Headlines

ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಬಂಡಾಯ ಬಣ ಸೇರಿದ ಟಿಎಂಸಿ ಹಿರಿಯ ನಾಯಕ ಮದನ್ ಮಿತ್ರ – Kannada News | Another big blow to Mamata Banerjee TMC Leader Madan Mitra joins rebel faction

ಕೊಲ್ಕತ್ತಾ, ಜುಲೈ 15: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ಟಿಎಂಸಿಯ ಹಿರಿಯ ನಾಯಕ ಮದನ್ ಮಿತ್ರ ಇಂದು ಟಿಎಂಸಿ ಪಕ್ಷ ತೊರೆದು, ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಟಿಎಂಸಿ ಬಣವನ್ನು ಸೇರಿಕೊಂಡಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಮರ್ಹಾಟಿ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದ ಮದನ್ ಮಿತ್ರ ಪಕ್ಷದ ಇತ್ತೀಚಿನ ಆಂತರಿಕ ಬಿಕ್ಕಟ್ಟಿನ ಸಮಯದಲ್ಲೂ ಮಮತಾ ಬ್ಯಾನರ್ಜಿ ಪರ ನಿಂತಿದ್ದರು. ಆದರೆ ಈಗ ಅವರು ರೆಬೆಲ್ ಬಣ ಸೇರಿಕೊಂಡಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ವಿರುದ್ಧ ಗಂಭೀರ ಆರೋಪ:

ಟಿಎಂಸಿ ಪಕ್ಷ ತೊರೆಯುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಮದನ್ ಮಿತ್ರ, ಮಮತಾ ಬ್ಯಾನರ್ಜಿ ಅವರ ಸೋದರಳಿಯನಾದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದರು. ಪಕ್ಷವನ್ನು ಬಲಪಡಿಸಲು ತಾವು ನೀಡಿದ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

“ನಾನು ಅಭಿಷೇಕ್ ಬ್ಯಾನರ್ಜಿಗೆ 6 ತಿಂಗಳು ಅಥವಾ ಒಂದು ವರ್ಷದ ಮಟ್ಟಿಗೆ ಪಕ್ಷದ ಜವಾಬ್ದಾರಿಯಿಂದ ಪಕ್ಕಕ್ಕೆ ಸರಿಯುವಂತೆ ಸಲಹೆ ನೀಡಿದ್ದೆ. ಮೊದಲು ನಾವೆಲ್ಲರೂ ಸೇರಿ ಪಕ್ಷವನ್ನು ಮರುನಿರ್ಮಾಣ ಮಾಡೋಣ, ಆಮೇಲೆ ನೀವು ಬಂದು ನಿಮ್ಮ ಸ್ಥಾನವನ್ನು ವಹಿಸಿಕೊಳ್ಳಿ ಎಂದು ಹೇಳಿದ್ದೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ನಾನು ಪಕ್ಷ ಬಿಡುವುದಿಲ್ಲ ಎಂದರು. ಈಗ ಪಕ್ಷ ಮುಳುಗುತ್ತಿದೆ. ಜನರು ಸಂಕಷ್ಟದಲ್ಲಿದ್ದಾರೆ. ಆದರೂ, ಎಲ್ಲರೂ ಸತ್ತರೂ ಪರವಾಗಿಲ್ಲ, ಅಭಿಷೇಕ್‌ನನ್ನು ಮಾತ್ರ ಉಳಿಸಬೇಕು ಎಂದು ಪಕ್ಷ ನಿರ್ಧರಿಸಿದೆ. ಹಾಗೆ ಮಾಡಲು ಪಕ್ಷಕ್ಕೆ ಒತ್ತಡ ಹೇರಲಾಗಿದೆ. ಇದು ಅತ್ಯಂತ ದುಃಖದ ಸಂಗತಿ. ಪಕ್ಷ ಎಲ್ಲರಿಗೂ ಸೇರಿದ್ದು. ಆದರೆ ಇವತ್ತು ಅದು ಕೇವಲ ಅಭಿಷೇಕ್ ಸೇವೆಗಷ್ಟೇ ಸೀಮಿತವಾಗಿರುವಂತೆ ಕಾಣುತ್ತಿದೆ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ನಾನಿನ್ನೂ ಬದುಕಿದ್ದೇನೆ ಎಂಬುದು ನೆನಪಿರಲಿ; ಟಿಎಂಸಿ ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ

