Headlines

Unique Frog Temple: ಭಾರತದ ಏಕೈಕ ‘ಕಪ್ಪೆ ದೇವಾಲಯ’; ಇಲ್ಲಿದೆ ಬಣ್ಣ ಬದಲಾಯಿಸುವ ಶಿವಲಿಂಗ! – Kannada News | Manduk Mandir Oel: India’s Unique Frog Temple and Color Changing Shiva Lingam

ಭಾರತದ ಏಕೈಕ ‘ಕಪ್ಪೆ ದೇವಾಲಯImage Credit source: bhartiyadharohar.com

ಹಿಂದೂ ಧರ್ಮ ಮತ್ತು ಪುರಾಣಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಗೋವು, ನಾಗರಹಾವು, ಆನೆ ಅಥವಾ ಸಿಂಹಗಳನ್ನು ದೈವಿಕ ರೂಪದಲ್ಲಿ ಪೂಜಿಸುವುದನ್ನು ನಾವು ಭಾರತದಾದ್ಯಂತ ಕಾಣಬಹುದು. ಆದರೆ, ಮಳೆ ಮತ್ತು ಸಮೃದ್ಧಿಯ ಸಂಕೇತವಾಗಿರುವ ಕಪ್ಪೆಯನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಿಸಲಾದ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ? ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ‘ಓಯೆಲ್’ (Oel Town) ಎಂಬ ಸಣ್ಣ ಪಟ್ಟಣದಲ್ಲಿ ಇಂತಹದ್ದೊಂದು ಅಪರೂಪದ ಶಿವ ದೇವಾಲಯವಿದೆ. ಇಡೀ ದೇಶದಲ್ಲೇ ಇರುವ ಏಕೈಕ ಕಪ್ಪೆ ದೇವಾಲಯ (Manduk Mandir) ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಮಂಡೂಕ ತಂತ್ರಾಧಾರಿತ ಅದ್ಭುತ ವಾಸ್ತುಶಿಲ್ಪ:

ಈ ದೇವಾಲಯದ ಪ್ರಮುಖ ಆಕರ್ಷಣೆಯೇ ಇದರ ವಿಶಿಷ್ಟ ರಚನೆ. ಮೇಲ್ನೋಟಕ್ಕೆ ಈ ಇಡೀ ಮಂದಿರವು ಒಂದು ಬೃಹತ್ ಕಪ್ಪೆಯ ಆಕಾರದಲ್ಲಿ ಕಂಗೊಳಿಸುತ್ತದೆ. ವಾಸ್ತುಶಿಲ್ಪದ ಪ್ರಕಾರ, ಈ ದೇವಾಲಯವನ್ನು ಒಂದು ದೊಡ್ಡ ಕಪ್ಪೆಯ ಬೆನ್ನಿನ ಮೇಲೆ ನಿರ್ಮಿಸಲಾಗಿದ್ದು, ಆ ಕಪ್ಪೆಯು ಒಂದು ಬೃಹತ್ ಮೊಸಳೆಯ ಬೆನ್ನಿನ ಮೇಲೆ ಕುಳಿತಿರುವಂತೆ ವಿನ್ಯಾಸಗೊಳಿಸಲಾಗಿದೆ. ಮೇಘಾಲಯದ ಪ್ರಸಿದ್ಧ ತಾಂತ್ರಿಕ ಕಪಿಲ್ ಎಂಬುವವರ ಮಾರ್ಗದರ್ಶನದಲ್ಲಿ, ತಾಂತ್ರಿಕ ‘ಮಂಡೂಕ ಯಂತ್ರ’ವನ್ನು ಆಧರಿಸಿ ಇದನ್ನು ರಾಜಸ್ಥಾನಿ ಶೈಲಿಯಲ್ಲಿ ಕಟ್ಟಲಾಗಿದೆ. ಭಕ್ತರು ಪೂರ್ವದ್ವಾರದ ಮೂಲಕ ಪ್ರವೇಶಿಸಿದರೆ, ಕಪ್ಪೆಯ ಮುಖದ ಭಾಗದಿಂದ ನೇರವಾಗಿ ಗರ್ಭಗುಡಿಯನ್ನು ತಲುಪಬಹುದು. ದೇವಾಲಯದ ಹೊರಗೋಡೆಗಳ ಮೇಲಿರುವ ತಾಂತ್ರಿಕ ಶೈಲಿಯ ಕೆತ್ತನೆಗಳು ಇದರ ಐತಿಹಾಸಿಕ ರಹಸ್ಯವನ್ನು ಸಾರುತ್ತವೆ.

ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುವ ಶಿವಲಿಂಗ ಮತ್ತು ನಿಂತಿರುವ ನಂದಿ!

