಳಿಗೆ ಮಾತ್ರ ಅವಕಾಶ ನೀಡಿ ವ್ಯಾಪಕ ಟೀಕೆಗೆ ಒಳಗಾಗಿದ್ದ ಐಸಿಸಿ, ಬಳಿಕ 2027 ರ ಆವೃತ್ತಿಗೆ 14 ತಂಡಗಳನ್ನು ಘೋಷಿಸಿತ್ತು.

ಆದರೆ ಈಗ ಮತ್ತೆ ತಂಡಗಳ ಸಂಖ್ಯೆಯನ್ನು 12 ಕ್ಕೆ ಇಳಿಸಲು ಮುಂದಾಗಿರುವುದು ಕ್ರಿಕೆಟ್‌ನ ಜಾಗತಿಕ ಬೆಳವಣಿಗೆಗೆ ಮಾರಕ ಎಂದು ಸಣ್ಣ ದೇಶಗಳ ಕ್ರಿಕೆಟ್ ಮಂಡಳಿಗಳು ಆಕ್ರೋಶ ಹೊರಹಾಕಿವೆ.

ಇದನ್ನೂ ಓದಿ: ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ!

ಹೊಸ ನಿಯಮದ ಪ್ರಕಾರ, ಜಾಗತಿಕ ಅರ್ಹತಾ ಸುತ್ತಿನಿಂದ ವಿಶ್ವಕಪ್‌ಗೆ ಆಯ್ಕೆಯಾಗುವ ತಂಡಗಳ ಸಂಖ್ಯೆ 4 ರಿಂದ ಕೇವಲ 2 ಕ್ಕೆ ಕುಸಿಯಲಿದೆ. ಆತಿಥೇಯ ರಾಷ್ಟ್ರಗಳಾದ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ನೇರ ಅರ್ಹತೆ ಪಡೆದರೆ, ಮತ್ತೊಂದು ಆತಿಥೇಯ ದೇಶ ನಮೀಬಿಯಾ ಹಾಗೂ ಉಳಿದ ಸಹವರ್ತಿ ದೇಶಗಳು ಕೇವಲ 2 ಸ್ಥಾನಗಳಿಗಾಗಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ. ಇದರಿಂದಾಗಿ ಸಣ್ಣ ದೇಶಗಳು ವಿಶ್ವಕಪ್‌ನಿಂದ ಸಂಪೂರ್ಣವಾಗಿ ಹೊರಗುಳಿಯುವ ಅಪಾಯ ಎದುರಾಗಿದೆ.

Source link

Leave a Reply

Your email address will not be published. Required fields are marked *