ವಾಷಿಂಗ್ಟನ್, ಜುಲೈ 22: ಅಮೆರಿಕ ಹಾಗೂ ಇರಾನ್(Iran) ನಡುವಿನ ಸಂಘರ್ಷವು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಇರಾನ್‌ನ ಅಧಿಕಾರಿಗಳು ಅಮೆರಿಕದೊಂದಿಗೆ ತೆರೆಮರೆಯ ಮಾತುಕತೆ ನಡೆಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸಿರುವ ಟ್ರಂಪ್ ಅರ್ಥಪೂರ್ಣ ಚರ್ಚೆಗೆ ಇರಾನ್ ಸಿದ್ಧವಾಗುವವರೆಗೆ ನಮಗೆ ಅವರೊಂದಿಗೆ ಮಾತುಕತೆ ನಡೆಸಲು ಯಾವುದೇ ಆಸಕ್ತಿ ಇಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಶ್ವೇತಭವನದಲ್ಲಿ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಮಾತುಕತೆ ನಡೆಸಲು ಉತ್ಸುಕವಾಗಿದೆ ಆದರೆ ಅಮೆರಿಕ ಯಾವುದೇ ತರಾತುರಿಯ ಭೇಟಿಗೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ. ರಾಜತಾಂತ್ರಿಕ ಮಾತುಕತೆಗಳ ಮಾತು ಒಂದೆಡೆಯಿದ್ದರೆ, ಮತ್ತೊಂದೆಡೆ ಅಮೆರಿಕ ಸೇನೆಯು ಇರಾನ್ ಮೇಲಿನ ಸೈನಿಕ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಹಾರ್ಮುಜ್ ಜಲಸಂಧಿ ಭದ್ರತೆ: ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಮಾಹಿತಿಯಂತೆ, ಅಮೆರಿಕನ್ ಪಡೆಗಳು ಸತತ 11 ನೇ ರಾತ್ರಿಯೂ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಭಾರಿ ದಾಳಿ ನಡೆಸಿದೆ. ಜಾಗತಿಕ ಇಂಧನ ಮತ್ತು ತೈಲ ಸಾಗಣೆಯ ಪ್ರಮುಖ ಜಲಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ವಾಣಿಜ್ಯ ಹಡಗುಗಳಿಗೆ ಇರಾನ್‌ನಿಂದ ಎದುರಾಗುತ್ತಿರುವ ಬೆದರಿಕೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಈ ದಾಳಿಗಳನ್ನು ನಡೆಸಲಾಗುತ್ತಿದೆ.
ಮತ್ತಷ್ಟು ಓದಿ: ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಅಮೆರಿಕದ ನಿರಂತರ ದಾಳಿ ಮತ್ತು ಬೆದರಿಕೆಗಳ ನಡುವೆಯೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ತಮ್ಮ ದೇಶದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ರಾಷ್ಟ್ರೀಯ ಕೈಗಾರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, “ನಮ್ಮ ದೇಶದ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರೊಂದಿಗೆ ನಮ್ಮ ಸಂವಹನ ಪ್ರತಿದಿನ ಹೆಚ್ಚುತ್ತಿದೆ. ಅವರ ಮಾರ್ಗದರ್ಶನ ಮತ್ತು ದೇಶದ ಯುವಜನರ ಬಲದೊಂದಿಗೆ ನಾವು ಅಮೆರಿಕದ ವಿರುದ್ಧದ ಈ ಹೋರಾಟವನ್ನು ಬಲವಾಗಿ ಮುಂದುವರಿಸುತ್ತೇವೆ” ಎಂದು ಘೋಷಿಸಿದ್ದಾರೆ.
ಯುದ್ಧಕ್ಕೆ ಕಳೆದೆರಡು ತಿಂಗಳಲ್ಲಿ 37.5 ಬಿಲಿಯನ್ ಡಾಲರ್ ವೆಚ್ಚ
ಯುದ್ಧದ ಅಂಗಳದಲ್ಲಿ ಕೇವಲ ಜೀವಹಾನಿ ಮಾತ್ರವಲ್ಲದೆ, ಆರ್ಥಿಕತೆಯ ಮೇಲೆಯೂ ಭಾರಿ ಪ್ರಭಾವ ಬೀರುತ್ತಿದೆ. ಈ ಯುದ್ಧಕ್ಕಾಗಿ ಅಮೆರಿಕ ಸರ್ಕಾರಕ್ಕೆ ಇದುವರೆಗೆ ಬೃಹತ್ ಪ್ರಮಾಣದ 37.5 ಶತಕೋಟಿ ಯುಎಸ್ ಡಾಲರ್ ವೆಚ್ಚವಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕಾಂಗ್ರೆಸ್‌ಗೆ ತಿಳಿಸಿದ್ದಾರೆ. ಮೇ ತಿಂಗಳ ಮಧ್ಯಭಾಗದಲ್ಲಿದ್ದ ಅಂದಾಜಿಗಿಂತ ಇದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಮಿಲಿಟರಿ ಕೊರತೆಗಳನ್ನು ನೀಗಿಸಲು ಪೆಂಟಗನ್ ತಕ್ಷಣವೇ 67 ಶತಕೋಟಿ ಡಾಲರ್ ತುರ್ತು ಅನುದಾನಕ್ಕೆ ಮನವಿ ಮಾಡಿದೆ. ವಿಶ್ವದ ಅತಿ ದೊಡ್ಡ ಜಲಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಸಮರ ಕಾದಿರುವುದರಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದ್ದು, ಶೀಘ್ರವೇ ಯುದ್ಧ ಕೊನೆಗೊಳ್ಳದಿದ್ದರೆ ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಭೀತಿ ಎದುರಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