ಈ ಮಂದಿರದಲ್ಲಿರುವ ನರ್ಮದೇಶ್ವರ ಮಹಾದೇವನ ಶಿವಲಿಂಗವು ಅತ್ಯಂತ ಸುಂದರವಾದ ಅಮೃತಶಿಲೆಯ ಎತ್ತರದ ಬಂಡೆಯ ಮೇಲಿದೆ. ನರ್ಮದಾ ನದಿಯಿಂದ ತರಲಾದ ಈ ಅಪರೂಪದ ಶಿವಲಿಂಗವು ಹಗಲಿನ ಬೇರೆ ಬೇರೆ ಅವಧಿಗಳಲ್ಲಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂಬುದು ಇಲ್ಲಿನ ದೊಡ್ಡ ಪವಾಡ! ಅಷ್ಟೇ ಅಲ್ಲ, ಸಾಮಾನ್ಯವಾಗಿ ಜಗತ್ತಿನ ಎಲ್ಲಾ ಶಿವ ದೇವಾಲಯಗಳಲ್ಲೂ ನಂದಿ ಕುಳಿತಿರುವ ಭಂಗಿಯಲ್ಲಿರುತ್ತಾನೆ. ಆದರೆ, ಇಲ್ಲಿ ಮಾತ್ರ ನಂದಿಯ ವಿಗ್ರಹವು ನಿಂತಿರುವ ಭಂಗಿಯಲ್ಲಿದೆ. ಇಂತಹ ಅಪರೂಪದ ದೃಶ್ಯ ಭಾರತದಲ್ಲಿ ಬೇರೆಲ್ಲೂ ನೋಡಲು ಸಿಗುವುದಿಲ್ಲ. ಹಿಂದೆ ಸೂರ್ಯನ ಬೆಳಕಿಗೆ ತಕ್ಕಂತೆ ಸ್ವಯಂಚಾಲಿತವಾಗಿ ತಿರುಗುತ್ತಿದ್ದ ದೇವಾಲಯದ ಮೇಲಿನ ಛತ್ರಿ ಈಗ ಕಾಲಗರ್ಭದಲ್ಲಿ ಹಾಳಾಗಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ರಾಜನ ಭವಿಷ್ಯ ಬದಲಿಸಿದ ಕಪ್ಪೆ:

200 ವರ್ಷಗಳ ಇತಿಹಾಸಈ ವಿಶಿಷ್ಟ ತಾಂತ್ರಿಕ ದೇವಾಲಯಕ್ಕೆ ಸುಮಾರು 200 ವರ್ಷಗಳ ಸುದೀರ್ಘ ಇತಿಹಾಸವಿದೆ. 11 ನೇ ಶತಮಾನದಿಂದ 19 ನೇ ಶತಮಾನದವರೆಗೆ ಈ ಪ್ರದೇಶವನ್ನು ಚೌಹಾಣ್ ವಂಶದ ರಾಜರು ಆಳುತ್ತಿದ್ದರು. ಸ್ಥಳೀಯ ನಂಬಿಕೆಗಳ ಪ್ರಕಾರ, ಒಮ್ಮೆ ಈ ಭಾಗದಲ್ಲಿ ಭೀಕರ ಬರಗಾಲ ಉಂಟಾದಾಗ  ಸಂಸ್ಥಾನದ ರಾಜ ಬಖತ್ ಸಿಂಗ್ ಅವರಿಗೆ ದೈವಿಕ ಕಪ್ಪೆಯೊಂದು ಆಶೀರ್ವಾದ ನೀಡಿತು. ಅದಾದ ಬಳಿಕ ರಾಜನ ಭವಿಷ್ಯವೇ ಬದಲಾಗಿ, ಇಡೀ ರಾಜ್ಯದಲ್ಲಿ ಸಮೃದ್ಧಿ ನೆಲೆಸಿತು. ತಂತ್ರ ಶಾಸ್ತ್ರದಲ್ಲಿ ಕಪ್ಪೆಯನ್ನು ಅದೃಷ್ಟ, ಸಂತಾನೋತ್ಪತ್ತಿ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸುವುದರಿಂದ, ಆ ದೈವಿಕ ಕಪ್ಪೆಯ ಗೌರವಾರ್ಥವಾಗಿ ರಾಜನು ಈ ಮಂದಿರವನ್ನು ನಿರ್ಮಿಸಿದನು.

ಶಿವರಾತ್ರಿ ಮತ್ತು ದೀಪಾವಳಿಯಂದು ವಿಶೇಷ ಪೂಜೆ:

ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತ ಮಾನ್ಯತೆ ಪಡೆದಿರುವ ಈ ದೇವಾಲಯದಲ್ಲಿ ಮಹಾ ಶಿವರಾತ್ರಿಯಂದು ಭಾರಿ ಉತ್ಸವ ನಡೆಯುತ್ತದೆ. ಇದರೊಂದಿಗೆ, ದೀಪಾವಳಿಯ ಹಬ್ಬದ ದಿನದಂದು ಇಲ್ಲಿ ವಿಶೇಷ ತಾಂತ್ರಿಕ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಕಪ್ಪೆಯ ಬೆನ್ನಿನ ಮೇಲಿರುವ ಶಿವನ ದರ್ಶನ ಪಡೆದರೆ ಜೀವನದ ಎಲ್ಲಾ ಕಷ್ಟಗಳು ದೂರವಾಗಿ, ಸಂಪತ್ತು ಮತ್ತು ಸಂತಾನ ಭಾಗ್ಯ ಸಿದ್ಧಿಸುತ್ತದೆ ಎಂಬುದು ಭಕ್ತರ ದೃಢವಾದ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *