ಟೋಂಕ್, ಜುಲೈ 21: ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿದ ಚಿರತೆ(Leopard)ಯೊಂದು ಮೂವರ ಮೇಲೆ ದಾಳಿ ನಡೆಸಿ, ಮದ್ಯದಂಗಡಿಯೊಂದರ ಒಳಗಡೆ ಆಶ್ರಯ ಪಡೆದ ಆತಂಕಕಾರಿ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯ ತೋಡರೈಸಿಂಗ್ ಪಟ್ಟಣದಲ್ಲಿ ನಡೆದಿದೆ. ಸುಮಾರು 5 ಗಂಟೆಗಳ ಕಾಲ ನಡೆದ ಸುದೀರ್ಘ ಕಾರ್ಯಾಚರಣೆಯ ನಂತರ ಅರಣ್ಯಾಧಿಕಾರಿಗಳು ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಸೋಮವಾರ ಬೆಳಗ್ಗೆ 8.45 ರ ಸುಮಾರಿಗೆ ತೋಡರೈಸಿಂಗ್ ಪಟ್ಟಣದ ಸಮೀಪದ ಪೊದೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ವಿಷಯ ತಿಳಿದು ಸ್ಥಳವನ್ನು ಪರಿಶೀಲಿಸಲು ಬಂದ ಅರಣ್ಯ ಇಲಾಖೆಯ ಸ್ವಯಂಸೇವಕ ರಾಕೇಶ್ ಮಾಲಿ ಅವರ ಮೇಲೆ ಚಿರತೆ ತಕ್ಷಣವೇ ಎರಗಿ ಆತನ ಕಾಲಿಗೆ ಗಾಯಗೊಳಿಸಿತು. ಬಯಬೀತಗೊಂಡ ಚಿರತೆ ಅಲ್ಲಿಂದ ಸುಮಾರು 400 ಮೀಟರ್ ದೂರದಲ್ಲಿದ್ದ ಜನನಿಬಿಡ ಮಾರುಕಟ್ಟೆಗೆ ಓಡಿ ಬಂದಿದೆ.
ಮಾರುಕಟ್ಟೆಯಲ್ಲಿದ್ದ ‘ವೈನ್ ಶಾಪ್’ ಹೊರಗೆ ಕುಳಿತಿದ್ದ ಫತೇಹ್ ಲಾಲ್ ಕೋಲಿ ಅವರ ಮೇಲೆ ದಾಳಿ ಮಾಡಿದ ಚಿರತೆ, ನೇರವಾಗಿ ಮದ್ಯದಂಗಡಿಯೊಳಗೆ ನುಗ್ಗಿತು. ಅಂಗಡಿಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರ ಮೂಗು ಮತ್ತು ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿತು. ಸಂಜಯ್ ಹೇಗೋ ಅಂಗಡಿಯಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡರು.
ಮತ್ತಷ್ಟು ಓದಿ: Leopard In Bengaluru: 5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಚಿರತೆ ಅಂಗಡಿಯೊಳಗೆ ನುಗ್ಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಸ್ಥಳೀಯ ನಿವಾಸಿಗಳು ಹೊರಗಿನಿಂದ ಶಟರ್ ಅನ್ನು ತಕ್ಷಣವೇ ಕೆಳಗೆ ಎಳೆದು, ಪ್ರಾಣಿ ಹೊರಬರದಂತೆ ಬಂದ್ ಮಾಡಿದ್ದರು. ಸುದ್ದಿ ತಿಳಿದ ತಕ್ಷಣ ಟೋಂಕ್ ಅರಣ್ಯಾಧಿಕಾರಿಗಳು ಹಾಗೂ ಜೈಪುರ ಮೃಗಾಲಯದ ವಿಶೇಷ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿತು.
ಗಾಯಗೊಂಡ ಮೂವರನ್ನೂ ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಸಂಜಯ್ ಮತ್ತು ಫತೇಹ್ ಅವರನ್ನು ಉನ್ನತ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ. ವೈದ್ಯರ ತಂಡವು ಮದ್ಯದಂಗಡಿಯ ಶಟರ್ ಅಲ್ಪಪ್ರಮಾಣದಲ್ಲಿ ತೆರೆದು ಚಿರತೆಗೆ ನಿದ್ರಾಜನಕ ಮದ್ದು ನೀಡುವಲ್ಲಿ ಯಶಸ್ವಿಯಾಯಿತು. ಸುಮಾರು 5 ಗಂಟೆಗಳ ಸುದೀರ್ಘ ಪ್ರಯತ್ನದ ನಂತರ ಪ್ರಜ್ಞೆ ತಪ್ಪಿದ ಗಂಡು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.
ವಿಡಿಯೋ
🚨 SHOCKING INCIDENT IN RAJASTHAN
A wild leopard strayed from nearby hills into Todaraisingh town (Tonk) and charged straight inside a liquor shop near SBI Chauraha!
The big cat went on a rampage—smashing bottles and attacking the salesman, leaving him with injuries to his… pic.twitter.com/EiAfd9OyAi
— Kailash Vashi (@KailashVashi) July 20, 2026
ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಪಶುವೈದ್ಯಾಧಿಕಾರಿ ಡಾ.ಅಶೋಕ್ ತನ್ವರ್ ಮಾತನಾಡಿ, ನನ್ನ ವೃತ್ತಿಜೀವನದಲ್ಲಿ 60 ಕ್ಕೂ ಹೆಚ್ಚು ವನ್ಯಜೀವಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದೇನೆ. ಆದರೆ, ಮದ್ಯದಂಗಡಿಯೊಳಗಿನಿಂದ ಚಿರತೆಯನ್ನು ರಕ್ಷಿಸಿದ್ದು ಇದೇ ಮೊದಲು ಎಂದು ವಿವರಿಸಿದ್ದಾರೆ.
ತೋಡರೈಸಿಂಗ್ ಸುತ್ತಮುತ್ತ ದಟ್ಟ ಅರಣ್ಯವಿದ್ದು, ಆಹಾರ ಅರಸಿ ಅಥವಾ ದಾರಿ ತಪ್ಪಿ ಚಿರತೆ ನಗರ ಪ್ರದೇಶಕ್ಕೆ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ಮುಗಿಯುವವರೆಗೆ ಪೊಲೀಸರು ಸ್ಥಳದಲ್ಲಿ ಭಾರಿ ಜನಸಮೂಹವನ್ನು ನಿಯಂತ್ರಿಸಿ ಭದ್ರತೆ ಒದಗಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