ಜಾರಿ ನಿರ್ದೇಶನಾಲಯವು ಮದನ್ ಮಿತ್ರ ಅವರ ಪತ್ನಿ ಮತ್ತು ಪುತ್ರರಿಗೆ ಸಮನ್ಸ್ ಜಾರಿ ಮಾಡಿದ ಕೇವಲ ಒಂದು ದಿನದ ಬೆನ್ನಲ್ಲೇ ಈ ದಿಢೀರ್ ಬೆಳವಣಿಗೆ ನಡೆದಿದ್ದು, ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಧೋರಣೆಯೇ ತಮ್ಮ ಈ ನಿರ್ಧಾರಕ್ಕೆ ಕಾರಣ ಎಂದು ಮಿತ್ರ ಆರೋಪಿಸಿದ್ದಾರೆ.

ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಮಾತನಾಡಿದ ಮದನ್ ಮಿತ್ರ, ತಾವು ತೃಣಮೂಲ ಕಾಂಗ್ರೆಸ್‌ನ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದರೂ, ಶಾಸಕ ಸ್ಥಾನದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಮದನ್ ಮಿತ್ರ ಅವರ ಈ ನಿರ್ಧಾರ ಈಗಾಗಲೇ ಸಂಕಷ್ಟದಲ್ಲಿರುವ ತೃಣಮೂಲ ಕಾಂಗ್ರೆಸ್‌ಗೆ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಲಿದೆ. ಮಿತ್ರ ಅವರ ಈ ಆರೋಪಗಳಿಗೆ ಟಿಎಂಸಿ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ, ಮಮತಾ ಬ್ಯಾನರ್ಜಿ ಅವರು ಕೇವಲ ಎರಡು ವಾರಗಳ ಹಿಂದಷ್ಟೇ ಮದನ್ ಮಿತ್ರ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಅವರು ಬಂಡಾಯವೆದ್ದಿದ್ದಾರೆ. ಇತ್ತೀಚೆಗಷ್ಟೇ ಟಿಎಂಸಿಯ ಬಂಗಾಳ ಘಟಕದ ಅಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮದನ್ ಮಿತ್ರ ಅವರ ಈ ನಿರ್ಧಾರ ಮಮತಾಗೆ ದೊಡ್ಡ ಹೊಡೆತ ನೀಡಿದೆ.

ಇದನ್ನೂ ಓದಿ: ಟಿಎಂಸಿ ಪಕ್ಷ ತೊರೆದಿದ್ದ ಮೂವರು ಮಾಜಿ ಸಂಸದರು ಬಿಜೆಪಿಗೆ ಸೇರ್ಪಡೆ

ಟಿಎಂಸಿಯಲ್ಲಿ ಬಂಡಾಯದ ಬಿಕ್ಕಟ್ಟು:

2011ರಿಂದ ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರು 2026ರ ಚುನಾವಣಾ ಸೋಲಿನ ನಂತರ ಸರಣಿ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿಯ 58 ಶಾಸಕರು ಈಗಾಗಲೇ ಬಂಡಾಯವೆದ್ದಿದ್ದು, ಕಳೆದ ತಿಂಗಳು ನಡೆದ ವಿಶೇಷ ಅಧಿವೇಶನದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿ, ಅರೂಪ್ ರಾಯ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ವಿಧಾನಸಭೆಯ ಅಧಿಕೃತ ವಿರೋಧ ಪಕ್ಷದ ನಾಯಕರಾಗಿದ್ದಾರೆ. ತಾವೇ ನಿಜವಾದ ಟಿಎಂಸಿ ಎಂದು ಘೋಷಿಸಿಕೊಳ್ಳಲು ಈ ಬಣವು ಚುನಾವಣಾ ಆಯೋಗದ ಮೆಟ್ಟಿಲೇರಿದೆ.

ಇನ್ನೊಂದೆಡೆ, ಟಿಎಂಸಿಯ 28 ಲೋಕಸಭಾ ಸಂಸದರ ಪೈಕಿ 20 ಸಂಸದರು ಈಗಾಗಲೇ ಪಕ್ಷದಿಂದ ಹೊರಬಂದು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಜೊತೆ ವಿಲೀನಗೊಂಡು, ಕೇಂದ್ರದ ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *